ಸಚಿವ ಸ್ಥಾನ ಕೈತಪ್ಪಿದ ಶಾಸಕರ ಆಕ್ರೋಶ – ಸಿದ್ದರಾಮಯ್ಯ ವಿರುದ್ಧ ಸಿಟ್ಟಾಗಿದ್ದೇಕೆ?

ಸಚಿವ ಸ್ಥಾನ ಕೈತಪ್ಪಿದ ಶಾಸಕರ ಆಕ್ರೋಶ – ಸಿದ್ದರಾಮಯ್ಯ ವಿರುದ್ಧ ಸಿಟ್ಟಾಗಿದ್ದೇಕೆ?

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೇ ಮಂತ್ರಿ ಸ್ಥಾನ ಕೈ ತಪ್ಪಿದ ಶಾಸಕರ ಅಸಮಾಧಾನ ಭುಗಿಲೆದ್ದಿದೆ. ಮಂತ್ರಿಗಿರಿ ಸಿಗದ ಶಾಸಕರ ಬೆಂಬಲಿಗರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದಾಗಿ ತನ್ವೀರ್‌ ಸೇಠ್‌ ಬೆಂಬಲಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತನ್ವೀರ್‌ ಸೇಠ್‌ ಬದಲು ಎರಡನೇ ಪಟ್ಟಿಯಲ್ಲಿ ಬೀದರ್‌ ಶಾಸಕ ರಹೀಂ ಖಾನ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಿದ್ದರಾಮಯ್ಯ ಅವರ ಜೊತೆಗೆ ಉತ್ತಮ ಬಾಂಧವ್ಯ ಹೊಂದದೇ ಇರುವ ಕಾರಣದಿಂದಲೇ ತನ್ವೀರ್‌ ಸೇಠ್‌ ಅವರಿಗೆ ಮಂತ್ರಿಗಿರಿ ಕೈತಪ್ಪಿದೆ ಎಂಬ ಚರ್ಚೆ ಜೋರಾಗಿದೆ. ಮೈಸೂರು ಜಿಲ್ಲೆಯಲ್ಲಿ ಡಾ.ಹೆಚ್‌.ಸಿ.ಮಹದೇವಪ್ಪ ಹಾಗೂ ಪಿರಿಯಾಪಟ್ಟಣದ ಶಾಸಕ ಕೆ.ವೆಂಕಟೇಶ್‌ ಅವರಿಗೆ ಸಚಿವ ಸ್ಥಾನ ನೀಡಿರುವುದರಿಂದ ತನ್ವೀರ್‌ ಸೇಠ್‌ ಅವರಿಗೆ ಮಂತ್ರಿಗಿರಿ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಕೊನೆಗೂ ಬಗೆಹರಿದ ಸಂಪುಟ ರಚನೆ ಬಿಕ್ಕಟ್ಟು –  24 ಶಾಸರಿಗೆ ಒಲಿದ ಮಂತಿಗಿರಿ!

ಇನ್ನು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಮದುರ್ಗದ ಶಾಸಕ ಅಶೋಕ್‌ ಪಟ್ಟಣ್‌ ಅವರಿಗೂ ಮಂತ್ರಿಗಿರಿ ಸಿಗದೇ ಇರುವ ಕಾರಣಕ್ಕೆ ಬೇಸರ ಹೊರಹಾಕಿದ್ದಾರೆ. ‘ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ದುಡಿದಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿರುವುದರಿಂದ ಸಹಜವಾಗಿಯೇ ಕ್ಷೇತ್ರದ ಜನರು ಈ ಬಾರಿ ನಾನು ಮಂತ್ರಿಯಾಗುತ್ತೇನೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು’ ಎಂದು  ಹೇಳಿಕೊಂಡಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಅಥಣಿಯಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ ನಂತರ ಕಾಂಗ್ರೆಸ್‌ ಗೆ ಸೇರ್ಪಡೆಯಾಗಿರುವ ಲಕ್ಷ್ಮಣ್‌ ಸವದಿ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದಾಗಿ ಸವದಿ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸವದಿಯವರು ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರಣದಿಂದಲೇ ಬೆಳಗಾವಿಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಗಿತ್ತು. ಹಾಗಿದ್ದರೂ ಲಕ್ಷ್ಮಣ ಸವದಿಯವರಿಗೆ ಕೆಲವರ ಷಡ್ಯಂತ್ರದಿಂದ ಸಚಿವ ಸ್ಥಾನ ಕೈತಪ್ಪಿ ಹೋಗಿದೆ ಎಂದು ದೂರಿದ್ದಾರೆ.

ಹೀಗೆ ಸಚಿವ ಸ್ಥಾನ ಕೈತಪ್ಪಿದ ಶಾಸಕರು ಹಾಗೂ ಅವರ ಬೆಂಬಲಿಗರು ಈಗ ಬೇಸರ ಹೊರಹಾಕುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ನಂತರ ಅಸಮಾಧಾನಗೊಂಡಿರುವ ಶಾಸಕರಿಗೆ ಬೇರೆ ಜವಾಬ್ದಾರಿಗಳನ್ನು ಕೊಟ್ಟು ಸಮಾಧಾನಪಡಿಸುವ ಸಾಧ್ಯತೆಗಳಿವೆ.

suddiyaana