ಹೇಗಿರುತ್ತೆ ಆಪರೇಷನ್ ಸಿಂಧೂರ್ 2.0? ಯುದ್ಧದ ಕನಸು ಕಾಣ್ತಿದ್ಯಾ ಪಾಕ್?
ಶತ್ರುದೇಶದ ಹಿಂದೆ ಯಾರಿದ್ದಾರೆ?

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ “ಆಪರೇಷನ್ ಸಿಂಧೂರ” ಕಾರ್ಯಾಚರಣೆ, ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಪ್ರವಾಸಿಗರರನ್ನ ಧರ್ಮ ಕೇಳಿ ಕೊಂದ ಭಯೋತ್ಪಾದಕರ ವಿರುದ್ಧ ಭಾರತದ ಆಕ್ರೋಶದ ಕಟ್ಟೆ ಒಡೆದಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿರುವ “ಆಪರೇಷನ್ ಸಿಂಧೂರ” ಕಾರ್ಯಾಚರಣೆ, ಪಾಕಿಸ್ತಾನದಲ್ಲಿ ಇನ್ನಿಲ್ಲದ ಆತಂಕವನ್ನು ಸೃಷ್ಟಿಸಿದೆ. ಆದರೆ ಈ ಭಯವನ್ನು ತೋರ್ಪಡಿಸಿಕೊಳ್ಳದಿರುವ ಅನಿವಾರ್ಯತೆಗೆ ಸಿಲುಕಿರುವ ಪಾಕಿಸ್ತಾನ, “ನಾವೂ ಯುದ್ಧಕ್ಕೆ ರೆಡಿ” ಎಂಬ ಸವಕಲು ಹೇಳಿಕೆಗಳನ್ನು ನೀಡುತ್ತಿದೆ. ಆದರೆ ಪಾಕಿಸ್ತಾನಕ್ಕೆ ನಿಜಕ್ಕೂ ಯುದ್ಧ ಮಾಡುವ ಸಾಮರ್ಥ್ಯ ಇಲ್ಲ ಆದ್ರೂ ಈ ದೇಶಕ್ಕೆ ಒಂದು ದೇಶದ ಸಪೋರ್ಟ್ ಇದೆ.
ದಿವಾಳಿಯಾಗಿರೋ ಪಾಕ್ ಆರ್ಥಿಕ ಸ್ಥಿತಿ
2023 ರಲ್ಲಿ ಪಾಕಿಸ್ತಾನ ದಿವಾಳಿಯಾಗುವ ಹಂತಕ್ಕೆ ತಲುಪಿತ್ತು. ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ನೆರವಿನಿಂದ ಅದು ಸರ್ವನಾಶದಿಂದ ಜಸ್ಟ್ ಎಸ್ಕೇಪ್ ಆಯ್ತು. ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೇ ಆಧಾರ. ಜೊತೆಗೆ ಅಮೆರಿಕ ಮತ್ತು ಚೀನಾ ಪಾಕಿಸ್ತಾಕ್ಕೆ ಒಂದಿಷ್ಟು ಬಿಕ್ಷೆ ಹಾಕುತ್ತವೆ. ಪಾಕಿಸ್ತಾನದ ಬಳಿ ಪ್ರಸ್ತುತವಾಗಿ ಸರಿಸುಮಾರು 16 ಬಿಲಿಯನ್ ಡಾಲರ್ ಫಾರಿನ್ ರಿಸರ್ವ್ ಇದೆ. ಅದರಲ್ಲಿ 11 ಬಿಲಿಯನ್ ಡಾಲರ್ ಬ್ಯಾಂಕುಗಳ ಬಳಿ ಇದೆ. ಇದೇ ಕಾರಣಕ್ಕೆ ಸಾಲಕ್ಕಾಗಿ ಸೌದಿ ಅರೇಬಿಯಾ ಮತ್ತಿತರ ಇಸ್ಲಾಮಿಕ್ ರಾಷ್ಟ್ರಗಳಿಗೆ ಪಾಕಿಸ್ತಾನ ಎಡತಾಕುತ್ತಿರುತ್ತದೆ. ಹೋದಲ್ಲಿ ಬಂದಲ್ಲಿ ಸಾಲ ಕೇಳುತ್ತಾ, ಆ ಸಾಲದಲ್ಲೇ ಜೀವನ ನಡೆಸುವ ರಾಷ್ಟ್ರ ಅಂದ್ರೆ ಅದು ಪಾಕಿಸ್ತಾನ. ಆದರೆ ಪಾಕಿಸ್ತಾನಕ್ಕೆ ಈ ರಾಷ್ಟ್ರಗಳು ಸುಖಾಸುಮ್ಮನೆ ಆರ್ಥಿಕ ನೆರವು ನೀಡುವುದಿಲ್ಲ. ಆರ್ಥಿಕ ನೆರವಿಗೆ ಪ್ರತಿಯಾಗಿ ಪಾಕಿಸ್ತಾನದಿಂದ ಕೆಲವು ಸಹಾಯಗಳನ್ನು ಈ ರಾಷ್ಟ್ರಗಳು ಬಯಸುತ್ತವೆ. ಉದಾಹರಣೆಗೆ ಅಮೆರಿಕಕ್ಕೆ ಅಫ್ಘಾನಿಸ್ತಾನದ ಬೆಳವಣಿಗೆಗಳ ಮೇಲೆ ಕಣ್ಣಿಡಲು ಪಾಕಿಸ್ತಾನದ ನೆರವು ಬೇಕು. ತಾಲಿಬಾನ್ ವಿರುದ್ಧದ ಸುದೀರ್ಘ ಸಮರದಲ್ಲಿ ಅಮೆರಿಕಕ್ಕೆ ಸಕಲ ನೆರವು ನೀಡಿದ್ದೇ ಪಾಕಿಸ್ತಾನ.
ಅದೇ ರೀತಿ ಚೀನಾ ಕೂಡ ಪಾಕಿಸ್ತಾನ ಕೇಳಿದಾಗಲೆಲ್ಲಾ ಹಣ ನೀಡುತ್ತದೆ. ಇದಕ್ಕೆ ಬದಲಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತದೆ. ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಯು, ಹಂತ ಹಂತವಾಗಿ ಪಾಕಿಸ್ತಾನದ ನೆಲವನ್ನು ನುಂಗುತ್ತಿದೆ.
ತನ್ನ ನೆಲ, ಆತ್ಮಸ್ವಾಭಿಮಾನವನ್ನೆಲ್ಲಾ ಪಾಕ್ ಅಡಮಾನ ಇಟ್ಟಿದೆ. ಅವರು ನೀಡುವ ಆರ್ಥಿಕ ನೆರವಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತದೆ. ಅಸಲಿಗೆ ಅಮೆರಿಕ ಮತ್ತು ಚೀನಾದಿಂದ ಬರುವ ನೆರವನ್ನು, ತನ್ನ ಜನರ ಅಭಿವೃದ್ಧಿಗೆ ಪಾಕಿಸ್ತಾನ ಬಳಸುವುದೇ ಇಲ್ಲ. ಅದೆನಿದ್ದರೂ ಭಾರತದ ವಿರುದ್ಧ ತನ್ನನ್ನು ತಾನು ಸಕ್ಷಮಗೊಳಿಸಲು ಮಾತ್ರ ಮೀಸಲು ಎಂದು ಪಾಕಿಸ್ತಾನ ನಂಬುತ್ತದೆ.
ಅಮೆರಿಕವು ಪಾಕಿಸ್ತಾನದೊಂದಿಗೆ ರಕ್ಷಣಾ ಸಂಬಂಧವನ್ನೂ ಹೊಂದಿದೆ. ಪಾಕಿಸ್ತಾನಕ್ಕೆ ಯೆಥೇಚ್ಛವಾಗಿ ರಕ್ಷಣಾ ಉಪಕರಣಗಳನ್ನು ನೀಡುವ ಅಮೆರಿಕ, ಇವುಗಳನ್ನು ಭಾರತದ ವಿರುದ್ಧ ಬಳಸದಂತೆ ಕರಾರು ಹಾಕಿಯೇ ವ್ಯಾಪಾರ ಮಾಡುತ್ತದೆ. ಆದರೆ, ಪಾಕಿಸ್ತಾನ ಗುಪ್ತವಾಗಿ ಈ ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರ ಕೈಸೇರಿಸುತ್ತದೆ.
