ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಕ್ಯಾಬ್ ಚಾರ್ಜ್ 285ರೂ. ಅಲ್ಲ.. 5,950ರೂ.! – ಕನ್ನಡ ಗೊತ್ತಿಲ್ಲದವರೇ ಈ ಕ್ಯಾಬ್ ಡ್ರೈವರ್ ಟಾರ್ಗೆಟ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಬ್ ದರ ದಿನೇ ದಿನೇ ಹೆಚ್ಚಾಗ್ತಿದೆ. ಇದನ್ನೇ ಕೆಲ ಕ್ಯಾಬ್ ಡ್ರೈವರ್‌ಗಳು ಬಂಡವಾಳ ಮಾಡಿಕೊಂಡಿದ್ದಾರೆ. ಇದೀಗ ಇಲ್ಲೊಂದು ಕಡೆ ವ್ಯಕ್ತಿಯೊಬ್ಬರು ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದು, ಕ್ಯಾಬ್ ಬಿಲ್ ಕೇಳಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕರಾವಳಿ ರೈಲು ಪ್ರಯಾಣಿಕರೇ ನಿಮಗೆ ಶಾಕಿಂಗ್ ನ್ಯೂಸ್ – 35 ದಿನ ಕೆಲ ರೈಲು ರದ್ದು, ಸಂಚಾರದಲ್ಲಿ ಬದಲಾವಣೆ
ವ್ಯಕ್ತಿಯೊಬ್ಬರು ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆ್ಯಪ್‌ನಲ್ಲಿ ₹285 ಎಂದು ತೋರಿಸಿದ ಟ್ರಿಪ್‌ಗೆ, ಡ್ರೈವರ್ ತನ್ನ ಪರ್ಸನಲ್ ಫೋನ್‌ನಲ್ಲಿ ₹5,950 ಬಿಲ್ ತೋರಿಸಿ ಹಣಕ್ಕೆ ಪೀಡಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲ ಚಾಲಕರು ಅಮಾಯಕ ಗ್ರಾಹಕರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬುದನ್ನು ಬಯಲು ಮಾಡಿದ್ದಾರೆ.
‘ಹಿಂದೆ ನಾನು ಕೆಲವು ರೈಡ್‌ಗಳನ್ನು ಕ್ಯಾನ್ಸಲ್ ಮಾಡಿದ್ದೆ, ಆ ಹಣವನ್ನು ಈಗ ಕೊಡದಿದ್ದರೆ ತನ್ನ ಅಕೌಂಟ್‌ನಿಂದ ಕಟ್ ಆಗುತ್ತದೆ ಎಂದು ಡ್ರೈವರ್ ವಾದಿಸಿದ. ನನ್ನ ಆ್ಯಪ್‌ನಲ್ಲಿ ₹285 ಮಾತ್ರ ತೋರಿಸುತ್ತಿದೆ ಎಂದು ಹೇಳಲು ಪ್ರಯತ್ನಿಸಿದಾಗ, ಚಾಲಕ ರೇಗಾಡಲು ಶುರು ಮಾಡಿದ. ₹5950 ಕೊಡಲೇಬೇಕು ಎಂದು ಪದೇ ಪದೇ ಪಟ್ಟು ಹಿಡಿದ’ ಎಂದು ಪ್ರಯಾಣಿಕರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಚಾಲಕ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುತ್ತಿದ್ದರಿಂದ, ಕನ್ನಡ ಬಾರದ ಪ್ರಯಾಣಿಕರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿ, ಒತ್ತಡದ ಸನ್ನಿವೇಶ ನಿರ್ಮಾಣವಾಗಿತ್ತು. ಈ ಬಗ್ಗೆ ಓಲಾ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಸಹಾಯ ಸಿಗಬಹುದೆಂದು ನಾನು ಆ್ಯಪ್ ಮೂಲಕ ಓಲಾದ ಎಮರ್ಜೆನ್ಸಿ ಸಪೋರ್ಟ್‌ಗೆ ಕರೆ ಮಾಡಿದೆ. ಆದರೆ, ಅಲ್ಲಿನ ಸಿಬ್ಬಂದಿಯ ಪ್ರತಿಕ್ರಿಯೆ ತುಂಬಾ ನಿರಾಶಾದಾಯಕವಾಗಿತ್ತು. ಅವರು ಉಡಾಫೆಯಿಂದ ವರ್ತಿಸಿದರು ಎಂದು ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರು ವೈರಲ್ ಆಗ್ತಿದೆ. ನೆಟ್ಟಿಗರು ಪ್ರಯಾಣಿಕರ ಪರವಾಗಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ತಕ್ಷಣ ಪೊಲೀಸರಿಗೆ ಕರೆ ಮಾಡಬೇಕಿತ್ತು ಎಂದು ಹಲವರು ಸಲಹೆ ನೀಡಿದ್ದಾರೆ. ‘ಈ ರೀತಿ ಆದಾಗ ತಕ್ಷಣ 112ಕ್ಕೆ ಕರೆ ಮಾಡಿ, ಅವರು 5 ರಿಂದ 10 ನಿಮಿಷದಲ್ಲಿ ಸ್ಥಳಕ್ಕೆ ಬರುತ್ತಾರೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.’ನನಗೂ ಹೀಗೆ ಆಗಿದೆ, ಅವರು ‘ಇದು ಎಮರ್ಜೆನ್ಸಿ ಅಲ್ಲ’ ಅಂತ ಹೇಳಿ ಫೋನ್ ಕಟ್ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನೋಡಿರಿ

