ಧರ್ಮೋ ರಕ್ಷತಿ ರಕ್ಷಿತಃ.. “ಸಿಂಧೂರ”ದ ಶಕ್ತಿ PAKಗೆ ಗೊತ್ತಾಯ್ತಾ? – ಭಾರತದ ನಾರಿ.. ಪಾಕ್ ಪಾಲಿನ ಹೆಮ್ಮಾರಿ..!

ಸಿಂಧೂರ.. ಪ್ರತಿ ಭಾರತೀಯ ನಾರಿಯರ ಹೆಮ್ಮೆಯ ಪ್ರತೀಕ. ಇದನ್ನೇ ಅಲ್ವಾ.. ಪಾಪಿ ಪಾಕಿಗಳು ಮುಟ್ಟೋಕೆ ಬಂದಿದ್ದು.. ಸಿಂಧೂರ ಅಳಿಸಿ, ನಮ್ಮ ಮಹಿಳೆಯರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸಿದ್ದು. ಇದೀಗ ಇದೇ ಪಾಕಿಸ್ತಾನ ಭಾರತದ ಹೆಣ್ಣುಮಕ್ಕಳ ಸುದ್ದಿಗೆ ಬಂದ್ರೆ ಏನಾಗುತ್ತೆ ಅನ್ನೋದನ್ನ ಅನುಭವಿಸುತ್ತಿದೆ. ಮುಂದಕ್ಕೂ ಅನುಭವಿಸಲು ಬಾಕಿಯಿದೆ. ಪಿಕ್ಚರ್ ಅಭಿ ಬಾಕಿ ಹೇ. ಅಂದಹಾಗೆ, ನಡುರಾತ್ರಿ ನಡೆದ ಪಾಕ್ ಮೇಲಿನ ದಾಳಿಗೆ ಆಫರೇಷನ್ ಸಿಂಧೂರ ಅನ್ನೋ ಹೆಸರಿಟ್ಟಿದ್ದೇಕೆ, ಕುಂಕುಮದ ಸುದ್ದಿಗೆ ಬಂದವರು ನಡುರಾತ್ರಿ ನಡುಗಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ – ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್
ಭಾರತ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ. ಈ ಪ್ರತಿಕಾರಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿದೆ. ಸಿಂಧೂರ ಎಂದು ಹೆಸರಿಡಲು ಕಾರಣ ಏನಂತಾ ನೋಡುತ್ತಾ ಹೋಗೋದಾದ್ರೆ, ಪಾಕಿಸ್ತಾನದ ಉಗ್ರರು ಭಾರತದ ಹಿಂದೂ ಮಹಿಳೆಯರ ಕುಂಕುಮ ಅಳಿಸಿದ್ದರು. ಅದು ಕೂಡಾ ಪತ್ನಿಯರ ಕಣ್ಣೆದುರೇ ಅಟ್ಟಹಾಸ ಮೆರೆದಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಉಗ್ರ ನೆಲೆ ಮೇಲೆ ದಾಳಿ ನಡೆಸಿದೆ. ಅದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಡಲಾಗಿದೆ.
