ವಿದ್ಯುತ್ ದರ ಏರಿಕೆಗೆ ವಿರೋಧ – ರಾಜ್ಯದ ಹಲವೆಡೆ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳ ಮಾಲೀಕರಿಂದ ಪ್ರತಿಭಟನೆ

ವಿದ್ಯುತ್ ದರ ಏರಿಕೆಗೆ ವಿರೋಧ – ರಾಜ್ಯದ ಹಲವೆಡೆ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳ ಮಾಲೀಕರಿಂದ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರ 200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ಘೋಷಣೆ ಬೆನ್ನಲ್ಲೇ ದಿಢೀರ್‌ ವಿದ್ಯುತ್‌ ದರ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ವ್ಯಾಪಾರಿಗಳು ಮತ್ತು ಸಣ್ಣ ಕೈಗಾರಿಕೆಗಳ ಮಾಲೀಕರು ಗುರುವಾರ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿದ್ದಾರೆ. ವಿದ್ಯುತ್‌ ದರ ಏರಿಕೆ ಕ್ರಮವನ್ನು ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಐದನೇ ದಿನವೂ ವಿಘ್ನ – ಸರ್ವರ್‌ ಸಮಸ್ಯೆಯಿಂದ ಸಿಬ್ಬಂದಿ ಸುಸ್ತು

ವಿದ್ಯುತ್ ದರ ಏರಿಕೆ ಖಂಡಿಸಿ ಬಳ್ಳಾರಿ, ವಿಜಯನಗರ ಬಂದ್​ಗೆ ಬಳ್ಳಾರಿಯ ಚೇಂಬರ್ ಆಫ್ ಕಾಮರ್ಸ್​ ಕರೆ ನೀಡಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ವರ್ತಕರು ಅಂಗಡಿಗಳನ್ನು ಬಂದ್​ ಮಾಡಿದ್ದಾರೆ. ವಿದ್ಯುತ್​ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಬಂದ್ ಹಿನ್ನೆಲೆ ಬಳ್ಳಾರಿ ನಗರದ ಬಹುತೇಕ ರಸ್ತೆಗಳು ಖಾಲಿ‌ ಖಾಲಿ ಹೊಡೆಯುತ್ತಿವೆ.

ಹುಬ್ಬಳ್ಳಿ ಮೂಲದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ‘ಬಂದ್’ಗೆ ಕರೆ ನೀಡಿದ ನಂತರ ಕೈಗಾರಿಕೋದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.  ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಬ್ಯಾನರ್, ಭಿತ್ತಿಪತ್ರ, ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದ್ದಾರೆ. ಬಳಿಕ ಸರ್ಕಾರವು ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ.

ಇನ್ನು ಬೆಳಗಾವಿಯಲ್ಲೂ ಬಂದ್‌ ಗೆ ಕರೆ ನೀಡಲಾಗಿತ್ತು. ಇಲ್ಲೂ ಕೂಡ  ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಹಾಗೂ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಮಾಲೀಕರು ಬ್ಯಾನರ್, ಫಲಕಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ್ದಾರೆ.

ಕೆಸಿಸಿಐ ಹಂಗಾಮಿ ಅಧ್ಯಕ್ಷ ಸಂದೀಪ್ ಬಿಡಸಾರಿಯಾ ಮಾತನಾಡಿ, ವಿದ್ಯುತ್ ದರ ಏರಿಕೆಯು ಶೇ 50 ರಿಂದ 70 ರಷ್ಟು ಹೆಚ್ಚಾಗಿದೆ. ಇದು ಸಣ್ಣ ಉದ್ಯಮಗಳ ಮೇಲೆ ಆಳವಾದ ಪರಿಣಾಮ ಬೀರಿದೆ. ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯಲ್ಲಿ ಪ್ರತಿಭಟನಾಕಾರರು, ದರ ಏರಿಕೆಯಿಂದಾಗಿ ಅನೇಕ ಕೈಗಾರಿಕೆಗಳು ನೆರೆಯ ರಾಜ್ಯಕ್ಕೆ ತೆರಳಲು ಯೋಜಿಸುತ್ತಿವೆ ಎಂದು ಆರೋಪಿಸಿದರು.

suddiyaana