₹1.5 ಲಕ್ಷದ ಚಪ್ಪಲಿ.. ₹80 ಸಾವಿರದ ಜೀನ್ಸ್ ಪ್ಯಾಂಟ್ – ಜೈಲಿನಲ್ಲೇ ಸುಕೇಶ್ ​ನ ದಿಲ್ದಾರ್ ಲೈಫ್..!  

₹1.5 ಲಕ್ಷದ ಚಪ್ಪಲಿ.. ₹80 ಸಾವಿರದ ಜೀನ್ಸ್ ಪ್ಯಾಂಟ್ – ಜೈಲಿನಲ್ಲೇ ಸುಕೇಶ್ ​ನ ದಿಲ್ದಾರ್ ಲೈಫ್..!  

ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಗೆ ಕೋಟಿ ಕೋಟಿ ರೂಪಾಯಿ ಮೊತ್ತದ ಗಿಫ್ಟ್ ಕೊಟ್ಟು, ನೂರಾರು ಕೋಟಿ ವಂಚನೆ ಪ್ರಕರಣದಲ್ಲೂ ತಗ್ಲಾಕ್ಕೊಂಡಿದ್ದ ಮಹಾ ವಂಚಕ ಸುಕೇಶ್​ ಚಂದ್ರಶೇಖರ್​​ನ ಮತ್ತೊಂದು ಅವತಾರ ಜೈಲಿನಲ್ಲೇ ಬಟಾ ಬಯಲಾಗಿದೆ.

ದೆಹಲಿಯ ಮಾಂಡೋಲಿ ಜೈಲಿನಲ್ಲಿ ಬಂಧಿಯಾಗಿರುವ ಸುಕೇಶ್​ ಚಂದ್ರಶೇಖರ್​ನ ಸೆಲ್​​ಗೆ ಇಂದು ಅಧಿಕಾರಿಗಳ ತಂಡ ದಿಢೀರ್ ಅಂತಾ ರೇಡ್ ಮಾಡಿತ್ತು. ಈ ವೇಳೆ ಆತನ ಸೆಲ್​​​ನಲ್ಲಿ ಭಾರಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಸುಮಾರು ಒಂದೂವರೆ ಲಕ್ಷ ಮೊತ್ತದ ಚಪ್ಪಲಿಗಳು, 80 ಸಾವಿರ ರೂಪಾಯಿಯ ಮೂರು ಜೀನ್ಸ್​ ಪ್ಯಾಂಟ್​​ಗಳು ಆತನ ಸೆಲ್​​ನಲ್ಲಿ ಪತ್ತೆಯಾಗಿದೆ. ಇನ್ನು ಜೈಲಿನ ಅಧಿಕಾರಿಗಳು ಜಪ್ತಿ ಮಾಡುತ್ತಲೇ ಸುಕೇಶ್ ಒಂದೇ ಸಮನೆ ಗೊಳೋ ಅಂತಾ ಅತ್ತಿದ್ದಾನೆ.

ಇದನ್ನೂ ಓದಿ : ನ್ಯಾಯ ಕೊಡಿಸಿ ಎಂದು ಮೈಸೂರಿಗೆ ಬಂದ ರಾಖಿ ಸಾವಂತ್ – ತಪ್ಪಾಗಿ ನಮಾಜ್ ಮಾಡಿ ಎದ್ವಾತದ್ವಾ ಟ್ರೋಲ್..!

ಇನ್ನು ಈ ಕಿರಾತಕ ಚಂದ್ರಶೇಖರ್ ಜೈಲಿನಲ್ಲೇ ಸಿಕ್ಕಿಬೀಳ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಈತ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ. ವಂಚನೆ ಕೇಸ್​ನಲ್ಲಿ ತಿಹಾರ್​​ ಜೈಲು ಸೇರಿದ್ದ ಸುಕೇಶ್ ಜೈಲಿನಲ್ಲಿ ಮೊಬೈಲ್​ ಬಳಕೆ ಮಾಡುತ್ತಿದ್ದ ಸುಕೇಶ್. ಅದೂ ಕೂಡ ಮೊಬೈಲ್ ಬಳಕೆಗೆ ಅಂತಾನೇ 15 ದಿನಕ್ಕೊಮ್ಮೆ ಜೈಲು ಸಿಬ್ಬಂದಿಗೆ ₹75 ಲಕ್ಷ ಲಂಚ ನೀಡುತ್ತಿದ್ದ. ಜೈಲಿನಲ್ಲಿ ವಿದೇಶದಿಂದ ತರಿಸಿದ ಸಿಮ್​​ ಕಾರ್ಡ್​ ಬಳಸುತ್ತಿದ್ದ. ತನ್ನ ವ್ಯವಹಾರಗಳು ಕಾಣದಂತೆ ಸೆಲ್​​ಗೆ ಕರ್ಟನ್ ಕೂಡ ಹಾಕಿಸಿಕೊಂಡಿದ್ದ.

