ʼಆಪರೇಷನ್ ಅಜಯ್’2ನೇ ಹಂತದಲ್ಲಿ ಇಸ್ರೇಲ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ʼಆಪರೇಷನ್ ಅಜಯ್’2ನೇ ಹಂತದಲ್ಲಿ ಇಸ್ರೇಲ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ನವದೆಹಲಿ: ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕದನ ತೀವ್ರ ಸ್ವರೂಪಕ್ಕೆ ತಿರುಗಿದೆ. ಈಗಾಗಲೇ ಇಸ್ರೇಲ್​​ ಹಮಾಸ್​​ ಉಗ್ರರನ್ನು ನಾಶ ಮಾಡಲು ಗಾಜಾ ಪಟ್ಟಿಯ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಸ್ರೇಲ್‌ ನಲ್ಲಿ ಸಾವಿರಾರು ಭಾರತೀಯರು ಸಿಲುಕಿದ್ದು, ಕೇಂದ್ರ ಸರ್ಕಾರ ಆಪರೇಷನ್‌ ಅಜಯ್‌ ಮೂಲಕ ಭಾರತೀಯರನ್ನು ತಾಯ್ನಾಡಿಗೆ ಕರೆಸಿಕೊಳ್ಳುತ್ತಿದೆ. ಈಗಾಗಲೇ ಆಪರೇಷನ್ ಅಜಯ್ ಮೂಲಕ ಮೊದಲ ಹಂತದಲ್ಲಿ 212 ನಾಗರಿಕರು ಭಾರತಕ್ಕೆ ಬಂದಿದ್ದಾರೆ. ಇದೀಗ ಎರಡನೇ ಹಂತದ ಏರ್​​​ಲಿಫ್ಟ್​​ನಲ್ಲಿ 235 ಭಾರತೀಯರು ಭಾರತಕ್ಕೆ ತಲುಪಿದ್ದಾರೆ. ಇದರಲ್ಲಿ 9 ಮಂದಿ ಕನ್ನಡಿಗರು ಸೇರಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ವಿದೇಶಾಂಗ ಸಚಿವ ಎಸ್​​​. ಜೈಶಂಕರ್​​ ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, 235 ಭಾರತೀಯರು ಹೊತ್ತ AI 506 ವಿಮಾನವು ದೆಹಲಿಗೆ ತಲುಪಿದೆ. 9 ಕನ್ನಡಿಗರು ದೆಹಲಿಯಿಂದ ಬೆಂಗಳೂರಿಗೆ ಬರಲಿದ್ದಾರೆ. ಮೈಸೂರಿನ ಐವರು, ಬೆಂಗಳೂರಿನ ಬಸವನಗುಡಿಯ ನಾಲ್ವರು ನಿವಾಸಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಮಹಿಷ ದಸರಾಕ್ಕಿಲ್ಲ ಅನುಮತಿ – ಜಿಲ್ಲೆಯಾದ್ಯಾಂತ ಎರಡು ದಿನ ನಿಷೇದಾಜ್ಞೆ ಜಾರಿ

ಇಸ್ರೇಲ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಸರ್ಕಾರ ಅಕ್ಟೋಬರ್​​ 7ರಂದು ಆಪರೇಷನ್ ಅಜಯ್ ಆರಂಭಿಸಿಲಾಗಿತ್ತು. ಈಗಾಗಲೇ ಮೊದಲ ಹಂತ ಏರ್​​​ಲಿಫ್ಟ್​​ನಲ್ಲಿ 212 ಮಂದಿ ಭಾರತೀಯರನ್ನು ನಮ್ಮ ದೇಶಕ್ಕೆ ಕರೆಸಿಕೊಳ್ಳಲಾಗಿದೆ. ಗುರುವಾರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟು ಶುಕ್ರವಾರ ಬೆಳಿಗ್ಗೆ ನವದೆಹಲಿ ತಲುಪಿತು. ಇದೀಗ ಎರಡನೇ ಹಂತದಲ್ಲಿ 235 ಭಾರತೀಯರನ್ನು ಕರೆಸಿಕೊಳ್ಳಲಾಗಿದೆ.

ಇನ್ನು ಇಸ್ರೇಲ್​​ ಪರಿಸ್ಥಿತಿ ಬಗ್ಗೆ ಮತ್ತು ಅಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಮೇಲ್ವಿಚಾರಣೆ ಮಾಡಲು ದೆಹಲಿಯಲ್ಲಿ 24 ಗಂಟೆಗಳ ಕಂಟ್ರೋಲ್​​ ರೂಮ್​​ನ್ನು (ನಿಯಂತ್ರಣ ಕೊಠಡಿ) ಸ್ಥಾಪಿಸಲಾಗಿದೆ. ಯಾವುದೇ ರೀತಿಯ ತೊಂದರೆಯಾದರೂ ಅಥವಾ ಸಹಾಯಕ್ಕಾಗಿ ಈ ನಂಬರ್​​ಗಳಿಗೆ ಫೋನ್​​ ಅಥವಾ ಮೆಸೇಜ್​​ ಮಾಡಬಹುದು, 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988, ಇದರ ಜತೆಗೆ ಭಾರತೀಯ ರಾಯಭಾರಿ ಕಚೇರಿಯ 24-ಗಂಟೆಗಳ ತುರ್ತು ಸಹಾಯವಾಣಿಯನ್ನು ನೀಡಿದೆ. +972-35226748 ಮತ್ತು +972-543278392, ಮತ್ತು ಇಮೇಲ್ ಮೂಲಕವು ತಿಳಿಸಬಹುದು cons1.telaviv@mea.gov.in ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Shwetha M