ಮೊಬೈಲ್ ತೆಗೆದ್ರೆ ಓ ನಲ್ಲ.. ನೀ ನಲ್ಲ.. – ಸ್ಟಾರ್ಸ್ ಬಾಯಲ್ಲೂ ಕರಿಮಣಿ ಮಾಲೀಕ, ಎಲ್ಲೆಲ್ಲೂ ಉಪ್ಪಿ ಹಾಡಿನ ಟ್ರೆಂಡ್
ಫೇಸ್ಬುಕ್ಗೆ ಹೋದ್ರೂ ಓ ನಲ್ಲ.. ಇನ್ಸ್ಟಾಗ್ರಾಂನಲ್ಲೂ ನೀ ನಲ್ಲ.. ಮೊಬೈಲ್ ಓಪನ್ ಮಾಡಿದ್ರೆ ಸಾಕು ವಾಟ್ಸಾಪ್ ಸ್ಟೇಟಸ್, ಗ್ರೂಪ್ಸ್, ರೀಲ್ಸ್ ಎಲ್ಲಿ ನೋಡಿದ್ರೂ ಕರಿಮಣಿ ಮಾಲೀಕನದ್ದೇ ಕಾರುಬಾರು. ಅದ್ರ ನಡುವೆ ಈ ರಾಹುಲ್ಲಾ ಬೇರೆ ಸೇರ್ಕೊಂಡು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಚಟಪಟ ಚಟಪಟ, ಒನ್ ಮೋರ್ ಒನ್ ಮೋರ್ ಅಂತಾ ಹಾವಳಿ ಇಡ್ತಿದ್ದಾರೆ.
ಮಕ್ಕಳಿಂದ ಹಿಡಿದು ಮುದುಕರ ಬಾಯಲ್ಲೂ ಈಗ ಇದೇ ಹಾಡು ಗುನುಗುಡ್ತಿದೆ. ಲಕ್ಷಾಂತರ ಮಂದಿ ರೀಲ್ಸ್ ಮಾಡಿ ಜನರ ತಲೆಗೆ ಹುಳ ಬಿಡ್ತಿದ್ದಾರೆ. ಅಷ್ಟಕ್ಕೂ ಈ ಕರಿಮಣಿ ಮಾಲೀಕನನ್ನ ಸೋಶಿಯಲ್ ಮೀಡಿಯಾಗೆ ತಂದು ಬಿಟ್ಟಿದ್ದೇ ಕನಕ ಅನ್ನೋ ಹುಡುಗ. ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲಕ ಕನಕ ನಾರ್ಮಲ್ ಆಗಿ ಎಲ್ಲರ ಥರ ಅವನೂ ರೀಲ್ಸ್ ಮಾಡ್ತಿದ್ದ. ಹೀಗೇ ಹುಡುಗಿ ಬಗ್ಗೆ ವಿಡಿಯೋ ಮಾಡುವಾಗ, ಅವಳಾಗೇ ಬಂದಳು ಅವಳಾಗೆ ಹೋದಳು. ಹೋಗುವಾಗ ಒಂದು ಮಾತು ಹೇಳಿದ್ಲು ಮಗಾ. ಓ ನಲ್ಲ ನೀನಲ್ಲ ಎಂದು ಡೈಲಾಗ್ ಹೇಳುತ್ತಾ ಮೂರು ಲೈನ್ ಕರಿಮಣಿ ಮಾಲೀಕ ಒರಿಜಿನಲ್ ಸಾಂಗ್ ಫ್ಲೋ ಬಿಟ್ಟಿದ್ದ. ಅಷ್ಟೇ.. ಅದ್ಯಾವ ಗಳಿಗೆಯಲ್ಲಿ ಈ ಹಾಡು ಬಳಸಿದ್ನೋ ಏನೋ. ಈಗ ಯಾರು ನೋಡಿದ್ರೂ ಕರಿಮಣಿ ಮಾಲೀಕ ನೀನಲ್ಲ ಅಂತಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಈ ಕರಿಮಣಿ ಮಾಲೀಕನ ಕ್ರೇಜ್ ಕಡಿಮೆಯಾಗೋ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ ಇತ್ತೀಚೆಗಷ್ಟೇ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ಪೇಜ್ನಲ್ಲಿ ಕರಿಮಣಿ ಮಾಲೀಕ ರಾಹುಲ್ಲಾ ಎಂಬ ವಿಡಿಯೋ ಅಪ್ಲೋಡ್ ಆಗಿತ್ತು. ಆ ವಿಡಿಯೋದಲ್ಲಿ ರಿಯಲ್ ರಾಹುಲ್ಲಾ ಇರಲಿಲ್ಲ. ಆದ್ರೀಗ ಮತ್ತೊಂದು ವಿಡಿಯೋದಲ್ಲಿ ರಾಹುಲ್ಲನೂ ಪ್ರತ್ಯಕ್ಷ ಆಗಿದ್ದಾನೆ. ಹೊಸ ವಿಡಿಯೋದಲ್ಲಿ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಹಾಗೂ ರಾಹುಲ್ಲಾ ಇಬ್ಬರೂ ಇದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೋ ಕರಿಮಣಿ ಮಾಲೀಕ ಸಿಕ್ಕೇಬಿಟ್ಟ ಅಂತಿದ್ದಾರೆ ಜನ.
