ಮೊಬೈಲ್​ ಬಿದ್ದಿದ್ದಕ್ಕೆ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಅಧಿಕಾರಿಗೆ 53,000 ರೂಪಾಯಿ ದಂಡ!

ಮೊಬೈಲ್​ ಬಿದ್ದಿದ್ದಕ್ಕೆ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಅಧಿಕಾರಿಗೆ 53,000 ರೂಪಾಯಿ ದಂಡ!

ಅವರೆಲ್ಲಾ ಗೆಳೆಯರು. ಪ್ರವಾಸಕ್ಕೆ ಅಂತಾ ತೆರಳಿದ್ದ ವೇಳೆ ಸೆಲ್ಫಿ ತೆಗೆಯಲು ಮುಂದಾಗಿದ್ರು. ಈ ವೇಳೆ ಡ್ಯಾಂ ಬಳಿ ಮೊಬೈಲ್ ನೀರಿಗೆ ಬಿದ್ದಿದೆ. ಹೆಚ್ಚುವರಿ ನೀರು ಸಂಗ್ರಹ ಟ್ಯಾಂಕ್ ಗೆ ಬಿದ್ದ ಮೊಬೈಲ್ ಹೊರ ತೆಗೆಯಲು ಇಡೀ ನೀರನ್ನೇ ಖಾಲಿ ಮಾಡಿಸಿದ್ರು. ವೈಯಕ್ತಿಕ ಉದ್ದೇಶಕ್ಕೆ ನೀರು ಖಾಲಿ ಮಾಡಿದ್ದ ಆ ಅಧಿಕಾರಿ ಈಗ ಭಾರೀ ದಂಡ ತೆತ್ತಿದ್ದಾರೆ.

ನೀರಿಗೆ ಮೊಬೈಲ್ (Mobile) ಬಿದ್ದಿದ್ದಕ್ಕೆ ಛತ್ತೀಸ್‍ಗಢದ (Chhattisgarh) ಪಾರಕೋಟ್ ಡ್ಯಾಂ ನೀರನ್ನೇ ಖಾಲಿ ಮಾಡಿಸಿದ್ದ ಆಹಾರ ನಿರೀಕ್ಷಕ (Food Inspector) ರಾಜೇಶ್ ಕುಮಾರ್ ಅವರಿಗೆ ರಾಜ್ಯ ನೀರಾವರಿ ಇಲಾಖೆ 53,092 ರೂ. ದಂಡ ವಿಧಿಸಿದೆ. ರಾಜ್ಯದ ನೀರಾವರಿ ಇಲಾಖೆಯ (State Irrigation Department) ಪ್ರಾಧಿಕಾರದಿಂದ ಅನುಮತಿ ಪಡೆಯದೆ ಅಧಿಕಾರಿ ಡೀಸೆಲ್ ಪಂಪ್‍ಗಳನ್ನು ಬಳಸಿ ನೀರನ್ನು ಹರಿಸಿದ್ದಾರೆ. ತಮ್ಮ ವೈಯಕ್ತಿಕ ಉದ್ದೇಶಕ್ಕೆ ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುವ ನೀರನ್ನು ಅಧಿಕಾರಿ ವ್ಯರ್ಥ ಮಾಡಿದ್ದಾರೆ. ಇದು ಕಾನೂನುಬಾಹಿರ ಮತ್ತು ಛತ್ತೀಸ್‍ಗಢ ನೀರಾವರಿ ಕಾಯಿದೆಯ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧಕ್ಕೆ ಸೇರುತ್ತದೆ ಎಂದು ಇಲಾಖೆಯ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ : ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ – ಮುಂದೇನಾಯ್ತು ಗೊತ್ತಾ?

4,104 ಕ್ಯೂಬಿಕ್ ಮೀಟರ್ (4.1 ಮಿಲಿಯನ್ ಲೀಟರ್) ನೀರನ್ನು ರಾಜೇಶ್ ವ್ಯರ್ಥ ಮಾಡಿದ್ದಾರೆ. ಇದಕ್ಕಾಗಿ ಪ್ರತಿ ಘನ ಮೀಟರ್ ನೀರಿಗೆ 10.50 ರೂ. ದರದಂತೆ, 43,092 ಪಾವತಿಸಲು ಸೂಚಿಸಲಾಗಿದೆ. ಅನುಮತಿ ಪಡೆಯದೆ ನೀರು ತೆರವು ಮಾಡಿದ್ದಕ್ಕೆ 10,000 ರೂ. ದಂಡ ವಿಧಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಮೇ 21 ರಂದು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಆಹಾರ ನಿರೀಕ್ಷಕ ರಾಜೇಶ್ ಕುಮಾರ್ ವಿಶ್ವಾಸ್ ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಮೊಬೈಲ್ ಹೆಚ್ಚುವರಿ ನೀರು ಸಂಗ್ರಹ ಟ್ಯಾಂಕ್‍ಗೆ ಬಿದ್ದಿತ್ತು. ಅದನ್ನು ಮರಳಿ ಪಡೆಯಲು ಪಂಪ್‍ಸೆಟ್‍ಗಳನ್ನು ಬಳಸಿ ಮೂರು ದಿನಗಳ ಕಾಲ ನೀರನ್ನು ಹೊರ ಹಾಕಲಾಗಿತ್ತು. 40 ಹೆಕ್ಟೇರ್ ಕೃಷಿ ಭೂಮಿಗೆ ಬಳಸಬಹುದಾಗಿದ್ದ 4.1 ಮಿಲಿಯನ್ ಲೀಟರ್ ನೀರು ಇದರಿಂದ ವ್ಯರ್ಥವಾಗಿತ್ತು. ಈಗ ಅವರ 95,000 ರೂ. ಮೊಬೈಲ್ ಪತ್ತೆಯಾಗಿದ್ದು, ಅದು ಕಾರ್ಯನಿರ್ವಹಿಸುತ್ತಿಲ್ಲ.

suddiyaana