ಹೇಗಿದೆ ಪಾಕಿಸ್ತಾನದ ಸೇನಾ ಸಾಮರ್ಥ್ಯ
ಭಾರತದ ಶಕ್ತಿ ಸಾಮರ್ಥ್ಯದ ಎದುರು ಪಾಕಿಸ್ತಾನ ಏನೂ ಅಲ್ಲ ಎಂಬುದು ನಿಜವಾದರೂ, ಅದು ತನ್ನದೇ ಆದ ಸೈನ್ಯ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪಾಕಿಸ್ತಾನದ ಸೇನಾ ಸಾಮರ್ಥ್ಯ ಜಾಗತಿಕ ಮಟ್ಟದಲ್ಲಿ 12ನೇ ಸ್ಥಾನದಲ್ಲಿದೆ. ಅಣ್ವಸ್ತ್ರ ರಾಷ್ಟ್ರವಾಗಿರುವ ಪಾಕಿಸ್ತಾನದ ಬಳಿ, ಕ್ಷಿಪಣಿಗಳು, ಸಿಡಿ ತಲೆಗಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಭಂಡಾರವಿದೆ. ಆದರೆ ಭಾರತದ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ.
ಸೇನಾ ಸಿಬ್ಬಂದಿ ಪ್ರಮಾಣ, ಯುದ್ಧ ವಿಮಾನಗಳು, ಯುದ್ಧ ಹಡಗುಗಳು, ಯುದ್ಧ ಟ್ಯಾಂಕ್‌ಗಳು, ಆಧುನಿಕ ರಕ್ಷಣಾ ಉಪಕರಣಗಳು ಹೀಗೆ ಎಲ್ಲದರಲ್ಲೂ ಪಾಕಿಸ್ತಾನಕ್ಕಿಂತ ಭಾರತ ಮುಂದಿದೆ. ಆದಾಗ್ಯೂ, ಪಾಕಿಸ್ತಾನದ ಸರ್ಕಾರ ಮತ್ತು ಅಲ್ಲಿನ ಸೇನೆ, “ನಾವು ಭಾರತದೊಂದಿಗೆ ಯುದ್ದಕ್ಕೆ ಸಿದ್ಧ” ಎಂದು ಹೇಳುತ್ತವೆ. ಏಕೆ?ಅನ್ನೋ ಪ್ರಶ್ನೆಗೆ ಉತ್ತರ ಚೀನಾ
ಪಾಕ್ ಹಿಂದೆ ಇದೇ ಚೀನಾ?
ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ” ಎಂದು ಪಾಕಿಸ್ತಾನ ಹೇಳುತ್ತಿರುವುದನ್ನು ನೋಡಿದರೆ, ಆ ರಾಷ್ಟ್ರಕ್ಕೆ ಬೇರೆ ದೇಶಕ ಸಾಥ್ ಇದೆ ಅನ್ನೋದು ಪಕ್ಕಾ. ಅದು ಚೀನಾದನ್ನ ಬಿಡಿಸಿ ಹೇಳಬೇಕಿಲ್ಲ. ಇತಿಹಾಸವನ್ನು ಗಮನಿಸಿದರೆ, ಚೀನಾ ಮೊದಲಿನಿಂದಲೂ ಪಾಕಿಸ್ತಾನ ಪರ ನಿಲುವು ತೆಗೆದುಕೊಳ್ಳುತ್ತದೆ. ಇದಕ್ಕೆ ಕಾರಣ ಭಾರತದೊಂದಿಗಿನ ಗಡಿ ತಂಟೆ. ಭಾರತದೊಂದಿಗೆ ಗಡಿ ತಕರಾರು ಹೊಂದಿರುವ ಚೀನಾ, ಭಾರತ ವಿರೋಧಿ ಪಾಕಿಸ್ತಾನದ ಅಸ್ತಿತ್ವವನ್ನು ಬಯಸುತ್ತದೆ. ಇದರಿಂದ ಅದಕ್ಕೆ ಸಾಕಷ್ಟು ಲಾಭವೂ ಇದೆ. ಪಾಕಿಸ್ತಾನಕ್ಕೆ ಭಾರತದವನ್ನ ತೋರಿಸಿ ಚೀನಾ ಸಾಕಷ್ಟು ಲಾಭ ಪಡೆದುಕೊಳ್ಳುತ್ತದೆ. ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ಆರ್ಥಿಕ ನೆರವು ನೀಡುವ ಮೂಲಕ, ಆ ರಾಷ್ಟ್ರವನ್ನು ತನ್ನ ಗುಲಾಮನನ್ನಾಗಿ ಮಾಡಿಕೊಂಡಿದೆ ಚೀನಾ.
ನಡೆಯುತ್ತಾ ಆಪರೇಷನ್ ಸಿಂಧೂರ 2.0?
