ಮಾರಿಗುಡಿಯಲ್ಲಿ ಆಣೆ ಪ್ರಮಾಣದ ಸವಾಲ್ – ಕಾರ್ಕಳದಲ್ಲಿ ಸುನಿಲ್ ಕುಮಾರ್ Vs ಪ್ರಮೋದ್ ಮುತಾಲಿಕ್

ಮಾರಿಗುಡಿಯಲ್ಲಿ ಆಣೆ ಪ್ರಮಾಣದ ಸವಾಲ್ – ಕಾರ್ಕಳದಲ್ಲಿ ಸುನಿಲ್ ಕುಮಾರ್ Vs ಪ್ರಮೋದ್ ಮುತಾಲಿಕ್

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ಕೂಡ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿ ಶಾಸಕ ಸುನಿಲ್​​ ಕುಮಾರ್​ ವಿರುದ್ಧ ಅವರ ರಾಜಕೀಯ ಗುರು ಎಂದೇ ಹೇಳಲಾಗುತ್ತಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಖಾಡಕ್ಕಿಳಿದಿದ್ದರು. ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡಿತ್ತು. ಇದೆಲ್ಲದರ ಹೊರತಾಗಿ ಸುನಿಲ್ ಕುಮಾರ್ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಚುನಾವಣಾ ಫಲಿತಾಂಶದ ಬಳಿಕ ಗುರು ಶಿಷ್ಯರ ಜಟಾಪಟಿ ಜೋರಾಗಿದೆ.

ಇದನ್ನೂ ಓದಿ : ಸಿಎಂ ಪಟ್ಟಕ್ಕೇರಲು ಸಿದ್ದು, ಡಿಕೆಶಿ ಪಟ್ಟು – ಇಬ್ಬರ ಕಿತ್ತಾಟದಲ್ಲಿ ಮೂರನೆಯವರ ಪಾಲಾಗುತ್ತಾ ಗದ್ದುಗೆ?

ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಶಿಷ್ಯ, ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಮಧ್ಯದ ಕಾಳಗ ಅಂತ್ಯವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಪ್ರಮೋದ್ ಮುತಾಲಿಕ್ ತಮ್ಮ ವಿರುದ್ಧ ಸ್ಪರ್ಧಿಸಿದ್ರೂ ತುಟಿ ಬಿಚ್ಚದ ಸುನಿಲ್​ ಕುಮಾರ್​ ಮೇ.15ರಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಾಂಬ್ ಸಿಡಿಸಿದ್ದರು. ಪ್ರಮೋದ್ ಮುತಾಲಿಕ್  ಕಾಂಗ್ರೆಸ್​ನವರಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಆರೋಪ ಮಾಡಿದ್ದರು. ಇದಕ್ಕೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ತನ್ನ ವಿರುದ್ಧದ ಆರೋಪಕ್ಕೆ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ ಬಂದ ಪ್ರಮೋದ್ ಮುತಾಲಿಕ್, ನಾನು ಕೇವಲ ಆರೋಪ ಮಾಡಿಲ್ಲ ದಾಖಲೆ ಬಹಿರಂಗಗೊಳಿಸಿದ್ದೇನೆ. ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ ಎಂದು ಸುನಿಲ್​ ಕುಮಾರ್​ ವಿರುದ್ಧ ಆರೋಪಿಸಿದರು.

ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಪ್ರಮೋದ್ ಮುತಾಲಿಕ್, ನನ್ನನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದೀರಿ. ಹಣ ಗಳಿಸುವ ಉದ್ದೇಶ ಇದ್ದಿದ್ದರೆ ಧಾರವಾಡದಿಂದ ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. 48 ವರ್ಷ ಹೋರಾಟ ಮಾಡಬೇಕಾಗಿ ಇರಲಿಲ್ಲ. ನಾನು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಯಾವುದೇ ಉತ್ತರ ನೀಡಿಲ್ಲ. ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ. ಹಾಗೇ ಸುನಿಲ್ ಕುಮಾರ್ ನಾಲಗೆ ಬಿಗಿ ಹಿಡಿದು ಮಾತಾಡಬೇಕು. ಕನ್ನಡಿ ಮುಂದೆ ನಿಂತು ಸುನಿಲ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕು. ಮಾಜಿ ಸಚಿವ ಈಶ್ವರಪ್ಪ ಇಂಧನ ಇಲಾಖೆ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದರು. ಕಾರ್ಕಳದ ಅಧಿಕಾರಿಗಳು ಕೂಡ ಆರೋಪ ಮಾಡಿದ್ದರು. ಕಾರ್ಕಳದ ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿ ಬಂದಿದ್ದೇನೆ. ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡುವ ನೈತಿಕತೆ ನಿಮಗೆ ಇದೆಯಾ? ಭ್ರಷ್ಟತೆ, ವಂಚನೆ, ಮೋಸದಿಂದ ಗೆದ್ದಿದ್ದೀರಿ ನಿಮಗೆ ಅಭಿನಂದನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತದಾನದಲ್ಲಿ ಸೋತಿರಬಹುದು ಹೋರಾಟ, ಹಿಂದುತ್ವ, ಸತ್ಯದಲ್ಲಿ ನಾನು ಸೋತಿಲ್ಲ. ನೀವು ನನಗೆ ಬುದ್ಧಿ ಕಲಿಸುವ ಅವಶ್ಯಕತೆ ಇಲ್ಲ ಆರ್‌ಎಸ್‌ಎಸ್‌ ಕಲಿಸಿದೆ. ತಾಕತ್ತಿದ್ದರೆ ನನ್ನ ಸವಾಲು ಸ್ವೀಕಾರ ಮಾಡಿ. ಮಾರಿಗುಡಿಗೆ ಹೋಗಿ ಪ್ರಮಾಣ ಮಾಡಿ. ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ ಮಾಡಿ ಎಂದು ಸವಾಲು ಹಾಕಿದ್ದಾರೆ.

suddiyaana