ಇವರ ಆಟೋದಲ್ಲಿ ಪ್ರಯಾಣಿಸಿದ್ರೆ ಟೊಮ್ಯಾಟೊ ಫ್ರೀ.. ಆದ್ರೆ ಷರತ್ತು ಅನ್ವಯ!

ಇವರ ಆಟೋದಲ್ಲಿ ಪ್ರಯಾಣಿಸಿದ್ರೆ ಟೊಮ್ಯಾಟೊ ಫ್ರೀ.. ಆದ್ರೆ ಷರತ್ತು ಅನ್ವಯ!

ಚಂಡೀಗಢ: ಸದ್ಯ ದೇಶದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯೇ ಟ್ರೆಂಡ್  ವಿಚಾರ. ಜನ ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಟೊಮ್ಯಾಟೊ ಬಲು ದುಬಾರಿ.. ಇದು ಶ್ರೀಮಂತರು ಮಾತ್ರ ಕೊಳ್ಳುವ ತರಕಾರಿ ಅನ್ನುವಷ್ಟರ ಮಟ್ಟಿಗೆ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಗಗನ ಕುಸುಮಾವಾಗಿರುವ ಟೊಮ್ಯಾಟೊ ಫ್ರೀಯಾಗಿ ಸಿಕ್ಕರೆ ಹೇಗೆ? ಜನರು ಟೊಮ್ಯಾಟೊ ಕೊಳ್ಳಲು ಮುಗಿಬೀಳುತ್ತಾರೆ. ಇಲ್ಲೊಬ್ಬರು ದುಬಾರಿ ಟೊಮ್ಯಾಟೊ ಹಣ್ಣನ್ನು ಉಚಿತವಾಗಿ ನೀಡುತ್ತಿದ್ದಾರೆ!

ಟೊಮ್ಯಾಟೋ ಬೆಲೆ ಗಗನಕ್ಕೀರಿದೆ. ಟೊಮ್ಯಾಟೋ ಬೆಳೆ ಬೆಳೆಯುವವರು ಕೋಟ್ಯಧಿಪತಿಗಳಾಗುತ್ತಿದ್ದಾರೆ. ಟೊಮ್ಯಾಟೋ ರಕ್ಷಣೆಗೆ ಬೌನರ್ಸ್‌ ಗಳನ್ನು ನೇಮಕ ಮಾಡಲಾಗುತ್ತಿದೆ. ಟೊಮ್ಯಾಟೋಗಾಗಿ ಕೊಲೆಯೂ ನಡೆದಿದೆ. ಆದರೆ ಚಂಡೀಗಢ ಮೂಲದ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣಿಸಿದರೆ ಉಚಿತವಾಗಿ ಟೊಮ್ಯಾಟೊವನ್ನು ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಎಸಿ ಬಸ್‌ನಲ್ಲಿ ಸೊಳ್ಳೆ ಕಾಟ! – ʼಸೊಳ್ಳೆಗೆ ಮುಕ್ತಿ ಕೊಡಿಸಿ ಎಂದ ಪ್ರಯಾಣಿಕ

ಕಳೆದ ಹಲವಾರು ವರ್ಷಗಳಿಂದ ಆಟೋ ಓಡಿಸುತ್ತಿರುವ ಅರುಣ್‌, 12 ವರ್ಷಗಳಿಂದ ಭಾರತೀಯ ಸೇನೆಯ ಸೈನಿಕರಿಗೆ ಉಚಿತ ಆಟೋ ರಿಕ್ಷಾ ಸವಾರಿಯನ್ನು ನೀಡಿದ್ದಾರೆ. ಅವರ ಆಟೋದಲ್ಲಿ ಈ ಕುರಿತು ಬೋರ್ಡ್‌ ಹಾಕಿದ್ದಾರೆ. ಇದರೊಂದಿಗೆ ಗರ್ಭಿಣಿಯರಿಗೆ ಆಸ್ಪತ್ರೆಗೆ ಸಾಗಿಸಲು ಉಚಿತವಾಗಿ ತಮ್ಮ ಆಟೋ ಪಯಣವನ್ನು ನೀಡುತ್ತಾರೆ. ಇದೀಗ ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಟೊಮ್ಯಾಟೊ ನೀಡುವುದಾಗಿ ಅವರು ಹೇಳಿದ್ದಾರೆ. ತನ್ನ ರಿಕ್ಷಾದಲ್ಲಿ ಐದು ಬಾರಿ ಪ್ರಯಾಣ ಮಾಡಿದರೆ ಅಂತವರಿಗೆ ನಾನು ಉಚಿತವಾಗಿ 1 ಕೆಜಿ ಟೊಮ್ಯಾಟೊ ನೀಡುತ್ತೇನೆ ಎಂದಿದ್ದಾರೆ.

ಇದಲ್ಲದೇ ಒಂದು ವೇಳೆ  ಅಕ್ಟೋಬರ್‌ ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ ಚಂಡೀಗಢದಲ್ಲಿ ವಾರದಲ್ಲಿ 5 ದಿನ ಉಚಿತವಾಗಿ ರಿಕ್ಷಾ ಸವಾರಿಯನ್ನು ಮಾಡುತ್ತೇನೆ ಎಂದಿದ್ದಾರೆ.

ಉಚಿತ ಟೊಮ್ಯಾಟೊ ನೀಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ  ಪಂಜಾಬ್‌ನ ಗುರುದಾಸ್‌ಪುರದ ಶೂ-ಸ್ಟೋರ್ ಮಾಲೀಕರು ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿದರೆ ತಮ್ಮ ಗ್ರಾಹಕರಿಗೆ 2 ಕೆಜಿ ಟೊಮ್ಯಾಟೊಗಳನ್ನು ಉಚಿತವಾಗಿ ನೀಡುವ ಯೋಜನೆಯನ್ನು ಘೋಷಿಸಿದ್ದರು. ವಿಶೇಷ ಸೇಲ್ ಆಫರ್ ಅಡಿಯಲ್ಲಿ ಗ್ರಾಹಕರು 1,000 ರಿಂದ 1,500 ರೂ.ಗಳ ಬೆಲೆಯ ಶೂಗಳನ್ನು ಖರೀದಿಸಿದರೆ ಅವರು 2 ಕೆಜಿ ಟೊಮ್ಯಾಟೊಗಳನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದರು. ಮಧ್ಯಪ್ರದೇಶದಲ್ಲಿ ಮೊಬೈಲ್ ಅಂಗಡಿಯವನು ತನ್ನ ಅಂಗಡಿಯಿಂದ ಸ್ಮಾರ್ಟ್‌ಫೋನ್ ಖರೀದಿಸುವ ಜನರಿಗೆ ಉಚಿತ ಟೊಮ್ಯಾಟೊ ನೀಡುತ್ತಿದ್ದಾನೆ.

suddiyaana