‘ಶಿವಸೇನೆ ಒಂದೇ’ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ ಶಿಂಧೆ ಬಣ – 2 ವಾರಗಳ ಡೆಡ್ ಲೈನ್ ನೀಡಿದ್ದೇಕೆ..?
ಮಹಾರಾಷ್ಟ್ರದಲ್ಲಿ ಒಡೆದ ಮನೆಯಂತಾಗಿರುವ ಶಿವಸೇನೆಯಲ್ಲಿ ಈಗ ಒಗ್ಗಟ್ಟಿನ ಮಂತ್ರ ಶುರುವಾಗಿದೆ. ಉದ್ಧವ್ ಠಾಕ್ರೆ ಬಣದ ಎಲ್ಲಾ ಸದಸ್ಯರೂ ಮೂಲ ಶಿವಸೇನೆಗೆ ಮರಳಲಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಪ್ರತಿಪಾದಿಸಿದೆ. ಶಿವಸೇನೆ ಒಂದೇ ಆಗಿದ್ದು, ನಮ್ಮಲ್ಲಿ ಯಾವ ಬಣವೂ ಇಲ್ಲ ಎಂದು ಶಿಂಧೆ ಬಣದ ನಾಯಕರು ಘೋಷಿಸಿದ್ದಾರೆ.
ವಿಧಾನಸಭೆ ಅಧಿವೇಶನದ ಹೊತ್ತಿಗೆ ಎಲ್ಲಾ ನಾಯಕರೂ ಮೂಲ ಶಿವಸೇನೆಗೆ ಮರಳಲಿದ್ದಾರೆ. ನಾವು ಒಂದೇ ಶಿವಸೇನೆಯಾಗಿ ವಿಧಾನಸಭೆಯನ್ನು ಪ್ರವೇಶಿಸಲಿದ್ದೇವೆ ಎಂದಿದ್ದಾರೆ. ಸಿಎಂ ಶಿಂಧೆ ಕೂಡ ನಾವು ಒಗ್ಗಟ್ಟು ಪ್ರದರ್ಶಿಸುವ ಸಮಯ ಬಂದಿದೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ‘ಶಿವಸೇನೆ ಒಂದೇ ಇದೆ. ನಮ್ಮ ಬಳಿ ಪಕ್ಷದ ಹೆಸರು ಮತ್ತು ಚಿಹ್ನೆ ಇದೆ. ಎಲ್ಲರೂ ನಮ್ಮೊಂದಿಗೆ ಇರಬೇಕು ಮತ್ತು ನಾವು ಏನು ಹೇಳುತ್ತೇವೋ ಅದನ್ನು ಅನುಸರಿಸಬೇಕು. ಅದನ್ನ ಮಾಡದಿದ್ದರೆ, ಎರಡು ವಾರಗಳ ನಂತರ ನಾವು ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ’ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಮುಖ್ಯ ಸಚೇತಕ ಭರತ್ ಗೋಗವಾಲೆ ಎಚ್ಚರಿಕೆಯ ಧಾಟಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ಮುಕೇಶ್ ಅಂಬಾನಿ & ಫ್ಯಾಮಿಲಿಗೆ ವಿದೇಶದಲ್ಲೂ ಝಡ್+ ಭದ್ರತೆ : ವೆಚ್ಚದ ಜವಾಬ್ದಾರಿ ಯಾರದ್ದು ಗೊತ್ತಾ?
ಮುಖ್ಯ ಸಚೇತಕರ ಆದೇಶವನ್ನು ಉಲ್ಲಂಘಿಸುವ ಯಾವುದೇ ನಾಯಕರ ವಿರುದ್ಧ, ಕನಿಷ್ಠ ಎರಡು ವಾರಗಳವರೆಗೆ ಪಕ್ಷವು ಕ್ರಮ ಕೈಗೊಳ್ಳುವುದಿಲ್ಲ ಎಂದು ಶಿವಸೇನೆ ನಿನ್ನೆ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ‘ಲೋಕಸಭೆಯಲ್ಲಿ ತಮ್ಮ ಮುಖ್ಯ ಸಚೇತಕರನ್ನು ಶಿವಸೇನೆ ಬದಲಾಯಿಸಲಿದೆ. ಸಿಎಂ ಶಿಂಧೆ ಶೀಘ್ರದಲ್ಲೇ ಹೆಸರನ್ನು ಘೋಷಿಸಲಿದ್ದಾರೆ ಎಂದು ಗೋಗಾವಾಲೆ ಸ್ಪಷ್ಟಪಡಿಸಿದ್ದಾರೆ. ನಾವು ಸದ್ಯಕ್ಕೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ವಿಪ್ ಮಾತ್ರ ಎಲ್ಲರೂ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಬೇಕೆಂದು ಹೇಳುತ್ತದೆ’ ಎಂದು ತಿಳಿಸಿದ್ದಾರೆ.
ಶಿವಸೇನೆಯ ಠಾಕ್ರೆ ಬಣದ ಅನೇಕ ಶಾಸಕರು ನಮ್ಮ ಬಳಿಗೆ ಬರುತ್ತಿದ್ದಾರೆ. ಆದ್ರೆ ನಾವು ಕಾದು ನೋಡುವ ಪರಿಸ್ಥಿತಿಯಲ್ಲಿದ್ದೇವೆ. ಇದೇ ಕಾರಣಕ್ಕಾಗಿಯೇ ಆದಿತ್ಯ ಠಾಕ್ರೆ ಸರ್ಕಾರ ಇಂದು, ನಾಳೆ ಬೀಳುತ್ತದೆ ಎಂದು ಪ್ರತಿ ದಿನ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾವು ಈಗ ಏಳು ತಿಂಗಳಿನಿಂದ ಸರ್ಕಾರವನ್ನು ನಡೆಸುತ್ತಿರುವುದು ವಾಸ್ತವ. ಶರದ್ ಪವಾರ್ ಕೂಡ ಉದ್ಧವ್ ಠಾಕ್ರೆ ಅವರಿಗೆ ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲರೂ ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಗೋಗಾವಾಲೆ ಅಭಿಪ್ರಾಯಪಟ್ಟಿದ್ದಾರೆ.
ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ಶಿಂಧೆ ಬಣದ ವಿರುದ್ಧ ಕಿಡಿ ಕಾರಿದ್ದಾರೆ. ‘ಶಿಂಧೆಯವರು ಅಸಂವಿಧಾನಿಕ ಸರ್ಕಾರವನ್ನು ಹೇಗೆ ನಡೆಸುತ್ತಿದ್ದಾರೆಂದು ಮಹಾರಾಷ್ಟ್ರದ ಜನರಿಗೆ ತಿಳಿದಿದೆ. ಅದು ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ’ ಎಂದಿದ್ದಾರೆ. ಕಳೆದ ವರ್ಷ ಶ್ರೀ ಠಾಕ್ರೆ ವಿರುದ್ಧ ಬಂಡಾಯವೆದ್ದು ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಹೊರಹಾಕಿದ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ, ಚುನಾವಣಾ ಆಯೋಗವು ಶಿವಸೇನೆ ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಯನ್ನು ನೀಡಿದೆ. ಸದ್ಯ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಪಕ್ಷದ ಚಿಹ್ನೆ ನೀಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ, ಉದ್ಧವ್ ಠಾಕ್ರೆ ನೇತೃತ್ವದ ಬಣ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಕುರಿತು ವಿಚಾರಣೆ ಇನ್ನೂ ನಡೆಯುತ್ತಿದೆ.