ಸೆಂಚುರಿ ಬಾರಿಸಿದ್ದ ಈರುಳ್ಳಿ ಬೆಲೆಯಲ್ಲಿ ಇಳಿಕೆ – ಗ್ರಾಹಕರ ಮೊಗದಲ್ಲಿ ಸಂತಸ

ಸೆಂಚುರಿ ಬಾರಿಸಿದ್ದ ಈರುಳ್ಳಿ ಬೆಲೆಯಲ್ಲಿ ಇಳಿಕೆ – ಗ್ರಾಹಕರ ಮೊಗದಲ್ಲಿ ಸಂತಸ

ನವೆಂಬರ್‌ ತಿಂಗಳ ಆರಂಭದಲ್ಲೇ ಈರುಳ್ಳಿ ಬೆಲೆ ಸೆಂಚುರಿ ಬಾರಿಸಿತ್ತು. ಈರುಳ್ಳಿ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನರು ತತ್ತರಿಸಿದ್ದರು. ಇದೀಗ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗುತ್ತಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ.

ಹೌದು, ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಕೆಜಿ 100 ರೂಪಾಯಿಯಂತೆ ಮಾರಾಟವಾಗುತ್ತಿತ್ತು. ಇದೀಗ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ದಾಸ್ತಾನು ಬಂದ ಹಿನ್ನೆಲೆ ದರ ಇಳಿಕೆ ಆರಂಭವಾಗಿದೆ.

ಕಳೆದ ಎರಡು ವಾರಗಳ ಹಿಂದಷ್ಟೇ ಯಶವಂತಪುರ ಎಪಿಎಂಸಿಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 65 ರೂ.ವರೆಗೆ ತಲುಪಿತ್ತು. ಇದೀಗ ಗುಣಮಟ್ಟದ ಮೊದಲ ದರ್ಜೆಯ ಈರುಳ್ಳಿ ಕೆ.ಜಿ.ಗೆ 50 ರೂ.ಗೆ ಇಳಿದಿದೆ. ಎರಡು ಮತ್ತು ಮೂರನೇ ದರ್ಜೆಯ ಈರುಳ್ಳಿ ದರವೂ ಇಳಿಕೆಯಾಗಿದೆ.

ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ! – ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ

ಯಶವಂತಪುರ ಎಪಿಎಂಸಿಗೆ ಈ ಹಿಂದೆ ವಾರಗಳಲ್ಲಿ ನಿತ್ಯ 2,500 ಟನ್‌ ಈರುಳ್ಳಿ ಬರುತ್ತಿತ್ತು. ಇದೀಗ ಬರೋಬ್ಬರಿ ನಾಲ್ಕು ಸಾವಿರ ಟನ್‌ ಈರುಳ್ಳಿ ಬರುತ್ತಿದೆ. ಮಹಾರಾಷ್ಟ್ರದಿಂದ 2 ಸಾವಿರ ಟನ್‌ ಹಳೆಯ ಈರುಳ್ಳಿ ಬಂದರೆ, ಕರ್ನಾಟಕದ ಚಿತ್ರದುರ್ಗ, ಚಳ್ಳಕೆರೆ, ಗದಗ ಮತ್ತಿತರ ಭಾಗಗಳಿಂದ 2 ಸಾವಿರ ಟನ್‌ನಷ್ಟು ಈರುಳ್ಳಿ ಬಂದಿದೆ. ಹೀಗಾಗಿ, ಬೆಲೆ ಇಳಿಕೆಯಾಗಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಬಿ. ರವಿಶಂಕರ್‌ ತಿಳಿಸಿದರು.

ಈರುಳ್ಳಿ ದರ ಸಮರವನ್ನು ಎದುರಿಸಲು ಕೇಂದ್ರ ಸರ್ಕಾರ ಈ ಬಾರಿ ಮುಂಚಿತವಾಗಿಯೇ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಮಾಡಿಟ್ಟಿದೆ. ಜತೆಗೆ ಗ್ರಾಹಕರಿಗೆ 25 ರೂ.ಗೆ ಈರುಳ್ಳಿಯನ್ನು ಸರ್ಕಾರ ವತಿಯಿಂದಲೇ ಮಾರಾಟ ಮಾಡುವುದಾಗಿ ಹೇಳಿತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಅತಿವೃಷ್ಟಿಯಿದ್ದರೂ ಬೆಲೆ ನಿಯಂತ್ರಣದಲ್ಲಿದೆ.

ಡಿಸೆಂಬರ್ನಲ್ಲಿ ಮತ್ತಷ್ಟು ಅಗ್ಗ!

ಡಿಸೆಂಬರ್‌ನಲ್ಲಿ ಮತ್ತೆ ಮಹಾರಾಷ್ಟ್ರದ ಕೆಂಪು ಈರುಳ್ಳಿ ಬೆಳೆ ಕೊಯ್ಲಿಗೆ ಬರಲಿದೆ. ಜತೆಗೆ, ಗುಜರಾತ್‌, ರಾಜಸ್ಥಾನದ ಬೆಳೆಯೂ ಬರಲಿದೆ. ಮಹಾರಾಷ್ಟ್ರದ ಕೆಂಪು ಈರುಳ್ಳಿ ಹೆಚ್ಚು ದಿನ ಸಂಗ್ರಹಿಸಲು ಯೋಗ್ಯವಾದ ಈರುಳ್ಳಿಯಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿಈರುಳ್ಳಿ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

  • ಎಪಿಎಂಸಿಯಲ್ಲಿಈರುಳ್ಳಿ ದರ ( ಪ್ರತಿ ಕೆಜಿ)
  • ಮೊದಲ ದರ್ಜೆ ಈರುಳ್ಳಿ – 40 ರಿಂದ 50 ರೂ.
  • ಎರಡನೇ ದರ್ಜೆ ಈರುಳ್ಳಿ – 30 ರಿಂದ40 ರೂ.
  • ಮೂರನೇ ದರ್ಜೆ ಈರುಳ್ಳಿ – 20 ರಿಂದ 30 ರೂ.

Shwetha M