‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!

‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!

ಭಾರತದ ಚಿತ್ರರಂಗದ ಪಾಲಿಗೆ 2023 ಇತಿಹಾಸ ಸೃಷ್ಟಿಸಿದ ವರ್ಷ. ಯಾಕಂದ್ರೆ ವಿಶ್ವದ ಶ್ರೇಷ್ಠ ಆಸ್ಕರ್ ಅವಾರ್ಡ್ (Oscar Award) ಇದೇ ಮೊದಲ ಬಾರಿಗೆ ಲಭಿಸಿದೆ. ‘RRR’ ಚಿತ್ರಕ್ಕೆ ಆಸ್ಕರ್ ಮುಕುಟ ಲಭಿಸಿದ್ರೆ ​‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ  ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಅದ್ರಲ್ಲೂ ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನ ಮಹಿಳೆಯರೇ ಹೊತ್ತಿದ್ದು ವಿಶೇಷವಾಗಿತ್ತು. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ‘ದಿ ಎಲಿಫೆಂಟ್ ವಿಸ್ಪರರ್ಸ್’ 95 ನೇ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ

ಎರಡು ಆಸ್ಕರ್ ಪ್ರಶಸ್ತಿಗಳ ಮೂಲಕ ಭಾರತದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಂಧದ ಬಗ್ಗೆ ‘ದಿ ಎಲಿಫೆಂಟ್​ ವಿಸ್ಪರರ್ಸ್​’ (The Elephant Whisperers)ನಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮು ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಇವರಿಂದ ಆನೆಗಳಿಗೆ ಒಂದು ಕುಟುಂಬ ಸಿಗುತ್ತದೆ. ಈ ಕಿರುಚಿತ್ರ ಸಾಕಷ್ಟು ಭಾವನಾತ್ಮಕವಾಗಿದೆ.

ಇದನ್ನೂ ಓದಿ : ಇತಿಹಾಸ ಬರೆದ ನಾಟು ನಾಟು – ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಯ ಗರಿ

ತಮಿಳು ಭಾಷೆಯಲ್ಲಿರುವ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡಿದೆ. ಈ ಕಿರುಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಇದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಜೊತೆಗೆ ‘ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್’ ಫಿಲ್ಮ್’ ವಿಭಾಗದಲ್ಲಿ ‘ಹೌ ಡು ಯು ಮೆಷರ್‌ ಎ ಈಯರ್?’, ‘ಹಾಲ್‌ ಔಟ್’,  ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’, ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸಾಕ್ಷ್ಯಚಿತ್ರಗಳು ರೇಸ್​ನಲ್ಲಿ ಇದ್ದವು.

ಪ್ರಕೃತಿ ವಿಕೋಪ, ಕಾಡ್ಗಿಚ್ಚು ಉಂಟಾದಾಗ ಅನೇಕ ಪ್ರಾಣಿಗಳು ತಮ್ಮ ಮನೆ ಕಳೆದುಕೊಳ್ಳುತ್ತವೆ. ಆನೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಅವುಗಳಿಗೆ ಒಂದು ಮನೆಯ ಅವಶ್ಯಕತೆ ಇರುತ್ತದೆ. ಈ ರೀತಿಯ ವಿಚಾರಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಈ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದಾರೆ. 2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ ನಡೆದಿದೆ.

41 ನಿಮಿಷಗಳ ಸಾಕ್ಷ್ಯಚಿತ್ರ ಇದಾಗಿದ್ದು, ಇಡೀ ಕಿರುಚಿತ್ರ ಕಾಡು ಮತ್ತು ಕಾಡಿನ ಸುತ್ತಮುತ್ತಲು ನಡೆಯುತ್ತದೆ. ಆನೆಮರಿಯ ಕಥೆಯ ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಕಟ್ಟಿಕೊಡಲಾಗಿದೆ. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿರ್ದೇಶಕರು ಮೂಲತಃ ತಮಿಳುನಾಡಿನ ಊಟಿಯವರು. ಉತ್ತಮ ಫೋಟೋಗ್ರಾಫರ್ ಕೂಡ ಹೌದು. ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್ ಗಳಲ್ಲಿ ಕೆಲಸ ಮಾಡಿದ ಅನುಭವವೂ ಇವರದ್ದು.

suddiyaana