ಇವ್ರಿಷ್ಟೇ ಅಲ್ಲದೆ ಮಕ್ಕಳು, ಯುವತಿಯರು, ಹುಡುಗರು ಕೂಡ ಇದೇ ಹಾಡಿಗೆ ರೀಲ್ಸ್ ಮಾಡ್ತಿದ್ದಾರೆ. ಕಾಲೇಜು ಸ್ಟೂಡೆಂಟ್ಸ್ ಕೂಡ ಕರಿಮಣಿ ಮಾಲೀಕ ನೀ ನಲ್ಲ ಅಂತಾ ಮೈ ಬಳುಕಿಸುತ್ತಿದ್ದಾರೆ.
ಕರಿಮಣಿ ಹವಾ ಅದೆಷ್ಟರ ಮಟ್ಟಿಗೆ ಇದೆ ಅಂದ್ರೆ ಸಾಮಾನ್ಯರಷ್ಟೇ ಅಲ್ಲ, ನಟ-ನಟಿಯರು, ನಟರ ಪತ್ನಿಯರು ಹೀಗೆ ಎಲ್ಲರೂ ರೀಲ್ಸ್ ಮಾಡ್ತಿದ್ದಾರೆ. ಮಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ ಇದೇ ಸಾಂಗ್ಗೆ ಕಾಮಿಡಿ ಟಚ್ ಕೊಟ್ಟಿದ್ದಾರೆ.
ಮಾಜಿ ಕ್ರಿಕೆಟರ್ ವಿಜಯ್ ಭಾರದ್ವಾಜ್ ಬಾಯಲ್ಲೂ ಕರಿಮಣಿ ಮಾಲೀಕ ನಲಿದಾಡಿದ್ದಾನೆ. ಲೈಟಾಗಿ ಸ್ಟೆಪ್ಸ್ ಕೂಡ ಹಾಕಿದ್ದಾರೆ.
ಅಷ್ಟಕ್ಕೂ ಕರಿಮಣಿ ಮಾಲೀಕ ಸಾಂಗ್ ಏನು ನಿನ್ನೆ, ಮೊನ್ನೆಯದಲ್ಲ. ದಶಕಗಳ ಹಿಂದಿನ ಎವರ್ಗ್ರೀನ್ ಸಾಂಗ್. 1999ರಲ್ಲಿ ರಿಲೀಸ್ ಆದ ‘ಉಪೇಂದ್ರ’ ಸಿನಿಮಾದ ‘ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ..’ ಹಾಡು. ಈ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಈ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರೋದು ಗುರುಕಿರಣ್ ಅವ್ರ ಖುಷಿಗೂ ಕಾರಣವಾಗಿದೆ. ಅಷ್ಟೇ ಯಾಕೆ ರೀಲ್ಸ್ ಮೂಲಕ ಕರಿಮಣಿ ಮಾಲೀಕ ಗೀಳು ಹತ್ತಿಸಿರೋ ಕನಕ ಕೂಡ ಗುರುಕಿರಣ್ ರನ್ನ ಭೇಟಿಯಾಗಿದ್ದಾನೆ. ಬೆಂಗಳೂರಿನಲ್ಲಿರುವ ಗುರುಕಿರಣ್ ಅವರ ಸ್ಟೂಡಿಯೋಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದಾನೆ. ಒಟ್ನಲ್ಲಿ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕನ ಹವಾ ಕಡಿಮೆ ಆಗೋ ಲಕ್ಷಣಗಳು ಕಾಣ್ತಿಲ್ಲ. ಇನ್ನೊಂದು ಸಾಂಗ್ ವೈರಲ್ ಆಗಿ ಟ್ರೆಂಡಿಂಗ್ ಗೆ ಬರೋವರೆಗೂ ನೀವು ಅಡ್ಜಸ್ಟ್ ಮಾಡಿಕೊಳ್ಳಲೇಬೇಕು.