ಶಿರಾಡಿ ಘಾಟ್ ನಲ್ಲಿ ಸುರಂಗ ನಿರ್ಮಾಣಕ್ಕೆ ಅಧಿಕೃತ ಒಪ್ಪಿಗೆ – 2,500 ಕೋಟಿ ವೆಚ್ಚದಲ್ಲಿ ಹೊಸ ಡಿಸೈನ್ ರೆಡಿ
ಶಿರಾಡಿ ಘಾಟ್. ಬೆಂಗಳೂರು ಮತ್ತು ಮಂಗಳೂರನ್ನ ಸಂಪರ್ಕಿಸುವ ರಸ್ತೆ ಮಾರ್ಗ. ಪ್ರಕೃತಿಯ ರಮಣೀಯ ದೃಶ್ಯಗಳು ರಸ್ತೆ ಅಕ್ಕಪಕ್ಕ ಸವಾರರಿಗೆ ಖುಷಿ ನೀಡುತ್ತವೆ. ಆದರೆ ಮಳೆಗಾಲ ಬಂತಂದ್ರೆ ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿಡುವ ಸಂಚಾರ ಮಾಡಬೇಕು. ಯಾಕಂದ್ರೆ ಎಲ್ಲಿ ಯಾವ ಗುಡ್ಡ ಕುಸಿಯುತ್ತದೆಯೋ ಹೇಳೋಕೆ ಆಗಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕಲು ಹೊಸ ಮಾರ್ಗ ರೆಡಿಯಾಗಲಿದೆ.
ಶಿರಾಢಿ ಘಾಟ್‌ನಲ್ಲಿ (Shiradi Ghat Tunnel Road) ಸುರಂಗ ಮಾರ್ಗದ ಮೂಲಕ ರಸ್ತೆ ನಿರ್ಮಿಸುವ ಯೋಜನೆಗೆ ಇದೀಗ ಅಧಿಕೃತ ಒಪ್ಪಿಗೆ ದೊರೆತಿದೆ. ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡ್‌ನಿಂದ ಶಿರಾಡಿಯ ಅಡ್ಡಹೊಳೆ ವರೆಗಿನ 65 ಕಿಲೋಮೀಟರ್ ದೂರದ ಚತುಷ್ಪಥ ಕಾಮಗಾರಿ ಇದೀಗ ಮತ್ತೆ ಚುರುಕುಗೊಂಡಿದೆ. ಈ ಹಿಂದೆ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 821 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಎಲ್‌ಎಂಡ್‌ಟಿ ಕಂಪನಿಗೆ ವಹಿಸಿತ್ತು. ಆದರೆ ಕಂಪನಿಯು ಕಾಮಗಾರಿಯನ್ನು ಆರಂಭಿಸಿದ ಬಳಿಕ ಪ್ರಾಕೃತಿಕ ವಿಕೋಪದಿಂದಾಗಿ ಕಂಪನಿಗೆ ಭಾರೀ ನಷ್ಟವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹಿಂದೆ ಸರಿದಿತ್ತು.
ಇದನ್ನೂ ಓದಿ : ಶುಕ್ರವಾರ ಸಂಪೂರ್ಣ ಸ್ತಬ್ಧವಾಗಲಿದ್ಯಾ ಕರುನಾಡು? – ಕರ್ನಾಟಕ ಬಂದ್‌ಗೆ ಯಾರ್ಯಾರ ಬೆಂಬಲ?
ಇದೀಗ ಮತ್ತೆ ಇದೇ ರಸ್ತೆಗೆ ಮತ್ತೆ ಟೆಂಡರ್ ಕರೆಯಲಾಗಿದ್ದು, ಈ ಬಾರಿ ಸುಮಾರು 1,500 ಕೋಟಿ ಅಂದಾಜಿನ ಎರಡು ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ಇದೀಗ ಭರದಿಂದ ಸಾಗುತ್ತಿದ್ದು, 2023 ರ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವನ್ನೂ ನೀಡಲಾಗಿದೆ. ಈ ಕಾಮಗಾರಿಗಳ ಜೊತೆಯಲ್ಲೇ ಕೇಂದ್ರ ಸರಕಾರ ಉದ್ಧೇಶಿತ ಶಿರಾಢಿ ಘಾಟ್ ಸುರಂಗ ಮಾರ್ಗದ ಕಾಮಗಾರಿಯ ಯೋಜನೆಗೂ ಅಧಿಕೃತ ಒಪ್ಪಿಗೆ ನೀಡಿದೆ. ಶಿರಾಡಿ ಘಾಟ್‌ನ ಸುಮಾರು 27 ರಿಂದ 30 ಕಿಲೋಮೀಟರ್ ಉದ್ದದ ಈ ಘಾಟ್ ರಸ್ತೆಯನ್ನು ಸುರಂಗ ಮಾರ್ಗವನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ. ಸುರಂಗ ಮಾರ್ಗದ ವಿಚಾರವಾಗಿ ಈಗಾಗಲೇ ಮೂರು ಬಾರಿ ಸರ್ವೆ ನಡೆಸಲಾಗಿದೆ. ಒಂದು ಸರ್ವೆಯಲ್ಲಿ ಸುಮಾರು 3,000 ಕೋಟಿ, ಇನ್ನೊಂದು ಸರ್ವೆಯಲ್ಲಿ 12,000 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ಸರ್ವೆ ನಡೆಸಲಾಗಿದ್ದು, ಹಿಂದಿನ ಡಿಸೈನ್‌ಗಳನ್ನು ಬದಲಾಯಿಸಿ ಈ ಬಾರಿ ಹೊಸ ಡಿಸೈನ್ ತಯಾರಿಸಲಾಗಿದೆ. ಸುಮಾರು 2500 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಯೋಜನೆ ತಯಾರಿಸಲಾಗಿದೆ.
ಈ ಯೋಜನೆಯ ಪ್ರಕಾರ ಘಾಟ್‌ನ ನಾಲ್ಕು ಕಡೆಗಳಲ್ಲಿ ಸುರಂಗ ಮಾರ್ಗ, ಉಳಿದ ಕಡೆಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಹೆದ್ದಾರಿ ಇಲಾಖೆ ಈ ಯೋಜನೆಗೆ ಅಧಿಕೃತ ಒಪ್ಪಿಗೆಯನ್ನೂ ನೀಡಿದ್ದು, ಮುಂದಿನ ವರ್ಷದಲ್ಲಿ ಈ ಕಾಮಗಾರಿ ಆರಂಭವಾಗುವ ನಿರೀಕ್ಷೆಯೂ ಇದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ ಕಾಮಗಾರಿ ಭರದಿಂದ ನಡೆಯುತ್ತಿದ್ದರೂ, ಮಳೆಯ ಕಾರಣಕ್ಕಾಗಿ ಕಾಮಗಾರಿ ನಿರ್ವಹಣೆಗೆ ಕೊಂಚ ತಡೆಯಾಗುತ್ತಿದೆ. ಈ ಕಾಮಗಾರಿಯಲ್ಲಿ ಬಿ.ಸಿ.ರೋಡ್ ನೇತ್ರಾವತಿ ಮತ್ತು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಗೆ ಎರಡು ಬೃಹತ್ ಸೇತುವೆ, ಕಲ್ಲಡ್ಕದಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ವ್ಯಾಪ್ತಿಯ ಮೇಲ್ಸೇತುವೆಯೂ ಬರಲಿದೆ.