ಹೇ ಮಂತ್ರಿಗಳೇ ನಿಂತ್ಕೊಳ್ರಿ.. ಅಶ್ವತ್ಥ್ ಮೇಲೆ ಸುರೇಶ್ ಕೆಂಡಾಮಂಡಲ – ಆಸ್ಪತ್ರೆ ಉದ್ಘಾಟನೆಯಲ್ಲಿ ಹೈಡ್ರಾಮಾ!

ಹೇ ಮಂತ್ರಿಗಳೇ ನಿಂತ್ಕೊಳ್ರಿ.. ಅಶ್ವತ್ಥ್ ಮೇಲೆ ಸುರೇಶ್ ಕೆಂಡಾಮಂಡಲ – ಆಸ್ಪತ್ರೆ ಉದ್ಘಾಟನೆಯಲ್ಲಿ ಹೈಡ್ರಾಮಾ!

ರಾಮನಗರ ಅಂದ್ರೆ ಅದು ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರ. ಅಲ್ಲಿ ಯಾವುದೇ ಕಾಮಗಾರಿಯ ಚಾಲನೆಯಿಂದ ಹಿಡಿದು ಉದ್ಘಾಟನೆವರೆಗೂ ಗಲಾಟೆ ಇದ್ದೇ ಇರುತ್ತೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗುದ್ದಾಟ ನಡೆಯುತ್ತೆ. ಈಗ ಅದೇ ಜಿಲ್ಲೆ ಮತ್ತೊಮ್ಮೆ ರಣಾಂಗಣವಾಗಿದೆ. ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ವೇಳೆ ಭಾರೀ ಹೈಡ್ರಾಮಾ ನಡೆದಿದೆ.

100 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 374 ಹಾಸಿಗೆ ಸಾಮರ್ಥ್ಯದ ನೂತನ ಜಿಲ್ಲಾಸ್ಪತ್ರೆಯ ಉದ್ಘಾಟನೆಗೆ ಇವತ್ತು ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಹೀಗಾಗಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿಎನ್. ಅಶ್ವತ್ಥ್ ನಾರಾಯಣ ಉದ್ಘಾಟನೆಗೆ ಆಗಮಿಸಿದ್ರು. ಆದ್ರೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬರುವವರೆಗೂ ಉದ್ಘಾಟನೆ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ರು.

ಇದನ್ನೂ ಓದಿ : ಶಿವಾಜಿ ಪ್ರತಿಮೆ ಹೆಸರಲ್ಲಿ ‘ಪ್ರತಿಷ್ಠೆ’ ಪಾಲಿಟಿಕ್ಸ್ – ರಮೇಶ್ ಜಾರಕಿಹೊಳಿ Vs ಲಕ್ಷ್ಮೀ ಹೆಬ್ಬಾಳ್ಕರ್ ವಾರ್!

ಜೆಡಿಎಸ್ ಕಾರ್ಯಕರ್ತರ ವಿರೋಧದ ನಡುವೆಯೂ ಸಚಿವರು ಆಸ್ಪತ್ರೆಯನ್ನ ಉದ್ಘಾಟನೆ ಮಾಡಿದ್ರು. ಈ ವೇಳೆ ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ರು. ಇದ್ರಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಮಧ್ಯಪ್ರವೇಶಿಸಿದ್ರು.

ಇದು ಒಂದ್ಕಡೆಯಾದ್ರೆ ಮತ್ತೊಂದೆಡೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ನಡುವೆ ಮತ್ತೊಂದು ಕಾಳಗ ನಡೆದಿದೆ. ಪ್ರೋಟಾಕಾಲ್ ಪಾಲಿಸಿಲ್ಲ. ನಿಯಮದ ಪ್ರಕಾರ ನನ್ನನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುರೇಶ್ ಸಿಡಿದೆದ್ದಿದ್ರು.

 

‘ಹೇ ಮಂತ್ರಿಗಳೇ ನಿಂತ್ಕೊಳ್ರೀ, ಏನ್ರೀ ಪ್ರೋಟಾಕಾಲ್ ಇಲ್ವಾ? ನಾನು ಈ ಕ್ಷೇತ್ರದ ಸಂಸದ, ನನಗೆ ಪ್ರೋಟಾಕಾಲ್ ಇಲ್ವಾ? ಯಾರೀ ಸಿಇಒ, ಡಿಸಿ?, ಅವರಿಗೆ ಪ್ರೋಟಾಕಾಲ್ ಗೊತ್ತಿಲ್ವಾ? ನೀವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರೋಟಾಕಾಲ್ ಗೊತ್ತಿಲ್ವಾ? ರಾತ್ರಿ ಆಹ್ವಾನ ಪತ್ರಿಕೆ ಕಳುಹಿಸಿ, ಬೆಳಗ್ಗೆ ಉದ್ಘಾಟನೆ ಮಾಡುವುದಲ್ಲ. ಈ ಜಿಲ್ಲಾಸ್ಪತ್ರೆ ನೀವು ಮಾಡಿದ್ದಲ್ಲ, ನಾವು ಮಾಡಿರುವುದು ಎಂದು ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ್ರು. ಬಳಿಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಂಸದ ಡಿ.ಕೆ ಸುರೇಶ್ ರನ್ನ  ಸಮಾಧಾನ ಪಡಿಸಿದ್ದಾರೆ.

ಅಷ್ಟಕ್ಕೂ ಡಿ.ಕೆ ಸುರೇಶ್ ಹಾಗೂ ಅಶ್ವತ್ಥ್ ನಾರಾಯಣ್ ನಡುವಿನ ಫೈಟ್ ಇದೇ ಮೊದಲೇನಲ್ಲ. ಕಳೆದ ವರ್ಷ ರಾಮನಗರದ ಡಿಸಿ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮುಂದೆಯೇ ಇಬ್ಬರು ತೋಳೇರಿಸಿ ನಿಂತಿದ್ರು.

ವೇದಿಕೆ ಮೇಲೆ ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಅಶ್ವತ್ಥ್, ಯೋಜನೆ ಜಾರಿ ಮಾಡುವ ಗಂಡಸುತನ ಇರೋದು ಬಿಜೆಪಿಗೆ ಮಾತ್ರ. ಕಾಂಗ್ರೆಸ್ಗೆ ಇದನ್ನೆಲ್ಲಾ ಅನುಷ್ಠಾನಗೊಳಿಸುವ ಶಕ್ತಿಯೇ ಇಲ್ಲ. ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ಗೆ ಪೌರುಷವಿದೆಯಾ ಎಂದು ಸವಾಲ್ ಹಾಕಿದ್ದರು. ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಡಿ.ಕೆ ಸುರೇಶ್ ಆವೇಶದಿಂದ ಅಶ್ವತ್ಥ್ ನಾರಾಯಣ್ ಮಾತಾಡುತ್ತಿದ್ದ ಪೋಡಿಯಂನತ್ತ ತೆರಳಿದ್ರು. ಆಗ ಇಬ್ಬರೂ ನಾಯಕರು ಪರಸ್ಪರ ಕೈಕೈ ಮಿಲಾಯಿಸುವ ಮಟ್ಟಕ್ಕೆ ಗಲಾಟೆ ಮಾಡಿಕೊಂಡಿದ್ದರು.

ರಾಮನಗರದ ಈಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದ್ರಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಗಲಾಟೆ ತಾರಕಕ್ಕೇರುತ್ತಿದೆ. ಆದ್ರೆ ಈ ಗುದ್ದಾಟ ಎಲೆಕ್ಷನ್ ಹೊತ್ತಿಗೆ ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು.

 

suddiyaana