ನಮ್ಮ ಮೆಟ್ರೋದಲ್ಲಿ ಹುಡುಗಿಯ ವಿಡಿಯೋ ಮಾಡಿದ್ದ ಆರೋಪಿ ಅರೆಸ್ಟ್ – ಬೆಂಗಳೂರಿನ ಪೀಣ್ಯ ಬಳಿ ಬಂಧನ

ನಮ್ಮ ಮೆಟ್ರೋದಲ್ಲಿ ಹುಡುಗಿಯ ವಿಡಿಯೋ ಮಾಡಿದ್ದ ಆರೋಪಿ ಅರೆಸ್ಟ್  – ಬೆಂಗಳೂರಿನ  ಪೀಣ್ಯ ಬಳಿ ಬಂಧನ

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ ಆರೋಪಿಯನ್ನ  ಪೊಲೀಸರು ಬಂಧಿಸಿದ್ದಾರೆ. Metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಿದ್ದ ದಿಗಂತ್ ಎಂಬಾತನನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಮೂಲದ ದಿಗಂತ್ನನ್ನು  ಬೆಂಗಳೂರಿನ  ಪೀಣ್ಯ ಬಳಿ ಬಂಧನ ಮಾಡಲಾಗಿದೆ. metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಲಾಗಿತ್ತು. ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದು, ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್‌ ಆಗಿದೆ.

ಈ ಸಂಬಂಧ ಇನ್‌ಸ್ಟಾ ಪೇಜ್‌ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ವಿಡಿಯೋ ಅಪ್ಲೋಡ್‌ ಮಾಡಿದವರ ಪತ್ತೆಗೆ ಬಲೆ ಬೀಸಿದ್ದರು. ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಈ ಘಟನೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಪರಿಚಿತನೋರ್ವ ಇನ್ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು’ ಎಂದು ಒಬ್ಬರು ಹೇಳಿದ್ದರು. ಅಲ್ಲದೇ ಈ ಬಗ್ಗೆ ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ. ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ತಕ್ಷಣ ಬೆಂಗಳೂರು ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರಿಂದ ಎಚ್ಚೆತ ಬನಶಂಕರಿ ಠಾಣೆ ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡಿದ್ದರು.

Kishor KV

Leave a Reply

Your email address will not be published. Required fields are marked *