ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರ್! – ನಗರದಲ್ಲಿ 1 ಕೋಟಿಯ ಗಡಿ ದಾಟಲಿದೆ ಖಾಸಗಿ ವಾಹನಗಳ ಸಂಖ್ಯೆ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ಗೋಳಾಗಿದೆ. ವಾಹನ ದಟ್ಟಣೆಯನ್ನು ಸರದೂಗಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಈಗಾಗ್ಲೇ ಜಾರಿಗೆ ತಂದಿದೆ. ಆದರೂ ಕೂಡ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗಂಟೆಗಟ್ಟಲೆ ಟ್ರಾಫಿಕ್ ಮಧ್ಯೆ ಕಾಲ ಕಳೆಯುವಂತಾಗಿದೆ. ಈ ಮಧ್ಯೆ ದಸರಾ-ದೀಪಾವಳಿ ಹಬ್ಬ ಮುಗಿಯುವ ವೇಳೆಗೆ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ಗಡಿ ಮುಟ್ಟಲಿದೆ ಎಂದು ವರದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ 99.8 ಲಕ್ಷ ವಾಹನಗಳಿದ್ದು, ಇವುಗಳನ್ನು ಆರ್‌ಟಿಒಗಳಲ್ಲಿ ಸಾರಿಗೆಯೇತರ ವಾಹನಗಳಾಗಿ ನೋಂದಾಯಿಸಲಾಗಿದೆ. ಅವುಗಳಲ್ಲಿ 75.6 ಲಕ್ಷ ದ್ವಿಚಕ್ರ ವಾಹನಗಳು ಮತ್ತು 23.1 ಲಕ್ಷ ಕಾರುಗಳು ವೈಯಕ್ತಿಕ ವಾಹನಗಳಾಗಿ ನೋಂದಣಿಯಾಗಿವೆ. 2023ರ ಸೆಪ್ಟೆಂಬರ್ ತಿಂಗಳೊಂದರಲ್ಲೇ ಪ್ರತಿ ದಿನ ಬೆಂಗಳೂರು ನಗರದಲ್ಲಿ ಸರಾಸರಿ 1,300 ಹೊಸ ಬೈಕ್ ಹಾಗೂ ಸ್ಕೂಟರ್‌ಗಳು ನೋಂದಣಿ ಆಗಿವೆ. ಪ್ರತಿ ದಿನ ಸರಾಸರಿ 409 ಹೊಸ ಕಾರುಗಳು ಬೆಂಗಳೂರಿನ ರಸ್ತೆಗೆ ಇಳಿದಿವೆ. ಬೆಂಗಳೂರು ನಗರದಲ್ಲಿ 2023ರ ಸೆಪ್ಟೆಂಬರ್ 30ರವರೆಗಿನ ಅಂಕಿ ಅಂಶಗಳ ಪ್ರಕಾರ ಖಾಸಗಿ ಹಾಗೂ ಹಳದಿ ಬೋರ್ಡ್ ಪ್ರಯಾಣಿಕ ವಾಹನಗಳೂ ಸೇರಿದಂತೆ ಒಟ್ಟು 1.1 ಕೋಟಿ ವಾಹನಗಳು ನೋಂದಣಿ ಆಗಿವೆ. ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಹಬ್ಬದ ವೇಳೆ ಹೊಸ ವಾಹನಗಳ ನೋಂದಣಿ ಪ್ರಮಾಣ ಏರಿಕೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬಿಳಿ ಬೋರ್ಡ್‌ನ ಸಾರಿಗೆ ರಹಿತ ಖಾಸಗಿ ವಾಹನಗಳ ಸಂಖ್ಯೆ ಬೆಂಗಳೂರಿನಲ್ಲಿ ಶೀಘ್ರದಲ್ಲೇ 1 ಕೋಟಿಯ ಗಡಿ ದಾಟುವ ಸಾಧ್ಯತೆ ಇದೆ ಎಂದು ಆರ್‌ಟಿಒ ಮೂಲಗಳು ಮಾಹಿತಿ ನೀಡಿವೆ.
2012-13ರಲ್ಲಿ ಬೆಂಗಳೂರು ನಗರದಲ್ಲಿ 55.2 ಲಕ್ಷ ವಾಹನಗಳು ಇದ್ದವು. ಇದರಲ್ಲಿ ಬಿಳಿ ಹಾಗೂ ಹಳದಿ ಬೋರ್ಡ್ ವಾಹನಗಳು ಸೇರಿದ್ದವು. ಆದರೆ, 2023ರ ಸೆಪ್ಟೆಂಬರ್ 30 ರ ವೇಳೆಗೆ ಈ ಸಂಖ್ಯೆ 1.1 ಕೋಟಿ ದಾಟಿದೆ. ಬೆಂಗಳೂರಿನಲ್ಲಿ ಮೆಟ್ರೋ ಹಾಗೂ ಬಿಎಂಟಿಸಿ ಇದ್ದರೂ ಕೂಡಾ ಬೆಂಗಳೂರಿನ ಮಂದಿ ಖಾಸಗಿ ವಾಹನಗಳಿಗೆ ಮನ ಸೋಲುತ್ತಿದ್ದಾರೆ.