ಇನ್ನು ಆಪರೇಷನ್ ಸಿಂಧೂರ್ ಗುರಿ ಏನು ಎಂಬ ಬಗ್ಗೆಯೂ ರಕ್ಷಣಾ ಸಚಿವಾಲಯ ವಿವರಣೆ ನೀಡಿದೆ. ಆಪರೇಷನ್ ಸಿಂಧೂರ್ ನ ಗುರಿ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಳ್ಳುವುದು ಮಾತ್ರ ಎಂದು ಹೇಳಿದೆ. ಭಾರತೀಯ ಹೆಣ್ಣುಮಕ್ಕಳ ಸಿಂಧೂರದ ಸುದ್ದಿಗೆ ಬಂದರೆ ಏನಾಗುತ್ತೆ ಅಂತಾ ಭಾರತ ತೋರಿಸಿಕೊಟ್ಟಿದ್ದು ಮಾತ್ರವಲ್ಲ, ಪಾಪಿ ಪಾಕ್ಗೆ ನಮ್ ಹೆಣ್ಮಕ್ಕಳೇ ಸಾಕು ಎಂಬ ಸಂದೇಶವನ್ನೂ ಕೂಡಾ ರವಾನಿಸಿದೆ. ಪಿಒಕೆಯಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಭಾರತದ ರಕ್ಷಣಾ ಇಲಾಖೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ್ದು ಕೂಡಾ ನಮ್ಮ ಭಾರತದ ಹೆಮ್ಮೆಯ ಮಹಿಳಾ ಅಧಿಕಾರಿಗಳು. ಭಾರತ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಮ್ಮ ದೇಶದ ಇಬ್ಬರು ದಿಟ್ಟ ಹೆಣ್ಣು ಮಕ್ಕಳು ಪಾಕ್ಗೆ ತಿರುಗೇಟು ನೀಡಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಇಬ್ಬರು ಮಹಿಳಾ ಅಧಿಕಾರಿಗಳ ಮೂಲಕವೇ ಜಗತ್ತಿಗೆ ಸಂದೇಶ ರವಾನಿಸಿದ್ದು ನಿಜಕ್ಕೂ ಮೆಚ್ಚುವಂತಹದ್ದು.
ಇದು ಸದ್ಯದ ಪರಿಸ್ಥಿತಿಯಾದ್ರೆ, ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ. ಇತಿಹಾಸ ಪುಟ ತಿರುವಿ ನೋಡಿದರೂ ಕೂಡ ಹೆಣ್ಣಿನ ಕಣ್ಣೀರಿನ ಮುಂದೆ ಯಾರೂ ಗೆದ್ದಿಲ್ಲ. ಹೆಣ್ಣಿನ ಶಕ್ತಿಯೇ ಅಂತದ್ದು. ಅದರಲ್ಲೂ ಅವರ ಸೌಭಾಗ್ಯವನ್ನು ಅವರ ಮುಂದೆಯೇ ಕಿತ್ತುಕೊಂಡವರಿಗೆ ಉಳಿಗಾಲ ಖಂಡಿತಾ ಇಲ್ಲ. ಭಾರತೀಯ ನಾರಿಗೆ ಸಿಂಧೂರ ಅಥವಾ ಕುಂಕುಮ ಕೇವಲ ಹಣೆ ಮೇಲಿಡುವ ಬಣ್ಣವಲ್ಲ. ಅದು ಆಕೆಯ ಶಕ್ತಿ. ಮದುವೆಯ ಸಮಯದಲ್ಲಿ ಇಟ್ಟ ಸಿಂಧೂರ ಕೊನೆಯವರೆಗೂ ಅವಳೊಂದಿಗೆ ಇರಬೇಕು ಎಂಬುದು ಪದ್ಧತಿ. ಇದರ ಜೊತೆಗೇನೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಶ್ಲೋಕವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಶ್ಲೋಕ ಸನಾತನ ಧರ್ಮದ, ಕರ್ತವ್ಯದ ಶಕ್ತಿಯನ್ನು ಸಂಕೇತಿಸುತ್ತದೆ. ಸಿಂಧೂರ ಅನ್ನೋದು ನಮ್ಮ ಭಾರತೀಯ ಮಹಿಳೆಯರ ಧರ್ಮ. ಈ ಧರ್ಮವನ್ನ ಕೆಣಕಲು ಬಂದ, ಇದೇ ಸಿಂಧೂರವನ್ನ ಅಳಿಸಿ ಹಾಕಲು ಬಂದ ಪಾಕ್ ಭಾರತದ ಶಕ್ತಿಗೆ ಪತರುಗುಟ್ಟಿ ಹೋಗಿದೆ. ಪಾಪಿ ಪಾಕ್ ಭಾರತದ ಪ್ರತೀಕಾರಕ್ಕೆ ತತ್ತರಿಸಿದೆ.