ಮೀನುಗಾರರ ಬಲೆಗೆ ಬಿದ್ದ 22 ಕೆ.ಜಿ ತೂಕದ ಗೋಳಿ ಮೀನು – ಒಂದು ಮೀನಿಗೆ ಸಿಕ್ಕಿದ್ದು ಲಕ್ಷ.. ಲಕ್ಷ.. ಬೆಲೆ.!

ಮೀನುಗಾರರ ಬಲೆಗೆ ಬಿದ್ದ 22 ಕೆ.ಜಿ ತೂಕದ ಗೋಳಿ ಮೀನು – ಒಂದು ಮೀನಿಗೆ ಸಿಕ್ಕಿದ್ದು ಲಕ್ಷ.. ಲಕ್ಷ.. ಬೆಲೆ.!

ಉಡುಪಿ: ಮೀನುಗಾರರೊಬ್ಬರ ಬಲೆಗೆ ಬೆಲೆಬಾಳುವ ಮೀನೊಂದು ಬಿದ್ದಿದ್ದು, ಭರ್ಜರಿ ಲಾಭ ತಂದುಕೊಟ್ಟಿದೆ. ಧನ್ಯ ಫಂಡರಿ ಹೆಸರಿನ ದೋಣಿ, ಸೋಮವಾರ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬಲೆಗೆ ಭಾರೀ ಮೀನೊಂದು ಬಿದ್ದಿತ್ತು. ಬಲೆಗೆ ಭರ್ಜರಿಯಾಗಿಯೇ ಮೀನುಗಳು ಸಿಕ್ಕಿವೆ ಎಂದು ಮೀನುಗಾರರು ಖುಷಿಯಲ್ಲೇ ಬಲೆಯೆಳೆದಿದ್ದಾರೆ. ನೋಡಿದರೆ 22 ಕೆ.ಜಿ ತೂಕದ ಗೋಳಿ ಮೀನು ಬಲೆಗೆ ಬಿದ್ದಿತ್ತು. ಇದನ್ನ ನೋಡಿ ಖುಷಿಯಾದ ಮೀನುಗಾರರು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು 22 ಕೆ.ಜಿ ತೂಕದ ಗೋಳಿ ಮೀನನ್ನು 1.85 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ.

ಇದನ್ನೂ ಓದಿ:  ಅಮ್ಮನನ್ನು ಸಂಕಷ್ಟದಿಂದ ಪಾರು ಮಾಡಿದ ಪುಟಾಣಿ ..! – ಕಂದನ ಸಮಯಪ್ರಜ್ಞೆಗೆ ಎಲ್ಲರ ಮೆಚ್ಚುಗೆ

ಗೋಳಿ ಮೀನನ್ನು ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗೋಳಿ ಮೀನಿನ ವೈಜ್ಞಾನಿಕ ಹೆಸರು ಘೋಲ್ ಫಿಶ್. ಇದು ಸಮುದ್ರದಾಳದಲ್ಲಿ ಜೀವಿಸುವ ಜಲಚರವಾಗಿದೆ. ಅರಬ್ಬಿ ಸಮುದ್ರ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸಾಗರಗಳಲ್ಲಿ ಈ ಘೋಲ್ ಫಿಶ್ ಕಂಡು ಬರುತ್ತದೆ. ಘೋಲ್ ಫಿಶ್ ವಾಯು ಚೀಲವನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸೋದರಿಂದ ವಿದೇಶದಲ್ಲಿ ಹೆಚ್ಚು ಬೇಡಿಕೆ. ಈ ಮೀನು ಸುಮಾರು ಒಂದು ಮೀಟರ್ ವರೆಗೂ ಬೆಳೆಯುತ್ತದೆ. 30 ಕೆಜಿ ತೂಕದ ಘೋಲ್ ಫಿಶ್ ಗೆ 5 ಲಕ್ಷ ರೂಪಾಯಿಯವರೆಗೂ ಬೆಲೆ ಇದೆ.

ಇನ್ನು ಈ ಬಾರಿ ಕರಾವಳಿಯಲ್ಲಿ ಮೀನುಗಳು ಹೇರಳವಾಗಿ ಬಲೆಗೆ ಬೀಳುತ್ತಿವೆ. ಬೂತಾಯಿ, ಬಂಗುಡೆ, ಸಿಗಡಿ ಸಹಿತ ವಿವಿಧ ಮೀನುಗಳು ಧಾರಾಳವಾಗಿಯೇ ಸಿಗುತ್ತಿವೆ. ಡಿಸೆಂಬರ್ ಅಂತ್ಯಕ್ಕೆ ಹೆಚ್ಚಿನ ಮೀನುಗಳು ಲಭ್ಯವಾಗುತ್ತಿವೆ. ಚಂಡಮಾರುತಗಳ ಪ್ರಭಾವದಿಂದ ಮೀನುಗಳು ಕರಾವಳಿಯತ್ತ ವಲಸೆ ಬಂದಿರಬಹುದು ಎಂದು ಮಲ್ಪೆ ಮೀನುಗಾರರು ಅಭಿಪ್ರಾಯ ಪಟ್ಟಿದ್ದಾರೆ.

suddiyaana