ಈರುಳ್ಳಿ ಬೆಲೆ ದಿಢೀರ್‌ ಕುಸಿತ – ಕಾರಣ ಏನು ಗೊತ್ತಾ?

ಈರುಳ್ಳಿ ಬೆಲೆ ದಿಢೀರ್‌ ಕುಸಿತ – ಕಾರಣ ಏನು ಗೊತ್ತಾ?

ಬೆಂಗಳೂರು: ಈರುಳ್ಳಿ ಬೆಳೆಗಾರರಿಗೆ ಮತ್ತೊಮ್ಮೆ ಅಕಾಲಿಕ ಮಳೆಯ ಮೂಲಕ ಸಂಕಷ್ಟ ಸೃಷ್ಟಿಯಾಗಿದೆ. ಈರುಳ್ಳಿ ಸಗಟು ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವ ಮೊದಲೇ ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ.

ಕಳೆದ ವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ, ವಿಜಯಪುರ, ಗದಗ ಜಿಲ್ಲೆಯಿಂದ ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ದಾಸ್ತಾನು ಬಂದಿದೆ. ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ ಬರುತ್ತಿದೆ. ಹೀಗಾಗೀ ಈರುಳ್ಳಿ ಬೆಲೆ ಇಳಿಕೆಯಾಗಿದೆ.

ಇದನ್ನೂ ಓದಿ: ಕೆಆರ್ ಪುರಂ – ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದಲ್ಲಿ ಅಂತಿಮ ಕಾಮಗಾರಿ – ಸಂಚಾರಕ್ಕೆ ಮುಕ್ತ ಯಾವಾಗ?

ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 8-10 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿ ಬೆಲೆ 5-8 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 20 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿಗೆ 10-12 ರೂ. ಮಾತ್ರ ಬೆಲೆಯಿದೆ.

100 ರೂ.ಗೆ ಏಳು-ಎಂಟು ಕೆಜಿ ಈರುಳ್ಳಿ ಮಾರಾಟ ಆಗುತ್ತಿದ್ದು ಇದೀಗ ಮಳೆಯಾಗುತ್ತಿರುವ ಕಾರಣಕ್ಕೆ ತೇವಾಂಶದಿಂದ ಈರುಳ್ಳಿ ಕೊಳೆಯಬಹುದು ಎಂಬ ಆತಂಕ ವಿಜಯಪುರ, ಗದಗ, ಚಿತ್ರದುರ್ಗ ಭಾಗದ ರೈತರಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆ ನಾಶದ ಭಯದಿಂದ ದಾಸ್ತಾನಿನಲ್ಲಿ ಇಟ್ಟಿದ್ದ ಈರುಳ್ಳಿಯನ್ನು ಹೊರತೆಗೆದು ಮಾರುಕಟ್ಟೆಗೆ ತರುತ್ತಿದ್ದಾರೆ. ಸೀಸನ್‌ ಅಲ್ಲದ ಸಾಮಾನ್ಯ ದಿನಗಳಲ್ಲಿ ಗರಿಷ್ಠ 30ರಿಂದ 35 ಸಾವಿರ ಚೀಲ ಈರುಳ್ಳಿ ಬರುತ್ತದೆ. ಆದರೆ, ಮಂಗಳವಾರ ಯಶವಂತಪುರ ಮಾರುಕಟ್ಟೆಗೆ 308 ಲಾರಿಗಳಲ್ಲಿ 47,676, ದಾಸನಪುರಕ್ಕೆ 6,318 ಸೇರಿ ಒಟ್ಟು 53,994 ಚೀಲ ಈರುಳ್ಳಿ ಬಂದಿದೆ. ಅದಲ್ಲದೇ ಸೋಮವಾರ ಬರೋಬ್ಬರಿ 72 ಸಾವಿರ ಚೀಲ ಈರುಳ್ಳಿ ಬಂದಿತ್ತು. ಹೀಗಾಗಿ ಪೂರೈಕೆ ಹೆಚ್ಚಾಗಿದ್ದು ಭಾರಿ ಬೆಲೆ ಇಳಿಕೆಯಾಗಿದೆ. ಒಟ್ಟಿನಲ್ಲಿ ಮಳೆ ಕಾರಣಕ್ಕೆ ಈರುಳ್ಳಿ ಬೆಲೆ ಕಡಿಮೆಯಾಗಿದೆ ಎಂದೇ ಹೇಳಬಹುದು.

 

suddiyaana