ಅತ್ಯಂತ ಹಿರಿಯ ಬಿಳಿ ಹೆಣ್ಣು ಹುಲಿ ಸಾವು – 17 ವರ್ಷದ ‘ವಿನಾ ರಾಣಿ’ಗೆ ಆಗಿದ್ದೇನು ಗೊತ್ತಾ..!?
ದೆಹಲಿಯ ಝೂನಲ್ಲಿದ್ದ 17 ವರ್ಷದ ಹೆಣ್ಣು ಹುಲಿ ಸೋಮವಾರ ಸಾವನ್ನಪ್ಪಿದೆ. ಝೂನಲ್ಲಿದ್ದ ಬಿಳಿ ಹುಲಿಗಳ ಪೈಕಿ ಇದು ಅತ್ಯಂತ ಹಿರಿಯ ಹುಲಿಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿನಾ ರಾಣಿ ಹೆಸರಿನ ಬಿಳಿ ಹುಲಿ ಫೆಬ್ರವರಿ 4ರಿಂದಲೇ ಆಹಾರ ಸೇವನೆ ಮಾಡುತ್ತಿರಲಿಲ್ಲ. ಇದ್ರಿಂದ ಲಿವರ್ ಸಮಸ್ಯೆಯಾಗಿತ್ತು. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದ ಹುಲಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಹುಲಿ ಹೆಪಟೈಟಿಸ್ನಿಂದ ಬಳಲುತ್ತಿರೋದು ಗೊತ್ತಾಗಿತ್ತು. ಬಳಿಕ ಚಿಕಿತ್ಸೆ ಆರಂಭಿಸಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಇದನ್ನೂ ಓದಿ : 40 ದಿನಗಳಿಂದಲೂ ‘ಹುಚ್ಚು ದೊರೆ’ ನಾಪತ್ತೆ – ಅನಾರೋಗ್ಯವೋ.. ಶಕ್ತಿಪ್ರದರ್ಶನದ ತಂತ್ರವೋ..!?
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೃಗಾಲಯದಲ್ಲಿ ಜನಿಸಿದ್ದ ಮೂರು ಬಿಳಿ ಹುಲಿಗಳ ಪೈಕಿ ಒಂದು ಸಾವನ್ನಪ್ಪಿತ್ತು. ಮೃಗಾಲಯದ ಅಧಿಕಾರಿಗಳ ಪ್ರಕಾರ ಇತರ ಎರಡು ಮರಿಗಳು ಸಹ ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದವು. ಚಿಕಿತ್ಸೆ ಬಳಿಕ ಅವು ಚೇತರಿಸಿಕೊಳ್ಳುತ್ತಿವೆ. ಝೂನಲ್ಲಿ ಏಳು ವರ್ಷಗಳ ಅವಧಿಯ ನಂತರ ಮೃಗಾಲಯದಲ್ಲಿ ಮರಿಗಳು ಜನಿಸಿದ್ದವು.
ಸೋಮವಾರ ಮೃತಪಟ್ಟ 17 ವರ್ಷದ ವಿನಾ ರಾಣಿ ಮೃಗಾಲಯದಲ್ಲಿ ಜನಿಸಿದ ಮೂರನೇ ತಲೆಮಾರಿನ ಬಿಳಿ ಹುಲಿಯಾಗಿತ್ತು. ಸದ್ಯ ಮೃಗಾಲಯವು ಈಗ ಮೂರು ವಯಸ್ಕ ಬಿಳಿ ಹುಲಿಗಳನ್ನು ಹೊಂದಿದೆ. ಟಿಪ್ಪು, ವಿಜಯ್ ಮತ್ತು ಸೀತಾ. ಕಳೆದ ವರ್ಷ ವಿಜಯ್ ಮತ್ತು ಸೀತಾಗೆ ಎರಡು ಮರಿಗಳು ಜನಿಸಿದ್ದವು.
ಕಾಡಿನಲ್ಲಿ ಬಿಳಿ ಹುಲಿಯ ಜೀವಿತಾವಧಿ 12 ರಿಂದ 14 ವರ್ಷಗಳವರೆಗೆ ಇರುತ್ತದೆ. ಆದ್ರೆ ಝೂನಲ್ಲಿ ವಿನಾ ರಾಣಿ 17 ವರ್ಷದವರೆಗೆ ಜೀವಿಸಿದ್ದು ವಿಶೇಷವಾಗಿತ್ತು. ಸದ್ಯ ಹುಲಿಯ ಕಳೇಬರವನ್ನ ಮೃಗಾಲಯದಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ.