ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರ – ಫೆಬ್ರವರಿ ಮೊದಲ ವಾರದಲ್ಲೇ ಘನವಾಹನ ಸಂಚಾರಕ್ಕೆ ಮುಕ್ತ!

ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರ – ಫೆಬ್ರವರಿ ಮೊದಲ ವಾರದಲ್ಲೇ ಘನವಾಹನ ಸಂಚಾರಕ್ಕೆ ಮುಕ್ತ!

ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ ಗುಡ್‌ ನ್ಯೂಸ್‌ ವೊಂದಿದೆ. ಬೆಂಗಳೂರಿನಿಂದ ರಾಜ್ಯದ ಶೇ.80ರಷ್ಟು ಜಿಲ್ಲೆಗಳಿಗೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರಾಗುವ ಸಂದರ್ಭ ಬಂದಿದೆ. ಅತೀ ಶೀಘ್ರದಲ್ಲೇ ಪೀಣ್ಯ ಫ್ಲೈಓವರ್‌ ನಲ್ಲಿ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಖುರೇಷಿಗೆ 10 ವರ್ಷ ಜೈಲು ಶಿಕ್ಷೆ!

ಬೆಂಗಳೂರಿನಿಂದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಪೀಣ್ಯ ಫ್ಲೈಓವರ್  ಸಂಪರ್ಕಿಸುತ್ತದೆ. ಹೆವಿ ವಾಹನಗಳ ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್‌ಸಿ (IISC) ತಜ್ಞರ ವರದಿ ಎನ್‌ಹೆಚ್‌ಎಐ ಕೈ ಸೇರಿದೆ. ಇದೇ ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್‌ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್‌ಹೆಚ್‌ಎಐ ಅಧಿಕಾರಿಗಳಿಗೆ ರಿಪೋರ್ಟ್ ನೀಡಿದೆ.

ಪೀಣ್ಯ ಫ್ಲೈಓವರ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಹೆವಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಫೆಬ್ರವರಿ ಮೊದಲ ವಾರದಲ್ಲಿ ತೆರವು ಮಾಡುವ ಸಾಧ್ಯತೆ ಇದೆ. ಫ್ಲೈಓವರ್ ಎರಡು ಪಿಲ್ಲರ್‌ಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹೆವಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆ ಪತ್ತೆಗೆ ಮುಂದಾಗಿದ್ದ ಐಐಎಸ್‌ಸಿ ತಜ್ಞರು ಫ್ಲೈಓವರ್ ಕೇಬಲ್‌ಗಳು ಹಾಳಾಗಿದ್ದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಪಿಲ್ಲರ್‌ಗಳಿಗೆ ಅಳವಡಿಕೆ ಮಾಡಿದ್ದ ಕೇಬಲ್‌ಗಳು ತುಕ್ಕು ಹಿಡಿದಿದ್ದೆ ದೋಷಕ್ಕೆ ಕಾರಣ ಎಂಬ ರಿಪೋರ್ಟ್ ನೀಡಿವೆ.

ಕೇಬಲ್‌ಗಳಿಗೆ ನೀರು ತಗುಲಿದ್ದ ಕಾರಣ ಸಂಪೂರ್ಣ ಕೇಬಲ್ ತುಕ್ಕು ಹಿಡಿದಿದ್ದ ಪರಿಣಾಮ ಪಿಲ್ಲರ್‌ಗಳಲ್ಲಿ ಅಳವಡಿಕೆ ಮಾಡಿದ್ದ ಕೇಬಲ್ ಹಾಳಾಗಿತ್ತು. ಸದ್ಯ ಈಗ ಆ ಎಲ್ಲವನ್ನು ತೆರವು ಮಾಡಿ ಈ ಹಿಂದೆ ಅಳವಡಿಕೆ ಮಾಡಿದ್ದ ಕೇಬಲ್‌ಗಳಿಗಿಂತ 4 ಪಟ್ಟು ಸದೃಢವಾದ ಕೇಬಲ್ ಅಳವಡಿಕೆ ಮಾಡುವುದರ ಜೊತೆಗೆ ತುಕ್ಕು ಹಿಡಿಯದಂತೆ ಗ್ರೀಸ್ ಇರುವ ಕೇಬಲ್ ಅನ್ನು ಅಳವಡಿಕೆ ಮಾಡಲಾಗಿದೆ. ಜೊತೆಗೆ ಮುಂದೆ ಈ ರೀತಿ ಸಮಸ್ಯೆಯಾದರೆ ವಾಹನ ಓಡಾಟ ನಿಲ್ಲಿಸದೇ ಹಾಗೇ ಸರಿ ಮಾಡಬಹುದಾದ ಕ್ಷಮತೆ ಕೂಡ ಕೇಬಲ್‌ಗೆ ಇದೆ ಎಂದು ಐಐಎಸ್‌ಸಿ ವರದಿ ನೀಡಿದೆ.

ಸದ್ಯ ಇದೇ ವಾರ ಐಐಎಸ್‌ಸಿ ತಜ್ಞರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ಮಾಡಲಿದ್ದು, ಸಭೆ ಬಳಿಕ ಸಂಚಾರ ಮುಕ್ತ ಯಾವಾಗ ಎಂಬ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಕಳೆದೆರಡು ವರ್ಷಗಳಿಂದ ಟ್ರಾಫಿಕ್‌ನಿಂದ ಪರದಾಡುತ್ತಿದ್ದ ಹೆವಿ ವಾಹನಗಳಿಗೆ ಸದ್ಯ ಗುಡ್‌ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸಂಚಾರ ಮಾಡಬಹುದಾಗಿದೆ.

Shwetha M