ಮುಂಬೈನಲ್ಲಿ ಮಳೆಯಲ್ಲಿ ಸಿಲುಕಿಕೊಂಡ ಮೊನೊ ರೈಲು – ಗ್ರೇಟ್ ಎಸ್ಕೇಪ್ ಆದ 782 ಪ್ರಯಾಣಿಕರು

ಮುಂಬೈನಲ್ಲಿ ಬಿಟ್ಟುಬಿಡದೇ ಭಾರಿ ಮಳೆ ಸುರಿಯುತ್ತಿದ್ದು ನಿನ್ನ ಸಂಜೆ ವೇಳೆಗೆ ಎರಡು ಮೊನೊ ರೈಲುಗಳು ಹಳಿಯ ಮೇಲೆ ಸಿಲುಕಿಹಾಕಿಕೊಂಡು 782 ಪ್ರಯಾಣಿಕರು ಪರದಾಡಿದ್ರು. 12ಕ್ಕೂ ಹೆಚ್ಚು ಪ್ರಯಾಣಿಕರು ಉಸಿರುಕಟ್ಟುವಿಕೆಯ ಬಗ್ಗೆ ದೂರು ನೀಡಿದ್ದು, ವಿದ್ಯುತ್ ವಿಲ್ಲದೇ AC ನಿಂತುಹೋದ ಕಾರಣ ಕೆಲವರು ಮೂರ್ಛೆ ಹೋಗಿದ್ದರು. ಅದರಲ್ಲಿ ಒಬ್ಬರು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮಳೆಯಿಂದಾಗಿ ರೈಲು ಸೇವೆಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ಬೇರೆ ದಾರಿಯಿಲ್ಲದೇ ಮೊನೊರೈಲು ಹತ್ತಿದ್ದರು. ಆದರೆ, ಮೊನೊರೈಲ್ ಇಷ್ಟು ದೊಡ್ಡ ಪ್ರಮಾಣದ ಜನಸಂದಣಿಯನ್ನು ನಿಭಾಯಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಜನದಟ್ಟಣೆಯೇ ವಿದ್ಯುತ್ ನಿಲ್ಲೋಕೆ ಕಾರಣ ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಮೈಸೂರು ಕಾಲೋನಿ ಮತ್ತು ಭಕ್ತಿ ಪಾರ್ಕ್ ನಡುವೆ ಸಿಲುಕಿಕೊಂಡಿದ್ದ ಮೊನೊರೈಲ್ ನಿಂದ ಸುಮಾರು 582 ಪ್ರಯಾಣಿಕರನ್ನು ರಕ್ಷಿಸಲಾಯಿತು. ರೈಲನ್ನು ಹಿಂದಕ್ಕೆ ಎಳೆಯಲು ಸಾಧ್ಯವಾಗದಿದ್ದರಿಂದ ರಕ್ಷಣೆಗೆ ತುಸು ಅಡ್ಡಿಯಾಗಿತ್ತು. ಮತ್ತೊಂದು ಮೊನೊ ರೈಲಿನಿಂದ 200 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದ್ದು, ಅದನ್ನು ಹತ್ತಿರದ ವಡಾಲಾ ನಿಲ್ದಾಣಕ್ಕೆ ಯಶಸ್ವಿಯಾಗಿ ಎಳೆದು ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಕಾಲೋನಿ ಮತ್ತು ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಸಂಜೆ 6.15 ರ ಸುಮಾರಿಗೆ ಸಿಲುಕಿಕೊಂಡ ಮೊನೊರೈಲ್ ರೈಲಿನಲ್ಲಿ ಭೀತಿ ಆವರಿಸಿತ್ತು. ಹದಿನೈದು ಪ್ರಯಾಣಿಕರು ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದರು. ಅವರಲ್ಲಿ 14 ಮಂದಿಯನ್ನು ಸ್ಥಳದಲ್ಲೇ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದರೂ, ಒಬ್ಬ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಳೆಯಿಂದಾಗಿ ವಿವಿಧ ನಿಲ್ದಾಣಗಳಲ್ಲಿ ಜನರು ಸಿಲುಕಿಕೊಂಡಿದ್ದರು. ಮೊನೊರೈಲ್ ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಹತ್ತಿದರು ಎಂದು ಎಂಎಂಆರ್ಡಿಎ ಜಂಟಿ ಆಯುಕ್ತ ಆಸ್ತಿಕ್ ಕುಮಾರ್ ಪಾಂಡೆ ಹೇಳಿದ್ದಾರೆ.

ನೋಡಿರಿ

