ಹಳೇ ಹುಬ್ಬಳ್ಳಿ ಗಲಭೆ ಕೇಸ್‌ – ನ್ಯಾಯಾಂಗ ಬಂಧನದಲ್ಲಿದ್ದ 108 ಆರೋಪಿಗಳು ರಿಲೀಸ್!‌

ಹಳೇ ಹುಬ್ಬಳ್ಳಿ ಗಲಭೆ ಕೇಸ್‌ – ನ್ಯಾಯಾಂಗ ಬಂಧನದಲ್ಲಿದ್ದ 108 ಆರೋಪಿಗಳು ರಿಲೀಸ್!‌

ರಾಜ್ಯದಲ್ಲಿ ಹಳೇ ಹುಬ್ಬಳ್ಳಿ ಗಲಭೆ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 108 ಆರೋಪಿಗಳು ರಿಲೀಸ್‌ ಆಗಿದ್ದಾರೆ.

ವಾಟ್ಸಪ್ ಸ್ಟೇಟಸ್ ವಿಚಾರವಾಗಿ 2022ರ ಏಪ್ರಿಲ್ 16ರಂದು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಠಾಣೆ ಎದುರು ಬೆಂಗಳೂರಿನ ಕೆಜಿ ಹಳ್ಳಿ ಮಾದರಿಯಲ್ಲಿಯೇ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ 152 ಮಂದಿ ಜೈಲು ಸೇರಿದ್ದರು. 2 ತಿಂಗಳ ಹಿಂದೆ ಸುಪ್ರೀಂಕೋರ್ಟ್ 31 ಆರೋಪಿಗಳಿಗೆ ಜಾಮೀನು ನೀಡಿತ್ತು. ಇದೀಗ 108 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ – ಶನಿವಾರ ಅಥವಾ ಭಾನುವಾರ ಡಿಸ್ಚಾರ್ಜ್‌

ಮುಹಮ್ಮದ್ ಆರೀಫ್ ರಿಝ್ವಿ ಸೇರಿದಂತೆ 108 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಎಲ್ಲ ಅರ್ಜಿದಾರರು ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ರವಿವಾರ ಠಾಣೆಗೆ ಬಂದು ಸಹಿ ಹಾಕಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ಒಬ್ಬರು ಶ್ಯೂರಿಟಿ ಮತ್ತು 2 ಲಕ್ಷ ರೂ.ಗಳ ಬಾಂಡ್ ನೀಡಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ಆರೋಪಿಗಳಿಗೆ ಜಾಮೀನು ಮಂಜೂರು ಸುದ್ದಿ ತಿಳಿಯುತ್ತಿದ್ದಂತೆ ಹಳೆ ಹುಬ್ಬಳ್ಳಿಯ ದರ್ಗಾದಲ್ಲಿ ಮುಸ್ಲಿಮರು ಸಂಭ್ರಮಾಚರಣೆಗಳನ್ನು ಮಾಡಿಕೊಂಡಿದ್ದಾರೆ. ಆರೋಪಿಗಳ ಕುಟುಂಬಸ್ಥರು ಮತ್ತು ಅಂಜುಮನ್ ಇಸ್ಲಾಮಿಕ್ ಸಂಸ್ಥೆ ಮುಖಂಡರು ಪರಸ್ಪರ ಸಿಹಿ ತಿನ್ನಿಸಿಕೊಂಡು ಖುಷಿ ಪಟ್ಟಿದ್ದಾರೆ. ಅಂಜುಮನ್ ಮುಖಂಡರಿಗೆ ಹಾರ ಹಾಕಿ ಅಭಿನಂದಿಸಿದ್ದಾರೆ.

Shwetha M