ಚಂದ್ರನ ಮೇಲಿನ ಅಧ್ಯಯನಕ್ಕೆ ಕೇವಲ 10 ದಿನಗಳು ಮಾತ್ರ ಬಾಕಿ – ಕೆಲಸ ಚುರುಕುಗೊಳಿಸಿದ ರೋವರ್‌!

ಚಂದ್ರನ ಮೇಲಿನ ಅಧ್ಯಯನಕ್ಕೆ ಕೇವಲ 10 ದಿನಗಳು ಮಾತ್ರ ಬಾಕಿ – ಕೆಲಸ ಚುರುಕುಗೊಳಿಸಿದ ರೋವರ್‌!

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ಬಳಿಕ ಇಸ್ರೋ ವಿಜ್ಞಾನಿಗಳ ಸಂಶೋಧನೆ, ಅಧ್ಯಯನಕ್ಕೆ ವೇಗ ಸಿಕ್ಕಿದೆ. ಹಂತ ಹಂತವಾಗಿ ಚಂದ್ರನ ಫೋಟೋ ಕಳುಹಿಸುತ್ತಿರುವ ರೋವರ್‌ ಇದೀಗ ಚಂದ್ರನ ಮೇಲಿನ ಕುಳಿಗಳ ಅಧ್ಯಯನ ಆರಂಭಿಸಿದೆ. ಉಲ್ಕಾಪಾತಗಳಿಂದ ಸಂಭವಿಸಿರುವ ಕುಳಿಗಳಲ್ಲಿ ರೋವರ್ ಅಧ್ಯಯನ ಆರಂಭಿಸಿದೆ. ಈ ಅಧ್ಯಯನದ ಮಾಹಿತಿಯನ್ನು ರೋವರ್ ಇಸ್ರೋ ಕೇಂದ್ರಕ್ಕೆ ರವಾನಿಸಿದೆ.

ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಸಮಯಕ್ಕೆ ವಿರುದ್ಧವಾಗಿ ರೋವರ್ ಕೆಲಸ ಮಾಡುತ್ತಿದ್ದು, ಆರು ಚಕ್ರಗಳ ರೋವರ್ ಮೂಲಕ ಗುರುತಿಸಲಾಗದ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸಲು ISRO ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. 100 ಮಿಲಿ ಮೀಟರ್ ಆಳವಾದ ಕುಳಿ ಮೇಲೆ ರೋವರ್ ಅಧ್ಯಯನ ಆರಂಭಿಸಿದೆ. ಕುಳಿಯ ನಿರ್ದಿಷ್ಟ ಗಾತ್ರ, ಈ ಕುಳಿಗಳ ಮೇಲೆ ಯಾವುದಾದರು ಉಲ್ಕಾಪಾತದ ಖನಿಜಾಂಶ ಅಥವಾ ಇತರ ಅಂಶಗಳನ್ನು ರೋವರ್ ಪತ್ತೆ ಮಾಡುತ್ತಿದೆ.

ಇದನ್ನೂ ಓದಿ: ಚಂದ್ರಯಾನ -3 ಗೆ ಯಶಸ್ಸು – ಇಬ್ಬರು ಮಕ್ಕಳಿಗೆ ʼವಿಕ್ರಮ್, ಪ್ರಗ್ಯಾನ್ʼ ಎಂದು ಹೆಸರಿಟ್ಟ ಕುಟುಂಬ

ಚಂದ್ರನ ಮಣ್ಣಿನ ಮೇಲೆ, ಮಣ್ಣಿನಿಂದ ಕೊಂಚ ಕೆಳಗೆ, ಮತ್ತು ಕೊಂಚ ಕೆಳಗೆ ಹೀಗೆ 10 ಸೆಂ.ಮೀ. ಆಳದವರೆಗಿನ ಉಷ್ಣತೆಯನ್ನು ಅಳೆದು ಅದರ ಮಾಹಿತಿಯನ್ನು ಇಸ್ರೋಗೆ ಕಳುಹಿಸಿವೆ. ಅದರ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಮಣ್ಣಿನ ಆಳಕ್ಕೆ ಹೋದಷ್ಟೂಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಮಣ್ಣಿನ ಮೇಲ್ಮೈಗೂ, ಕೆಳಭಾಗಕ್ಕೂ ಉಷ್ಣತೆಯಲ್ಲಿ ಅಗಾಧ ವ್ಯತ್ಯಾಸವಿರುವುದು ಗೋಚರಿಸಿದೆ.ವಿಕ್ರಂ ಲ್ಯಾಂಡರ್‌ನಲ್ಲಿದ್ದ ‘ಚಾಸ್ಟ್‌’ ಉಪಕರಣವು ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ಮೇಲೆ 70 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಿದ್ದು, ಮಣ್ಣಿನ ಕೆಳಗೆ 10 ಸೆಂ.ಮೀ. ಆಳದಲ್ಲಿ -10 ಡಿಗ್ರಿ ಸೆ. ಉಷ್ಣತೆಯಿದೆ ಎಂಬ ಸಂದೇಶವನ್ನು ಕಳುಹಿಸಿದೆ.

ಈಗಾಗಲೇ ವಿಜ್ಞಾನಿಗಳು ರೋವರ್ ಮತ್ತು ಲ್ಯಾಂಡರ್ ಗಳ ಮೂಲಕ ತಾವಂದುಕೊಂಡಿದ್ದ ಗುರಿಗಳ ಪೈಕಿ ಎರಡು ಮುಖ್ಯ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಿದ್ದು, ಮೂರನೇ ಗುರಿ ಸಾಧಿಸುವಂತೆ ರೋವರ್ ಕಾರ್ಯಾರಂಭ ಮಾಡುತ್ತಿದೆ. ಹೀಗಾಗಿ ಪ್ರಗ್ಯಾನ್ ರೋವರ್ ಸಮಯದ ವಿರುದ್ಧದ ಸ್ಪರ್ಧೆಯಲ್ಲಿದೆ. ರೋವರ್ ಚಂದ್ರನ ದಕ್ಷಿಣ ಧ್ರುವದ ಸಾಧ್ಯವಾದಷ್ಟು ದೂರವನ್ನು ಆವರಿಸುವಂತೆ ಮಾಡುವುದು ನಮ್ಮ ಗಮನವಾಗಿದೆ, ಇದರಿಂದಾಗಿ ಅದು ಹೆಚ್ಚಿನ ಪ್ರಯೋಗಗಳನ್ನು ನಡೆಸುತ್ತದೆ ಮತ್ತು ನಾವು ಇಲ್ಲಿ ಭೂಮಿಯ ಮೇಲೆ ಡೇಟಾವನ್ನು ಪಡೆಯುತ್ತೇವೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.

suddiyaana