ಈ ಚಟ್ನಿಗೆ ಜಿಐ ಟ್ಯಾಗ್‌ ಸಿಕ್ಕಿದ್ದೇಕೆ? – ಛೀ ಎನ್ನುವವರೂ ಮುಂದೆ ತಿನ್ನುತ್ತಾರಾ?

ಈ ಚಟ್ನಿಗೆ ಜಿಐ ಟ್ಯಾಗ್‌ ಸಿಕ್ಕಿದ್ದೇಕೆ? – ಛೀ ಎನ್ನುವವರೂ ಮುಂದೆ ತಿನ್ನುತ್ತಾರಾ?

ಆಹಾರ ಪದಾರ್ಥಗಳಿಗೆ ಜಿಐ ಟ್ಯಾಗ್‌ ಪಡೆದುಕೊಳ್ಳುವುದರ ಬಗ್ಗೆ ನಿಮಗೆ ಗೊತ್ತಿರಬಹುದು.. ಈ ಜಿಐ ಟ್ಯಾಗ್‌ ಈಗ ಒಂದು ಒಡಿಶಾದ ವಿಶೇಷ ಚಟ್ನಿಗೆ ಸಿಕ್ಕಿದೆ. ಈ ಮೂಲಕ ಈ ವಿಶೇಷ ಚಟ್ನಿ ಈಗ ವಿಶ್ವಮಾನ್ಯತೆಯನ್ನು ಬೇರೆ ಪಡ್ಕೊಂಡಿದೆ.. ಹಾಗಿದ್ದರೆ ಈ ಚಟ್ನಿಯನ್ನು ಮಾಡೋದು ಯಾವುದರಿಂದ? ಏನಿದರ ವಿಶೇಷತೆ? ಆರೋಗ್ಯಕ್ಕೆ ಇದು ಉತ್ತಮವೇ? ಯಾವ ಕಾರಣಕ್ಕಾಗಿ ಇದನ್ನು ಜಿಐ ಅಂದರೆ ಜಿಯೋಗ್ರಾಫಿಕಲ್‌ ಇಂಡಿಕೇಟರ್‌ ಪಟ್ಟಿಗೆ ಸೇರಿಸಲಾಗಿದೆ ಎನ್ನುವದರ ಬಗ್ಗೆ ಮಾಹಿತಿ ಇಲ್ಲಿದೆ.

ನೀವೇನಾದರೂ ಕುವೆಂಪು ಅವರ ಪ್ರಸಿದ್ಧ ಕಾದಂಬರಿ ಕಾನೂರು ಹೆಗ್ಗಡತಿ ಓದಿದ್ದರೆ, ಅದರಲ್ಲಿ ಕೆಂಪಿರುವೆಯ ಮೊಟ್ಟೆಗಳನ್ನು ಸಂಗ್ರಹಿಸಿ, ಅದರಿಂದ ಚಟ್ನಿ ಮಾಡುವ ಪಾತ್ರದ ಪರಿಚಯ ಇರಬಹುದು. ಅನೇಕರು ಇದನ್ನು ಓದಿದಾಗ, ಹೀಗೂ ಚಟ್ನಿ ಮಾಡ್ತಾರಾ? ಕೆಂಪಿರುವೆಯಿಂದಲೂ ಚಟ್ನಿ ಮಾಡಲು ಸಾಧ್ಯವೇ ಅಂತ ಪ್ರಶ್ನಿಸಬಹುದು. ಆದ್ರೀಗ ಇದೇ ಕೆಂಪಿರುವೆಯ ಚಟ್ನಿ ಜಿಐ ಲೇಬಲ್‌ ಪಡೆದುಕೊಂಡಿದೆ. ಆದ್ರೆ ಕೆಂಪಿರುವೆಯ ಚಟ್ನಿ ಜಿಐ ಮಾನ್ಯತೆಯನ್ನು ಪಡೆದುಕೊಂಡಿರುವುದು ಕರ್ನಾಟಕದಿಂದ ಅಲ್ಲ, ಒಡಿಶಾದಿಂದ. ನ್ಯೂಟ್ರಿಷಿಯಸ್‌ ಅಂಶಗಳು ಹಾಗೂ ಔಷಧೀಯ ಗುಣಗಳ ಕಾರಣದಿಂದ ಒಡಿಶಾದ ಕೆಂಪಿರುವೆ ಚಟ್ನಿಗೆ ಜನವರಿ 2ರಂದು ಜಿಐ ಲೇಬಲ್‌ ನೀಡಲಾಗಿದೆ. ಬುಡಕಟ್ಟು ಜನರ ಆಹಾರವಾಗಿದ್ದ ಈ ಕೆಂಪಿರುವೆ ಚಟ್ನಿಯನ್ನು ಈಗಾಗಲೇ ಹಲವು ರೆಸ್ಟೋರೆಂಟ್‌ಗಳು ತಮ್ಮ ಮೆನು ಪಟ್ಟಿಗೆ ಸೇರಿಸಿವೆ.

