ಬರೋಬ್ಬರಿ 6,500 ಶ್ರೀಮಂತರನ್ನು ಕಳೆದುಕೊಳ್ಳಲಿದೆ ಭಾರತ! – ಉದ್ಯಮಿಗಳು ವಿದೇಶಗಳತ್ತ ಮುಖ ಮಾಡಿದ್ದೇಕೆ?  

ಬರೋಬ್ಬರಿ 6,500 ಶ್ರೀಮಂತರನ್ನು ಕಳೆದುಕೊಳ್ಳಲಿದೆ ಭಾರತ! – ಉದ್ಯಮಿಗಳು ವಿದೇಶಗಳತ್ತ ಮುಖ ಮಾಡಿದ್ದೇಕೆ?  

ಜಗತ್ತಿನಾದ್ಯಂತ ಅದೆಷ್ಟೋ ಮಂದಿ ಶ್ರೀಮಂತರು ಇದ್ದಾರೆ. ಜೀವನಕ್ಕಾಗಿ ಬಿಸ್‌ನೆಸ್‌ ಆರಂಭಿಸಿ ಹಲವಾರು ಜನರಿಗೆ ಜೀವನ ಕಟ್ಟಿಕೊಳ್ಳಲು ಹಲವು ಉದ್ಯಮಿಗಳು ನೆರವಾಗಿದ್ದಾರೆ. ಇದೀಗ ಶ್ರೀಮಂತರ ಬಗ್ಗೆ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ. ಕಳೆದ ವರ್ಷ 7,500 ಕೋಟ್ಯಾಧಿಪತಿಗಳನ್ನು ಕಳೆದುಕೊಂಡಿದ್ದ ಭಾರತ ಈ ವರ್ಷ ಮತ್ತಷ್ಟು ಶ್ರೀಮಂತರನ್ನು ಕಳೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಶ್ರೀಮಂತರು ಸಾಮಾನ್ಯವಾಗಿ ಒಂದು ಸ್ಥಳಕ್ಕೆ ಸೀಮಿತರಾಗುವವರಲ್ಲ. ತಾವಿರುವ ಪ್ರದೇಶದ ಬಗ್ಗೆ ನಂಬಿಕೆ ಹೋದರೆ ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹೀಗಾಗಿ, ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಅಲ್ಲಿನ ಶ್ರೀಮಂತರ ವಲಸೆ ಕನ್ನಡಿ ಹಿಡಿಯುತ್ತದೆ ಎಂದು ಹೇಳಬಹುದು. ಕಳೆದ ವರ್ಷ ಬರೋಬ್ಬರಿ 7,500 ಕೋಟ್ಯಾಧಿಪತಿಗಳು ಭಾರತ ಬಿಟ್ಟು ಬೇರೆ ರಾಷ್ಟ್ರಗಳಿಗೆ ವಲಸೆ ಹೋಗಿದ್ದರು. ಈ ವರ್ಷ ಮತ್ತೆ ಬರೋಬ್ಬರಿ 6,500 ಶ್ರೀಮಂತರು ಭಾರತ ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚು ವಲಸೆ ಹೋಗುತ್ತಿರುವುದು ಯಾವ ದೇಶದಿಂದ?

ಪ್ರತಿ ವರ್ಷವೂ ಉದ್ಯಮಿಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಹೋಗುವುದು ಸರ್ವೇ ಸಾಮಾನ್ಯ. ಆದರೆ ಕೆಲವು ದೇಶಗಳಲ್ಲಿ ಶ್ರೀಮಂತರ ವಲಸೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಅವುಗಳಲ್ಲಿ ಚೀನಾ ಕೂಡ ಒಂದು. ಡ್ರ್ಯಾಗನ್‌ ರಾಷ್ಟ್ರದಲ್ಲಿ ಈ ವರ್ಷವೂ ಅತಿಹೆಚ್ಚು ಶ್ರೀಮಂತರು ದೇಶ ಬಿಟ್ಟು ಹೋಗುತ್ತಿದ್ದಾರೆ. ಬರೋಬ್ಬರಿ 13,500 ಮಂದಿ ಕೋಟ್ಯಧಿಪತಿಗಳು ಈ ವರ್ಷ ಚೀನಾದಿಂದ ನಿರ್ಗಮಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚೀನಾದ 10,800 ಮಂದಿ ಕೋಟ್ಯಧಿಪತಿಗಳು ದೇಶ ಬಿಟ್ಟು ಹೋಗಿದ್ದರು. ಈ ಸಂಖ್ಯೆ ಈ ವರ್ಷ ಇನ್ನೂ ಹೆಚ್ಚಾಗಿದೆ.

ಇದನ್ನೂ ಓದಿ:  http://2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ – ಅಮೆರಿಕ ಫಸ್ಟ್.. ಭಾರತಕ್ಕೆ ಎಷ್ಟನೇ ಸ್ಥಾನ?

