ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಆದ್ರೀಗ ನಮ್ಮ ಮೆಟ್ರೋ ಹೆಣ್ಣು ಮಕ್ಕಳಿಗೆ ಎಷ್ಟು ಸುರಕ್ಷಿತ ಅನ್ನೋ ಅನುಮಾನ ಈಗ ಎಲ್ಲರನ್ನ ಕಾಡ್ತಿದೆ. ಇದೀಗ ಯುವತಿಯರ ಆಕ್ಷೇಪಾರ್ಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಚೆನ್ನೈ ವಿರುದ್ಧ ರಾಜಸ್ಥಾನ್ ರಾಯಲ್ಸ್‌ಗೆ ಜಯ – ಗೆಲುವಿನೊಂದಿಗೆ ಲೀಗ್‌ಗೆ ವಿದಾಯ ಹೇಳಿದ ಆರ್‌ಆರ್
ವ್ಯಕ್ಯಿಯೊಬ್ಬ ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ಬೆನ್ನಲ್ಲೇ ಇದೀಗ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ (ಸುಮೊಟೋ ಕೇಸ್) ಪ್ರಕರಣ ದಾಖಲಾಗಿದೆ.
“ಮೆಟ್ರೋ ಕ್ಲಿಕ್ಸ್” ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೆಟ್ರೋದಲ್ಲಿನ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. 5,538 ಹಿಬಾಲಕರನ್ನು ಹೊಂದಿರುವ ಖಾತೆಯಲ್ಲಿ ಸುಮಾರು 13ಕ್ಕೂ ಹೆಚ್ಚು ವಿಡಿಯೋಗಳನ್ನು ಅಪರಿಚಿತನೋರ್ವ ಹಂಚಿಕೊಂಡಿದ್ದಾನೆ. ಮೆಟ್ರೋ ರೈಲಿನ ಒಳಗೆ, ನಿಲ್ದಾಣಗಳಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ.
ಸದ್ಯ ಅಪರಿಚಿತನ ವಿಕೃತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಲ್ಲಾ ವಿಡಿಯೋಗಳು ಡಿಲೀಟ್ ಆಗಿವೆ. ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಕೆಲ ಜನರು ಧ್ವನಿ ಎತ್ತಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಅಪರಿಚಿತನೋರ್ವ ಇನ್ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು’ ಎಂದು ಒಬ್ಬರು ಹೇಳಿದ್ದಾರೆ.
ಈ ಬಗ್ಗೆ ಮತ್ತೊಬ್ಬರು ಮಾತನಾಡಿದ್ದು, ‘ಈ ರೀತಿಯ ಕೃತ್ಯಗಳನ್ನು ನಾವು ನಾಶ ಮಾಡದಿದ್ದರೆ ಮುಂದೊಂದು ದಿನ ಇದು ನಮ್ಮನ್ನು ನಾಶ ಮಾಡುತ್ತದೆ’ ಎಂದು ಹೇಳಿದ್ದಾರೆ.ಇನ್ನು ಈ ಬಗ್ಗೆ ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ. ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ತಕ್ಷಣ ಬೆಂಗಳೂರು ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.