ಆಷಾಢ ಮಾಸದ ಮೊದಲ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಸಕಲ ಸಿದ್ಧತೆ – ಭಕ್ತರಿಗೆ 25 ಸಾವಿರ ಮ್ಯಾಂಗೋ ಬರ್ಫಿ
ಜೂನ್ ತಿಂಗಳಲ್ಲಿ ಜ್ಯೇಷ್ಠ ಮಾಸ ಮುಕ್ತಾಯಗೊಂಡು ಆಷಾಢ ಮಾಸ ಆರಂಭವಾಗುತ್ತದೆ. ಆಷಾಢ ಮಾಸದಲ್ಲಿ ಅನೇಕರು ದೇವಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಈ ಹಿನ್ನೆಲೆ ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡ ಅಧಿದೇವತೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು 25 ಸಾವಿರ ಮ್ಯಾಂಗೋ ಬರ್ಫಿ ಸಿದ್ಧವಾಗುತ್ತಿವೆ.
ಇದನ್ನೂ ಓದಿ: ನಂದಿನಿ ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ – ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದೇನು?
ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಸಾವಿರಾರು ಮಂದಿ ಭಕ್ತರು ನಾಡ ಅಧಿದೇವತೆ ದರ್ಶನಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆ ನೂರಡಿ ರಸ್ತೆಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸುಮಾರು 18 ವರ್ಷಗಳಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾ ಬಂದಿದೆ. ಈ ವರ್ಷವೂ ಭಕ್ತಿಗೆ ಪ್ರಸಾದ ವಿತರಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ವರ್ಷ ಭಕ್ತರಿಗೆ ಮ್ಯಾಂಗೋ ಬರ್ಫಿಯನ್ನು ಪ್ರಸಾದದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ.
ವಿದ್ಯಾರಣ್ಯಪುರಂನಲ್ಲಿರುವ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ 8 ಬಾಣಸಿಗರ ತಂಡದಿಂದ ಬರ್ಫಿ ತಯಾರಿಕೆ ಮಂಗಳವಾರ ಶುರುವಾಗಿದೆ. ಮೂರು ದಿನಗಳಲ್ಲಿ25 ಸಾವಿರ ಭರ್ಪಿ ತಯಾರಿಕೆ ಪೂರ್ಣಗೊಳ್ಳಲಿದೆ. 30 ಕೆಜಿ ಮೈದಾ, 200 ಕೆಜಿ ಹಾಲುಕೋವಾ, 400 ಕೆಜಿ ಸಕ್ಕರೆ, 100 ಲೀಟರ್ ಮಾವಿನ ಹಣ್ಣಿನ ಪಲ್ಪ್, 3 ಕೆಜಿ ಪಿಸ್ತಾ, 5 ಕೆಜಿ ಬಾದಾಮಿ, 2 ಟಿನ್ ನಂದಿನಿ ತುಪ್ಪ, 30 ಕೆಜಿ ನಂದಿನಿ ಮಿಲ್ಕ್ ಪೌಡರ್ ಬಳಸಿ ಬರ್ಫಿ ತಯಾರಿಸಲಾಗುತ್ತಿದೆ.
ಬೆಟ್ಟದ ಪಾರ್ಕಿಂಗ್ ಜಾಗದಲ್ಲಿಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಪ್ರಸಾದ ವಿತರಣೆ ಆರಂಭವಾಗಲಿದೆ. ಬೆಳಗ್ಗೆ ಉಪಹಾರಕ್ಕೆ ಪೈನಾಪಲ್ ಕೇಸರ್‌ಬಾತ್, ಪೊಂಗಲ್, ರವಾವಾಂಗೀಬಾತ್ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟಕ್ಕೆ ಕೋಸಂಬರಿ, ಪಲ್ಯ, ಬಿಸಿಬೇಳೆಬಾತ್, ಅನ್ನ ಸಾಂಬಾರ್, ಹಪ್ಪಳ, ಮೊಸರು ಹಾಗೂ ಮ್ಯಾಂಗೋಬರ್ಫಿ ವಿತರಿಸಲಾಗುತ್ತದೆ.