ಚೀನಾ ಮತ್ತು ಭಾರತದಿಂದ ಮಾತ್ರವಲ್ಲ, ಬ್ರಿಟನ್​ನಂಥ ಸಿರಿವಂತ ದೇಶದಿಂದಲೂ ಸಾಕಷ್ಟು ಶ್ರೀಮಂತರ ಹೊರಗೆ ವಲಸೆ ಹೋಗುತ್ತಿದ್ದಾರೆ. ಇದು ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಪ್ರೈವೇಟ್ ವೆಲ್ತ್ ಮೈಗ್ರೇಶನ್ ರಿಪೋರ್ಟ್​ನಲ್ಲಿ ಬಂದಿರುವ ವಿಚಾರ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶ್ರೀಮಂತರು ಹೊರಹೋಗುತ್ತಿರುವ ದೇಶಗಳಲ್ಲಿ ಚೀನಾ, ಬ್ರಿಟನ್, ಬ್ರೆಜಿಲ್, ಹಾಂಕಾಂಗ್, ಸೌತ್ ಕೊರಿಯಅ, ಮೆಕ್ಸಿಕೋ, ಸೌತ್ ಆಫ್ರಿಕಾ, ಜಪಾನ್, ವಿಯೆಟ್ನಾಂ, ನೈಜೀರಿಯಾ ಇವೆ.

ಶ್ರೀಮಂತರು ಹೋಗುತ್ತಿರುವುದು ಎಲ್ಲಿಗೆ?

ಆಸ್ಟ್ರೇಲಿಯಾ, ಯುಎಇ, ಸಿಂಗಾಪುರ, ಅಮೆರಿಕ, ಸ್ವಿಟ್ಜರ್​ಲ್ಯಾಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್, ನ್ಯೂಜಿಲ್ಯಾಂಡ್ ಮತ್ತು ಇಟಲಿ ದೇಶಗಳಿಗೆ ವಲಸೆ ಹೋಗುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಮಿಲಿಯನೇರ್​ಗಳಿಗೆ 2023ರಲ್ಲಿ ಆಸ್ಟ್ರೇಲಿಯಾ ಫೇವರಿಟ್ ಎನಿಸಿದೆ. ಯುಎಇಗೂ ಶ್ರೀಮಂತರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಬ್ರಿಟನ್, ರಷ್ಯಾ, ಪಾಕಿಸ್ತಾನ್, ಟರ್ಕಿ, ಚೀನಾ ಮೊದಲಾದ ದೇಶಗಳ ಶ್ರೀಮಂತರಿಗೆ ವಲಸೆ ಹೋಗಲು ಯುಎಇ ಫೇವರಿಟ್ ಎನಿಸಿದೆ.

ಶ್ರೀಮಂತರು ಯಾಕೆ ದೇಶ ಬಿಟ್ಟು ಹೋಗುತ್ತಾರೆ?

ಇನ್ನು ಶ್ರೀಮಂತರು ಯಾಕೆ ದೇಶ ಬಿಟ್ಟು ವಲಸೆ ಹೋಗುತ್ತಾರೆ ಎಂಬ ಕಾರಣ ಕೂಡ ಬಹಿರಂಗವಾಗಿದೆ. ರಾಜಕೀಯ ಸ್ಥಿರತೆ, ಕಡಿಮೆ ತೆರಿಗೆ, ವೈಯಕ್ತಿಕ ಸ್ವಾತಂತ್ರ್ಯ ಈ ಅಂಶಗಳು ಕೋಟ್ಯಧಿಪತಿಗಳ ಇರುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಆದರೆ, ಈಗೀಗ ಜೀವನ ಗುಣಮಟ್ಟ, ಮಕ್ಕಳ ಪಾಲನೆ ಪೋಷಣೆಗೆ ಬೇಕಾದ ವಾತಾವರಣ, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಅನುಕೂಲ ಹವಾಮಾನ ಇರುವ ಸ್ಥಳ, ಉತ್ತಮ ಕಾನೂನು ವ್ಯವಸ್ಥೆ ಇವೆಲ್ಲವನ್ನೂ ಕೋಟ್ಯಧಿಪತಿಗಳು ಪರಿಗಣಿಸುತ್ತಾರೆ. ಮುಂದಿನ ತಲೆಮಾರುಗಳವರೆಗೆ ತಮ್ಮ ಸಂಪತ್ತು ನಶಿಸದೇ ಸುರಕ್ಷಿತವಾಗಿರಬೇಕೆಂದು ಅವರು ಬಯಸುತ್ತಾರೆ. ಹೀಗಾಗಿ ಅನೇಕ ಶ್ರೀಮಂತರು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ಆಸ್ಟ್ರೇಲಿಯಾ ಮೇಲೆ ಯಾಕೆ ಜಾಸ್ತಿ ಪ್ರೀತಿ?

ಆಸ್ಟ್ರೇಲಿಯಾದ ಜೀವನ ಗುಣಮಟ್ಟ, ಅಲ್ಲಿನ ಹವಾಮಾನ, ಭದ್ರತೆ, ಶಿಕ್ಷಣ, ತೆರಿಗೆ ಇತ್ಯಾದಿ ಅಂಶಗಳು ಶ್ರೀಮಂತರನ್ನು ಸೆಳೆಯುತ್ತಿದೆ. ಶ್ರೀಮಂತ ದೇಶಗಳಿಂದಲೂ ಕೋಟ್ಯಧಿಪತಿಗಳು ಆಸ್ಟ್ರೇಲಿಯಾಗೆ ಹೋಗಿ ನೆಲಸುತ್ತಿದ್ದಾರೆ. ಇನ್ನು, ಯುಎಇ ದೇಶ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ತೆರಿಗೆಯೂ ಬಹಳ ಕಡಿಮೆ ಇದೆ. ಹೀಗಾಗಿ, ಬಹಳಷ್ಟು ಶ್ರೀಮಂತರು ದುಬೈ, ಅಬುಧಾಬಿಗಳತ್ತ ಮುಖಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Shwetha M