ಇದನ್ನೂ ಓದಿ: ಹೈ ಹೀಲ್ಸ್ ಮಹಿಳೆಯರದ್ದಲ್ಲ.. ಪುರುಷರ ಪಾದರಕ್ಷೆ! – ಹೈ ಹೀಲ್ಸ್ ಪಾದರಕ್ಷೆಯ ಹಿಸ್ಟರಿ ಗೊತ್ತಾ?

ಒಡಿಶಾದ ಮಯೂರ್‌ಬಂಜ್‌ ಅರಣ್ಯ ಪ್ರದೇಶದಲ್ಲಿ ಈ ಕೆಂಪಿರುವೆಗಳ ಚಟ್ನಿ ಅತ್ಯಂತ ಜನಪ್ರಿಯವಾದ ಆಹಾರ. ಅಲ್ಲಿನ ಸ್ಥಳೀಯರ ಆಹಾರ ಪದ್ಧತಿಯ ಭಾಗವಾಗಿ ಕೆಂಪಿರುವೆ ಚಟ್ನಿಗೆ ಈಗ ಜಿಐ ಟ್ಯಾಗ್‌ನೊಂದಿಗೆ ವಿಶ್ವಮಾನ್ಯತೆ ದೊರೆತಿದ್ದು ಸೂಪರ್‌ ಫುಡ್‌  ಕೆಟಗರಿಗೆ ಸೇರಿಕೊಂಡಿದೆ. ಇಷ್ಟಕ್ಕೂ 2018ರಲ್ಲಿ ಖ್ಯಾತ ಬ್ರಿಟಿಷ್‌ ಷೆಫ್‌, ಗಾರ್ಡನ್‌ ರಾಮ್ಸೆ (Gordon Ramsay) ತನ್ನ ಮೆನುವಿನಲ್ಲಿ ಕೆಂಪಿರುವೆ ಚಟ್ನಿಯನ್ನು ಸೇರಿಸಿದ್ದ. ಇದಾದ ನಂತರ ಕೆಂಪಿರುವೆ ಚಟ್ನಿಯ ಖ್ಯಾತಿ ಹೆಚ್ಚಾಗತೊಡಗಿತ್ತು. ಒಡಿಶಾದಲ್ಲಿ ಕಾಯಿ ಚಟ್ನಿ ಎಂದು ಕರೆಸಿಕೊಳ್ಳುವ ಈ ಕೆಂಪಿರುವ ಚಟ್ನಿಯನ್ನು ಮೊದಲು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಉಪ್ಪು ಹಾಕಿ ರುಬ್ಬಿ ನಂತರ ಅದಕ್ಕೆ ಮೊದಲೇ ಇರುವೆ ಗೂಡಿನಿಂದ ಆರಿಸಿ ತಂದ ಕೆಂಪಿರುವ ಮತ್ತು ಅದರ ಮೊಟ್ಟೆಗಳನ್ನು ಸೇರಿಸಲಾಗುತ್ತದೆ. ಕೆಲವರು ಕೆಂಪಿರುವೆಗಳನ್ನು ಫ್ರೈ ಮಾಡಿಯೂ ಚಟ್ನಿಗೆ ಬೆರೆಸುತ್ತಾರಂತೆ.

ಒಡಿಶಾ ಮಾತ್ರವಲ್ಲದೆ ಛತ್ತೀಸ್‌ಗಢ, ಜಾರ್ಖಂಡ್‌ ರಾಜ್ಯಗಳಲ್ಲಿ ಕೆಂಪಿರುವೆ ಚಟ್ನಿಯನ್ನು ಜನರು ಸೇವಿಸುತ್ತಾರೆ. ಈ ಕೆಂಪಿರುವ ಚಟ್ನಿಯ ಸೇವನೆಯಿಂದ ಕಬ್ಬಿಣದ ಅಂಶ ಸೇರಿದಂತೆ ಮ್ಯಾಗ್ನೀಶಿಯಂ, ಪೊಟಾಶಿಯಂ, ಕ್ಯಾಲ್ಸಿಯಂ, ಜಿಂಕ್‌, ಪ್ರೊಟೀನ್‌ ಮತ್ತು ವಿಟಮಿನ್‌ ಬಿ-12 ಸಿಗುತ್ತದೆ. ಇನ್ನು ಕೆಂಪಿರುವೆಯ ಚಟ್ನಿ ಸೇವನೆ, ಮೆದುಳು ಸೇರಿದಂತೆ ನರಮಂಡಲವನ್ನು ಸದೃಢಗೊಳಿಸಲು ನೆರವಾಗುತ್ತದೆ ಮತ್ತು ಖಿನ್ನತೆ, ತೀವ್ರ ಆಯಾಸದಿಂದ ಬಳುವಿಕೆ ಮತ್ತು ಮರೆವಿನ ಖಾಲೆಯೆ ದೂರ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಈಗ ಕೆಂಪಿರುವ ಚಟ್ನಿಗೆ ಜಿಐ ಲೇಬಲ್‌ ಕೂಡ ಸಿಕ್ಕಿರುವುದರಿಂದ ಈ ಚಟ್ನಿಗೊಂದು ಗೌರವದ ಸ್ಥಾನಮಾನ ಕೂಡ ಸಿಕ್ಕಿದೆ.

Shwetha M