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ- ಪಾಕಿಸ್ತಾನ ನಡುವೆ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಪಾಕ್ ಗಡಿಯುದ್ಧದಕ್ಕೂ ಭಾರತೀಯ ವಾಯುಸೇನೆ ಫುಲ್ ಅಲರ್ಟ್ ಆಗಿದ್ದು ಹದ್ದಿನ ಕಣ್ಣಟ್ಟಿ ಕಾಯ್ತಿದೆ. ಒಂದ್ವೇಳೆ ಪಾಕಿಸ್ತಾನ ಬಾಲ ಬಿಚ್ಚುವ ದುಸ್ಸಾಹಸಕ್ಕೆ ಕೈ ಹಾಕಿದ್ರೆ.. ತಿರುಗೇಟು ನೀಡಲು ಗಡಿಯಲ್ಲಿ ತುದಿಗಾಲಲ್ಲಿ ನಿಂತು ಕಾಯ್ತಿದೆ. ಪಾಕಿಸ್ತಾನ ಪ್ರತಿದಾಳಿ ನಡೆಸುವ ಭೀತಿ ಹಿನ್ನೆಲೆ ಭಾರತದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇಶದ ಹಲವೆಡೆ 20 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಮೇ 10ರವರೆಗೆ ವಿಮಾನನಿಲ್ದಾಣಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಆಪರೇಷನ್ ಸಿಂಧೂರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನ ಮತ್ತು ನೇಪಾಳದೊಂದಿಗೆ ಗಡಿ ಹೊಂದಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳ ತುರ್ತು ಸಭೆ ನಡೆಸಿದ್ದಾರೆ. ತುರ್ತು ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪ್ರಧಾನಿ ಮೋದಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ರಾಜಕೀಯ ಪಕ್ಷಗಳಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿಲಾಗಿದೆ. ಅಲ್ಲದೇ ಮುಂದಿನ ದಾಳಿ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಬಹುದು. ಮತ್ತೊಂದು ಕಡೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಎಷ್ಟೇ ಪ್ರತ್ಯುತ್ತರ ನೀಡಿದ್ದರೂ ಪಾಕ್ ಸೇನೆಯಿಂದ ಅಪ್ರಚೋದಿತ ದಾಳಿ ತಪ್ಪುತ್ತಿಲ್ಲ. ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಿಂದ 15 ನಾಗರಿಕರ ಜೀವ ಹೋಗಿದೆ. ಮುಂಜಾಗೃತ ಕ್ರಮವಾಗಿ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇದ್ದನ್ನೇಲ್ಲಾ ನೋಡಿದ್ರಾ ಪಾಕ್ ವಿರುದ್ಧ ಎಲ್ಲಾ ರೀತಿಯಲ್ಲೂ ದಾಳಿ ಮಾಡೋಕೆ ಭಾರತ ರೆಡಿಯಾಗಿದೆ. ದಾಳಿಯನ್ನ ಎದುರಿಸೋಕೆ ಕೂಡ ಪ್ಲ್ಯಾನ್ ರೂಪಿಸಲಾಗಿದೆ.
ಆಪರೇಷನ್ ಸಿಂಧೂರ್ ನಲ್ಲಿ ಕನ್ನಡದ ಡ್ರೋನ್
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ನಡೆಸಿದ “ಆಪರೇಷನ್ ಸಿಂಧೂರ್”ನಲ್ಲಿ ಆತ್ಮಾಹುತಿ ಡ್ರೋನ್‌ಗಳೇ ಹೀರೋ..ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ ಒಂಬತ್ತು ಉಗ್ರಗಾಮಿ ನೆಲೆಗಳ ಮೇಲಿನ ಈ ಪ್ರತೀಕಾರದ ದಾಳಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮಾಡಿರೋ ಡ್ರೋನ್‌ಗಳನ್ನು ಬಳಸಲಾಗಿದೆ. ಆತ್ಮಾಹುತಿ ಡ್ರೋನ್ ಒಂದು ರೀತಿಯ ಸ್ವಯಂಚಾಲಿತ ಆಯುಧ. ಇವು ಸಾಮಾನ್ಯ ಡ್ರೋನ್‌ಗಳಂತೆ ಗಾಳಿಯಲ್ಲಿ ಹಾರಾಡುತ್ತವೆ, ಆದರೆ ಗುರಿಯನ್ನು ಪತ್ತೆ ಹಚ್ಚಿದ ತಕ್ಷಣ ಅದರ ಮೇಲೆ ನೇರವಾಗಿ ದಾಳಿ ಮಾಡಿ ಸ್ಫೋಟಗೊಳ್ಳುತ್ತವೆ. ಅದಕ್ಕಾಗಿಯೇ ಇವುಗಳನ್ನು “ಕಾಮಿಕಾಜೆ ಡ್ರೋನ್‌ಗಳು” ಎಂದೂ ಕರೆಯುತ್ತಾರೆ. ಬಾಲಕೋಟ್ ದಾಳಿ ಬಳಿಕ ಈ ಡ್ರೋನ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.
