ಭಾರತ್‌ ಜೋಡೋ ಯಾತ್ರೆಗೆ ವರ್ಷದ ಸಂಭ್ರಮ –  ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದ ರಾಹುಲ್‌ ಗಾಂಧಿ  

ಭಾರತ್‌ ಜೋಡೋ ಯಾತ್ರೆಗೆ ವರ್ಷದ ಸಂಭ್ರಮ –  ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದ ರಾಹುಲ್‌ ಗಾಂಧಿ  

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಭಾರತ್‌ ಜೋಡೋ ಯಾತ್ರೆ ನಡೆಸಲಾಗಿತ್ತು. ಈ ಯಾತ್ರೆ ಆರಂಭಗೊಂಡು ಇಂದಿಗೆ (ಸೆ.7) ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿದ್ದಾರೆ. ದ್ವೇಷ ತೊಲಗುವವರೆಗೆ.. ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ 7 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೊ ಯಾತ್ರೆ ನಡೆಸಲಾಗಿತ್ತು. ಈ ಯಾತ್ರೆ ಸುಮಾರು 12 ರಾಜ್ಯಗಳಲ್ಲಿ ಒಟ್ಟು 136 ದಿನಗಳ ಕಾಲ ನಡೆದಿತ್ತು.  ಭಾರತ್‌ ಜೋಡೋ ಯಾತ್ರೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ರಾಹುಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ 4 ಸಾವಿರ ಕಿ.ಮೀ ಭಾರತ್ ಜೋಡೊ ಯಾತ್ರೆಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾವೆಲ್ಲ ಹಿಂದೂಗಳು.. ಹಿಂದೂ ಧರ್ಮದ ವಿರುದ್ಧ ಮಾತಾಡಿಲ್ಲ..- ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಪರಮೇಶ್ವರ್‌

‘ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಕೋಟಿ ಹೆಜ್ಜೆಗಳು ನೀಡಿದ ಏಕತೆ ಮತ್ತು ಪ್ರೀತಿಯು ದೇಶದ ಉತ್ತಮ ನಾಳೆಗೆ ಅಡಿಪಾಯವಾಗಿದೆ. ದ್ವೇಷ ನಿರ್ಮೂಲನೆಯಾಗುವವರೆಗೆ, ಭಾರತ ಒಂದಾಗುವವರೆಗೆ ಪಯಣ ಮುಂದುವರೆಯಲಿದೆ. ಇದು ನನ್ನ ಭರವಸೆ’ ಎಂದು ಬರೆದುಕೊಂಡಿದ್ದಾರೆ.

ಭಾರತ್‌ ಜೋಡೋ ಯಾತ್ರೆಯ ಮೊದಲ ವರ್ಷಾಚರಣೆ ನೆನಪಿಗೆ ದೇಶದ ಎಲ್ಲ ಜಿಲ್ಲೆಗಳಲ್ಲೂ ಸೆ.7ರಂದು “ಭಾರತ್‌ ಜೋಡೋ’ ಯಾತ್ರೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ. ರಾಜ್ಯಮಟ್ಟದ ಪ್ರಮುಖ ಕಾರ್ಯಕ್ರಮ ಗುರುವಾರ ರಾಮನಗರದಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತಿತರ ಸಚಿವರು ಹಾಗೂ ಮುಖಂಡರು 4 ಕಿ.ಮೀ. ದೂರದವರೆಗೆ ಕಾಲ್ನಡಿಗೆ ಮೂಲಕ ಸಂಚರಿಸಲಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಸಂಜೆ 5 ಗಂಟೆಗೆ ಕಾಲ್ನಡಿಗೆ ಆರಂಭವಾಗಲಿದ್ದು, ರಾತ್ರಿ 7 ಗಂಟೆವರೆಗೆ ನಡೆಯಲಿದೆ. ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶಾದ್ಯಂತ 722 ಭಾರತ್‌ ಜೋಡೋ ಯಾತ್ರೆಗಳನ್ನು ಏರ್ಪಡಿಸಿದೆ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಈ ನಡೆ ಮಹತ್ವ ಪಡೆದಿದೆ.

suddiyaana