ಮಾಜಿ ಸಿಎಂ ದಿಢೀರ್ ಆಸ್ಪತ್ರೆಗೆ ದಾಖಲು – ಪುತ್ರ ಆತಂಕ ವ್ಯಕ್ತಪಡಿಸಿದ್ದೇಕೆ?
ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅನಾರೋಗ್ಯದಿಂದ ಬಳಲುತ್ತಿದ್ದು, ತಿರುವನಂತಪುರಂನಲ್ಲಿರುವ ನಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಶಿಕ್ಷಣ ಸಂಸ್ಥೆಗಳಲ್ಲಿ ಋತುಚಕ್ರದ ರಜೆ – ಪ್ರಸ್ತಾವನೆ ಬಗ್ಗೆ ಕೇಂದ್ರ ಹೇಳಿದ್ದೇನು?
ಈ ಬಗ್ಗೆ ಉಮ್ಮನ್ ಚಾಂಡಿ ಅವರ ಮಗ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿ ಮಾತನಾಡಿದ್ದಾರೆ. 79 ವರ್ಷದ ಉಮ್ಮನ್ ಚಾಂಡಿ ನ್ಯುಮೋನಿಯಾ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಅವರನ್ನು ಸೋಮವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ ಎಂದು ಹೇಳಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ಮಾಡಿ ಉಮ್ಮನ್ ಚಾಂಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಮಂಗಳವಾರ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಸ್ಪತ್ರೆಗೆ ಭೇಟಿ ಉಮ್ಮನ್ ಚಾಂಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.
ಉಮ್ಮನ್ ಚಾಂಡಿ ಕೇರಳದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದರು. 2004 ರಿಂದ 2006 ರವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2011 ರಿಂದ 2016 ರವರೆಗೆ ಎರಡನೇ ಬಾರಿ ಸಿಎಂ ಆಗಿ ಅಧಿಕಾರದಲ್ಲಿದ್ದರು. ಮುಖ್ಯಮಂತ್ರಿ ಆಗುವ ಮುನ್ನ ರಾಜ್ಯದಲ್ಲಿ ಹಣಕಾಸು, ಗೃಹ ಮತ್ತು ಕಾರ್ಮಿಕದಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಅಲ್ಲದೇ ವಿಧಾನಸಭೆಯಲ್ಲಿ ದೀರ್ಘಕಾಲದವರೆಗೆ ಸೇವೆ ಸಲ್ಲಿಸಿದ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.