ಬೆಂಗಳೂರಿನಲ್ಲಿ ಸಿದ್ಧವಾಗುವ ಡ್ರೋನ್
ಬುಧವಾರ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಬಳಕೆಯಾದ ಡ್ರೋನ್ ಬೆಂಗಳೂರಿನಲ್ಲಿಯೇ ಸಿದ್ಧಗೊಂಡಿರೋದು ಅನ್ನೋದು ಹೆಮ್ಮೆಯ ವಿಚಾರ. ಪಶ್ಚಿಮ ಬೆಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಈ ಆತ್ಮಹತ್ಯಾ ಡ್ರೋನ್‌ಗಳ ನಿರ್ಮಾಣವಾಗುತ್ತೆ. ಆಲ್ಫಾ ಡಿಸೈನ್ ಮತ್ತು ಇಸ್ರೇಲ್ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಡ್ರೋನ್ ತಯಾರಿಕೆಯನ್ನು ಮಾಡುತ್ತವೆ. ಈ ಎರಡು ಕಂಪನಿಗಳ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಭಾರತೀಯ ಸೇನೆ ವಿಶೇಷವಾಗಿ 2021 ರಲ್ಲಿ 100 ಡ್ರೋನ್ ಖರೀದಿಗೆ ಆರ್ಡರ್ ನೀಡಿತ್ತು. 100 ಕಿಮೀ ದೂರದವರೆಗೆ ಚಲಿಸಬಲ್ಲ ಈ ಡ್ರೋನ್‌ಗಳು 5 ರಿಂದ 10 ಕೆಜಿ ಸ್ಫೋಟಕಗಳನ್ನ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿವೆ. ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಡ್ರೋನ್‌ಗಳ ಚಲನೆ ಮಾತ್ರ ನಿಶ್ಯಬ್ಧವಾಗಿರುತ್ತವೆ. ಹಾಗಾಗಿ ಇವುಗಳ ಚಲನೆ ರಹಸ್ಯವಾಗಿರುತ್ತದೆ.
ಪಕ್ಕಾ ಟಾರ್ಗೆಟ್ ಮಾಡಿ ಸ್ಫೋಟ
ಡ್ರೋನ್‌ಗಳ ವಿಶೇಷತೆ ಗುರಿಯನ್ನು ಪತ್ತೆಹಚ್ಚಿ ದಾಳಿ ಮಾಡುವ ಸಾಮರ್ಥ್ಯ, ನಿಗಾ ವ್ಯವಸ್ಥೆಯನ್ನು ಹೊಂದಿವೆ. ಮೊದಲು ಗಾಳಿಯಲ್ಲಿ ಸುತ್ತುತ್ತಾ ಗುರಿಗಳನ್ನು ಗುರುತಿಸುತ್ತದೆ. ಮಾನವ ಹಸ್ತಕ್ಷೇಪವಿಲ್ಲದೆ ಕೆಲಸ ಮಾಡಬಲ್ಲ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದೆ. ಹೆಚ್ಚು ನಿಖರತೆಯನ್ನು ಹೊಂದಿರುವ ಈ ಡ್ರೋನ್‌ಗಳು ಅತ್ಯಂತ ನಿಖರವಾಗಿ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿವೆ. ಒಂದೇ ಮಷಿನ್ನಲ್ಲಿ ನಿಗಾ ಇರಿಸೋದು ಮತ್ತು ದಾಳಿ ಮಾಡುವ ತಂತ್ರಜ್ಞಾನವನ್ನು ಹೊಂದಿದೆ. ಟಾರ್ಗೆಟ್ ಮಾಡಿ ದಾಳಿ ಮಾಡುವ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಒಟ್ನಲ್ಲಿ ಸೂಸೈಡ್ ಡ್ರೋನ್‌ಗಳು ಪಕ್ಕಾ ಟಾರ್ಗೆಟ್ ಮಾಡಿ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ಇದು ಸ್ವದೇಶಿ ನಿರ್ಮಿತ ಡ್ರೋನ್ ಅನ್ನೋದು ವಿಶೇಷ.