ಒಡಿಶಾ ರೈಲ್ವೆ ದುರಂತ: 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ – ಭಾವುಕರಾದ ಸಚಿವ ವೈಷ್ಣವ್
ಒಡಿಶಾ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾ ರೈಲು ದುರಂತದಿಂದಾಗಿ 288 ಜನರು ಸಾವನ್ನಪ್ಪಿದ್ದರು. 900 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೀಗ ದುರಂತ ನಡೆದು ಕೇವಲ ಎರಡೇ ದಿನದಲ್ಲಿ ಎಕ್ಸ್ಪ್ರೆಸ್ವೇ ದುರಸ್ತಿಗೊಂಡಿದ್ದು ಪ್ಯಾಸೆಂಜರ್ ರೈಲುಗಳು ಸಂಚರಿಸಲು ಶುರು ಮಾಡಿವೆ. ಈ ರೈಲು ಸಂಚಾರ ಆರಂಭ ಮಾಡುತ್ತಿದ್ದಂತೆ ದುರ್ಘಟನಾ ಸ್ಥಳದ ಹಳಿಯ ಪಕ್ಕದಲ್ಲೇ ನಿಂತಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಅಧಿಕಾರಿಗಳು, ದುರಸ್ತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾವುಕರಾಗಿ ರೈಲಿನತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಅಶ್ವಿನಿ ವೈಷ್ಣವ್ ಅವರು ದೇವರನ್ನು ನೆನೆಯುತ್ತ ಸಾಗುತ್ತಿದ್ದ ರೈಲಿಗೆ ಕೈಮುಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಯಾವಾಗ? – ಟ್ರಸ್ಟ್ ಹೇಳಿದ್ದೇನು?
ಭಾನುವಾರ ರಾತ್ರಿ ಸಂಚರಿಸಿದ ರೈಲು ಕಲ್ಲಿದ್ದಲು ಹೊತ್ತ ಗೂಡ್ಸ್ ರೈಲಾಗಿದ್ದು, ವಿಶಾಖಪಟ್ಟಣದಿಂದ ಆಗಮಿಸಿತ್ತು. ಇದು ರೂರ್ಕೆಲಾ ಉಕ್ಕು ಘಟಕದತ್ತ ಪ್ರಯಾಣ ಬೆಳೆಸಿತು. ಇದೇ ಮಾರ್ಗದಲ್ಲಿ ಬೆಂಗಳೂರು-ಹೌರಾ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿತ್ತು. ಬಹುಶಃ ಇಂದಿನಿಂದ ಪ್ರಯಾಣಿಕ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘ಕೇವಲ 51 ತಾಸಿನಲ್ಲಿ ಎರಡೂ ಬದಿಯ ಹಳಿ ದುರಸ್ತಿ ಪೂರ್ಣಗೊಳಿಸಲಾಗಿದೆ. ಇನ್ನು ರೈಲು ಸಂಚಾರ ಸಹಜ ಸ್ಥಿತಿಗೆ ಮರಳಲಿದೆ. ಈಗಿನಿಂದಲೇ ಸಂಚಾರ ಆರಂಭವಾಗಲಿದೆ ಎಂದರು.
ಹೌರಾದಿಂದ ಚೆನ್ನೈ/ಬೆಂಗಳೂರು ಕಡೆ ಬರುವ ಹಾಗೂ ಹೌರಾ (Howrah) ಕಡೆ ಹೋಗುವ ಎರಡೂ ಮಾರ್ಗಗಳ ಹಳಿ ದುರಸ್ತಿ ಶನಿವಾರ ರಾತ್ರಿ ಆರಂಭವಾಗಿತ್ತು. ಮೊದಲು ಹಳಿ ಜೋಡಿಸಿದ ಕಾರ್ಮಿಕರು, ನಂತರ ಸಿಗ್ನಲಿಂಗ್ ಹಾಗೂ ವಿದ್ಯುದೀಕರಣ ವ್ಯವಸ್ಥೆ ಸರಿಪಡಿಸಿದರು.