ಟೆಸ್ಟ್ ಸರಣಿ ಗೆದ್ದ ಹುಮ್ಮಸ್ಸಲ್ಲಿ ಟೀಮ್ ಇಂಡಿಯಾ – ಮಾರ್ಚ್ 17ರಿಂದ ಏಕದಿನ ಸರಣಿ ಆರಂಭ

ಟೆಸ್ಟ್ ಸರಣಿ ಗೆದ್ದ ಹುಮ್ಮಸ್ಸಲ್ಲಿ ಟೀಮ್ ಇಂಡಿಯಾ –  ಮಾರ್ಚ್ 17ರಿಂದ ಏಕದಿನ ಸರಣಿ ಆರಂಭ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್  ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಸತತ 4ನೇ ಬಾರಿ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನ ಗೆದ್ದುಕೊಂಡಿದೆ. ಟೆಸ್ಟ್ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಮಾರ್ಚ್ 17 ರಿಂದ ಶುರುವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ತಂಡವು 3 ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ: ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಸಿಡಿಸಿದ ಗಿಲ್ – ಬೇಗ ಔಟಾದರೂ ರೋಹಿತ್ ಶರ್ಮಾ ದಾಖಲೆ.!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಪಂದ್ಯಗಳು ಮುಂಬೈ, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ನಡೆಯಲಿದೆ. ಮಾರ್ಚ್ 17ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಮಾರ್ಚ್ 19ರಂದು ಎರಡನೇ ಏಕದಿನ ಪಂದ್ಯ ವಿಶಾಖಪಟ್ಟಣಂನ ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಾರ್ಚ್ 22 ರಂದು ಮೂರನೇ ಏಕದಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಏಕದಿನ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಅಹಮದಾಬಾದ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ಶ್ರೇಯಸ್ ಅಯ್ಯರ್ ಬದಲಿಗೆ ಮತ್ತೋರ್ವ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಹಾಗೆಯೇ ತಾಯಿಯ ನಿಧನದ ಕಾರಣ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿರುವ ನಾಯಕ ಪ್ಯಾಟ್ ಕಮಿನ್ಸ್ ಕೂಡ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯವಾಡುತ್ತಿಲ್ಲ. ಹೀಗಾಗಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.

suddiyaana