ಇನ್ನು ಈ ಸುಕೇಶ್ ಜೈಲಿನಲ್ಲಿದ್ರೂ ತನ್ನ ಕಳ್ಳಾಟ ಬಿಟ್ಟಿರಲಿಲ್ಲ. ಜೈಲಿನಲ್ಲಿದ್ದುಕೊಂಡೇ ಉದ್ಯಮಿಯೊಬ್ಬರ ಪತ್ನಿಯನ್ನ ಯಾಮಾರಿಸಿ ₹200 ಕೋಟಿ ವಂಚಿಸಿದ್ದ. ಸೆಲ್​ನಲ್ಲೂ ಕೂಡ ನಟಿಯರ ಜೊತೆ ತನ್ನ ಸಲ್ಲಾಪ ಮುಂದುವರಿಸಿದ್ದು, ತಿಹಾರ್​ ಜೈಲಿನಲ್ಲಿ ಸುಕೇಶ್​ ಸೆಲ್​​ಗೆ ನಟಿ ಜಾಕ್ವೆಲಿನ್ ಭೇಟಿ ನೀಡಿದ್ಲು. ಹೀಗೆ ಅನೇಕ ಬಾಲಿವುಡ್ ನಟಿಯರನ್ನ ಜೈಲಿನಲ್ಲೇ ಭೇಟಿಯಾಗಿದ್ದ. ಜೈಲಿನಲ್ಲೇ ತನ್ನ ಐಷಾರಾಮಿ ಜೀವನಕ್ಕಾಗಿ ಪ್ರತಿ ತಿಂಗಳು ಜೈಲು ಸಿಬ್ಬಂದಿಗೆ ಒಂದು ಕೋಟಿ ಖರ್ಚು ಮಾಡ್ತಿದ್ದ ಅನ್ನೋದು ಬಹಿರಂಗವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಸುಕೇಶ್ ಚಂದ್ರಶೇಖರ್​​ನನ್ನ ತಿಹಾರ್ ಜೈಲಿನಿಂದ ಮಾಂಡೋಲಿ ಜೈಲಿಗೆ ಶಿಫ್ಟ್ ಮಾಡಲಾಯ್ತು. ಅಲ್ಲಿ ಮತ್ತೊಂದು ಹೊಸ ವರಸೆ ಶುರು ಮಾಡಿದ್ದ. ನನಗೆ ಕಾಲು ಮಡಚಿ ನೆಲದಲ್ಲಿ ಕುಳಿತುಕೊಳ್ಳೋಕೆ ಆಗಲ್ಲ. ಅರೋಗ್ಯ ಸಮಸ್ಯೆ ಇದೆ. ಹೀಗಾಗಿ ಸೆಲ್​​​ನಲ್ಲಿ ಕುರ್ಚಿ ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಆದ್ರೆ, ಆತನ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಳಿಕ ನೆಲದಲ್ಲೇ ಬೆಡ್​​ಶೀಟ್​​ಗಳ ಅಡಿಯಲ್ಲಿ ತನ್ನ ಬೆಲೆ ಬಾಳುವ ಜೀನ್ಸ್​ ಪ್ಯಾಂಟ್, ಚಪ್ಪಲಿಗಳನ್ನ ಅವಿತಿಟ್ಟಿದ್ದ. ಇದೀಗ ರೇಡ್​​ ವೇಳೆ ಎಲ್ಲವೂ ಪತ್ತೆಯಾಗಿದೆ. ಈ ನಡುವೆ, ಜೈಲು ಸಿಬ್ಬಂದಿ ಬಗ್ಗೆಯೂ ಒಂದಷ್ಟು ಅನುಮಾನ ಕೂಡ ಎದ್ದಿದೆ.

 

suddiyaana