ಕಿಂಗ್‌ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!

ಕಿಂಗ್‌ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಗೆದ್ದುಕೊಂಡಿದೆ. ಭಾರತದ ವಿರುದ್ಧ ನ್ಯೂಜಿಲೆಂಡ್‌ 41 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ನ್ಯೂಜಿಲೆಂಡ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ಇದನ್ನೂ ಓದಿ:‌ ಬಿಗ್‌ಬಾಸ್‌ ಹಣದಲ್ಲಿ ವ್ಯವಸಾಯ ಮಾಡುತ್ತೀನಿ! – ಮತ್ತೊಮ್ಮೆ ಹೃದಯ ಗೆದ್ದ ಗಿಲ್ಲಿನಟ!

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 337 ರನ್‌ ಕಲೆಹಾಕಿತು. 5 ರನ್‌ಗೆ 2 ವಿಕೆಟ್‌ ಉರುಳಿದರೂ, 4ನೇ ವಿಕೆಟ್‌ಗೆ ಜೊತೆಯಾದ ಡ್ಯಾರಿಲ್‌ ಮಿಚೆಲ್‌(131 ಎಸೆತಕ್ಕೆ 137) ಹಾಗೂ ಗ್ಲೆನ್‌ ಫಿಲಿಪ್ಸ್‌(88 ಎಸೆತಕ್ಕೆ 106) ಪಂದ್ಯದ ಚಿತ್ರಣ ಬದಲಿಸಿದರು. ಈ ಜೋಡಿ 219 ರನ್‌ ಜೊತೆಯಾಟವಾಡಿತು. ಭಾರತದ ಪರ ಹರ್ಷಿತ್‌, ಅರ್ಶ್‌ದೀಪ್‌ ಸಿಂಗ್‌ ತಲಾ 3 ವಿಕೆಟ್‌ ಕಿತ್ತರು.

ದೊಡ್ಡ ಮೊತ್ತ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಬೇಕಿತ್ತು. ಅದು ಸಾಧ್ಯವಾಗಲಿಲ್ಲ. ರೋಹಿತ್‌ 11, ಗಿಲ್‌ 23, ಶ್ರೇಯಸ್‌ 3, ಕೆ.ಎಲ್‌.ರಾಹುಲ್‌ 1 ರನ್‌ಗೆ ವಿಕೆಟ್‌ ಒಪ್ಪಿಸಿದರು. 71ಕ್ಕೆ 4 ವಿಕೆಟ್‌ ಪತನಗೊಂಡ ಬಳಿಕ ತಂಡವನ್ನು ಮೇಲೆತ್ತಿದ್ದು ಕೊಹ್ಲಿ-ನಿತೀಶ್‌. ಈ ಜೋಡಿ 88 ರನ್‌ ಸೇರಿಸಿತು. ನಿತೀಶ್‌ 53 ರನ್‌ಗೆ ಔಟಾದ ಬಳಿಕ, ಹರ್ಷಿತ್‌ ಜೊತೆಗೂಡಿದ ಕೊಹ್ಲಿ 7ನೇ ವಿಕೆಟ್‌ಗೆ 99 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಹಂತದಲ್ಲಿ ಹರ್ಷಿತ್‌ 52 ರನ್‌ಗೆ ಔಟಾದರು. ಏಕಾಂಗಿಯಾಗಿ ಹೋರಾಡಿದ ಕೊಹ್ಲಿ ಏಕದಿನದಲ್ಲಿ 54ನೇ ಶತಕ ಬಾರಿಸಿದರೂ, 108 ಎಸೆತಕ್ಕೆ 124 ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ನ 46ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ತಂಡದ ಹೋರಾಟ ಅಂತ್ಯವಾಯಿತು. 46 ಓವರ್‌ಗಳಲ್ಲಿ ಭಾರತ 296ಕ್ಕೆ ಆಲೌಟಾಯಿತು.

Shwetha M