ಕರಾವಳಿಯಲ್ಲಿ ಮತ್ತೆ ವಕ್ಕರಿಸಿಕೊಂಡ ಹೆಮ್ಮಾರಿ – ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಏರಿಕೆ

ಕರಾವಳಿಯಲ್ಲಿ ಮತ್ತೆ ವಕ್ಕರಿಸಿಕೊಂಡ ಹೆಮ್ಮಾರಿ – ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಏರಿಕೆ

ಕರ್ನಾಟಕ ಕರಾವಳಿ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಯಾವ ಹೆಮ್ಮಾರಿ ಕರಾವಳಿಯಿಂದ ಕಡಿಮೆಯಾಗಿತ್ತೋ ಅಂತಾ ಜನ ನಿಟ್ಟುಸಿರು ಬಿಟ್ಟಿದ್ದರೋ ಅದೇ ಹೆಮ್ಮಾರಿ ಮತ್ತೆ ವಕ್ಕರಿಸಿದೆ. ಹೌದು. ಮಹಾಮಾರಿ ಎಂಡೋಸಲ್ಪಾನ್ ಪೀಡಿತರ ಸಂಖ್ಯೆ ಮತ್ತೆ ಹೆಚ್ಚಾಗಿದೆ.

ಇದನ್ನೂ ಓದಿ: ಸಾಲು ಸಾಲು ರಜೆ ಎಫೆಕ್ಟ್!‌ –  ಮತ್ತೆ ಸುಲಿಗೆಗೆ ಇಳಿದ್ರಾ ಖಾಸಗಿ ಬಸ್​ ಮಾಲಿಕರು?

ಕರ್ನಾಟಕ ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಕರಾಳತೆಗೆ ನಲುಗಿದ ಕುಟುಂಬಗಳು ಅದೆಷ್ಟೋ.. ಹುಟ್ಟಿದ ಮಗು ಆರೋಗ್ಯವಾಗಿರಲಿ ಎಂದು ಬೇಡಿಕೊಂಡ ಹೆತ್ತವರು ಮಗು ಎಂಡೋಸಲ್ಪಾನ್ ಮಹಾಮಾರಿಯಿಂದ ಬಳಲುತ್ತಿರುವುದು ಕಂಡು ಅಕ್ಷರಶಃ ಕಂಗೆಟ್ಟು ಹೋಗಿದ್ದರು. ನಂತರದ ದಿನಗಳಲ್ಲಿ ಈ ಮಹಾಮಾರಿಯ ಹಾವಳಿ ಕಡಿಮೆಯಾಗಿತ್ತು. ಕರಾವಳಿಯ ಜನತೆ ನಿಧಾನವಾಗಿ ಈ ಮಾರಿಯನ್ನು ಮರೆತೇ ಹೋಗಿದ್ದರು. ಈಗ ಮತ್ತದೇ ಹೆಮ್ಮಾರಿಯ ಆರ್ಭಟ ಮುಂದುವರೆದಿದೆ. ಇದೀಗ ಹೊಸ ಸರ್ವೆಯಲ್ಲಿ ಮಕ್ಕಳು ಸೇರಿ 543 ಜನರನ್ನು ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿದೆ. ಆರೋಗ್ಯ ಇಲಾಖೆ  ಈ ವರದಿ ಕರಾವಳಿ ಜನತೆಗೆ ಶಾಕ್ ಕೊಟ್ಟಿದೆ.

1986ರಿಂದ 2011 ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುಮಾರು 11,794 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಫಾನ್​ ವಿಷದ್ರಾವಣವನ್ನು ಸಿಂಪಡಿಸಲಾಗಿತ್ತು. ಇದು ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರಿತ್ತು. ಮಕ್ಕಳು ಹುಟ್ಟುತ್ತಲೇ ಬುದ್ಧಿಮಾಂದ್ಯ, ಅಂಗವೈಕಲ್ಯ, ನರ ದೌರ್ಬಲ್ಯಕ್ಕೆ ತುತ್ತಾಗಿದ್ದರು. ಇನ್ನು ಪುರುಷರೂ ಕೂಡಾ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಬಲ್ಯದಂತಹ ಸಮಸ್ಯೆ ಎದುರಿಸಿದ್ದರು. 2023-24 ರಲ್ಲಿ ಒಟ್ಟು 1554 ಜನರನ್ನು ಎಂಡೋಸಲ್ಫಾನ್ ಪೀಡಿತರನ್ನಾಗಿ ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಮಕ್ಕಳು ಸೇರಿ 543 ಜನರನ್ನು ಎಂಡೋ ಪೀಡಿತರನ್ನು ಆರೋಗ್ಯ ಇಲಾಖೆ ಗುರುತಿಸಿದೆ.  ಗೇರುಬೀಜ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್, ಜನರ ಮೇಲೆ ಪರಿಣಾಮ ಬೀರಿತ್ತು. ಹುಟ್ಟುತ್ತಲೇ ಬುದ್ಧಿ ಭ್ರಮಣೆ ,ಬಹು ಅಂಗಾಂಗ ವೈಫಲ್ಯದಿಂದಾಗಿ ಅದೆಷ್ಟೋ ಮಕ್ಕಳು ನರಕಯಾತನೆ ಅನುಭವಿಸಿದ್ದರು.ವಿಜ್ಞಾನಿಗಳ ಪ್ರಕಾರ, ಎಂಡೋಸಲ್ಫಾನ್ ಅಡ್ಡಪರಿಣಾಮದಿಂದ ಬರುವ ನ್ಯೂನತೆಗಳು ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ. ಎಂಡೋ ಬಾಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಈ ಹಿಂದೆಯೇ ಸರ್ಕಾರ ಪೀಡಿತರಿಗೆ ನೀಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಇದರಿಂದಾಗಿ ಎಂಡೋ ಪೀಡಿತರಿಗೆ ಯಾವ ಸೌಲತ್ತು ಇಲ್ಲದೇ ತೊಂದರೆ ಪಡುವಂತಾಗಿತ್ತು. ಆದರೆ ಈಗ ಮತ್ತೆ ಎಂಡೋ ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದಿದೆ. ಸರ್ಕಾರ ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.

Sulekha