ಒಂದು ವಾರಗಳ ಕಾಲ ಕರುನಾಡಿನಲ್ಲಿ ಮಳೆಯ ನರ್ತನ – ಕಟ್ಟೆಚ್ಚರ ವಹಿಸೋಕೆ IMD ಸೂಚನೆ

ಒಂದು ವಾರಗಳ ಕಾಲ ಕರುನಾಡಿನಲ್ಲಿ ಮಳೆಯ ನರ್ತನ – ಕಟ್ಟೆಚ್ಚರ ವಹಿಸೋಕೆ IMD ಸೂಚನೆ

ಈಗಾಗಲೇ ಮಳೆಯಿಂದ ತತ್ತರಿಸಿ ಹೋಗಿರುವ ಕರ್ನಾಟಕದ ಜನರಿಗೆ ಭಾರತೀಯ ಹವಾಮಾನ ಇಲಾಖೆ ಬಿಗ್ ಶಾಕ್ ನೀಡಿದೆ.  ಮುಂದಿನ ಏಳು ದಿನ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು IMD  ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ, ಕೆಲವು ಕಡೆಗಳಲ್ಲಿ ಧಾರಾಕಾರ ಮಳೆಯಾವ ನಿರೀಕ್ಷೆಯಿದೆ.   ಮಧ್ಯ ಮತ್ತು ಪೂರ್ವ ಭಾರತದ ಮೂಲಕ ಸಾಗುವ ಮುಂಗಾರು ಮಾರುತದಿಂದ ಮಹಾರಾಷ್ಟ್ರ-ಕರ್ನಾಟಕ ಕರಾವಳಿಯುದ್ದಕ್ಕೂ ಭಾರಿ ಮಳೆಯಾಗಲಿದೆ ಎಂದು IMD ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಕರಾವಳಿಯಲ್ಲಿ ಮುಂದಿನ ಎರಡು ದಿನ ಇದೇ ಪರಿಸ್ಥಿತಿ ಮುಂದುವರೆಯುವ ನಿರೀಕ್ಷೆಯಿದೆ. ನಂತರ ಕ್ರಮೇಣ ತೀವ್ರತೆಯು ಕಡಿಮೆಯಾಗಲಿದೆ.  ಉತ್ತರ ಒಳನಾಡಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜುಲೈ 3 ಮತ್ತು 4 ರಂದು ಗಂಟೆಗೆ 40 ರಿಂದ 50 ಕಿಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಧಾರವಾಡದಲ್ಲೂ ಭಾರಿ ಮಳೆ ನಿರೀಕ್ಷೆಯಿದೆ. ಇನ್ನೂ ಬೀದರ್, ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂಗಾರು ಅವಧಿಯುದ್ದಕ್ಕೂ ಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

 ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗಿನಲ್ಲಿ ಇಂದು ಮತ್ತು ನಾಳೆ ಭಾರಿ ಮಳೆ ನಿರೀಕ್ಷಿಸಲಾಗಿದೆ. ಇತರ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ. ಜುಲೈ 7 ರಿಂದ ರಾಜ್ಯಾದ್ಯಂತ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದ್ದು,  ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಜುಲೈ 9 ರವರೆಗೆ ಮುಂದುವರಿಯಬಹುದು ಎನ್ನಲಾಗಿದೆ.

ಕಟ್ಟೆಚ್ಚರಕ್ಕೆ ವಹಿಸಲು ಸೂಚನೆ

ಪ್ರವಾಹ, ಭೂಕಿಸಿತದಂತಹ ಪ್ರದೇಶಗಳಲ್ಲಿರುವ ಜನರು ಕಟ್ಟೆಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಪರಿಸ್ಥಿತಿಯನ್ನು ಇಲಾಖೆ ಸೂಕ್ಷ್ಮವಾಗಿ ಪರಿಶಿಲಿಸುತ್ತಿದ್ದು,ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿರುವುದಾಗಿ ಹವಾಮಾನ ಇಲಾಖೆ  ತಿಳಿಸಿದೆ.

Kishor KV