ದೇಶದಲ್ಲೇ ಅತೀ ಹೆಚ್ಚು ಆನೆಗಳು ಕರ್ನಾಟಕದಲ್ಲಿವೆ – ಗಜಪಡೆಯ ಲದ್ದಿಯಿಂದಲೇ ಅದೆಷ್ಟು ಲಾಭ..?

ದೇಶದಲ್ಲೇ ಅತೀ ಹೆಚ್ಚು ಆನೆಗಳು ಕರ್ನಾಟಕದಲ್ಲಿವೆ – ಗಜಪಡೆಯ ಲದ್ದಿಯಿಂದಲೇ ಅದೆಷ್ಟು ಲಾಭ..?

ಆನೆ. ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿ. ಭಾರತೀಯರ ಪಾಲಿಗೆ ಪೂಜ್ಯ ಪ್ರಾಣಿ, ಪ್ರೀತಿಯ ಪ್ರಾಣಿ. ‘ಗಜ’ಮುಖವನ್ನು ಭಾರತದಲ್ಲಿ ಪೂಜನೀಯವಾಗಿ ಕಾಣುವುದೊಂದಿಗೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ಇಂತಹ ಆನೆಗಳ ನೆಲೆವೀಡು ಕರುನಾಡು. ಭೂಮಿ ಮೇಲಿನ ಈ ದೈತ್ಯ ಪ್ರಾಣಿ ಆನೆ ಮತ್ತೆ ಸುದ್ದಿಯಲ್ಲಿದೆ. ಯಾಕೆಂದರೆ ದೇಶದಲ್ಲೇ ಅತಿ ಹೆಚ್ಚು ಆನೆಗಳ ಸಂಖ್ಯೆ ಕರ್ನಾಟಕದಲ್ಲಿದೆ ಎಂಬ ಅಂಕಿ ಅಂಶವು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಇತ್ತೀಚೆಗಷ್ಟೆ ಹುಲಿಗಳ ಗಣತಿಯಲ್ಲೂ ರಾಜ್ಯದಲ್ಲಿ ಅವುಗಳ ಸಂಖ್ಯೆ ಸಮಾಧಾನ ಮೂಡಿಸಿತ್ತು. ಅದರ ಬೆನ್ನಲ್ಲೇ ಅತಿ ಹೆಚ್ಚು ಆನೆಗಳು ಕರ್ನಾಟಕದಲ್ಲಿರುವುದನ್ನು ಗಣತಿಯು ಬಹಿರಂಗಪಡಿಸಿದೆ.

ಇದನ್ನೂ ಓದಿ : ವಜ್ರದ ಹರಳುಗಳಿಂದಲೇ ತಯಾರಾಯ್ತು ಟೀ ಮಗ್‌! – ಅಬ್ಬಬ್ಬಾ.. ಇದರ ಬೆಲೆ ಎಷ್ಟು ಗೊತ್ತಾ?

ಯಾವುದೇ ಪ್ರದೇಶದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ಆ ಪ್ರದೇಶದಲ್ಲಿ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ ಸಮೃದ್ಧವಾಗಿದೆ ಎಂದರ್ಥ. ಇದನ್ನು ಜನಸಾಮಾನ್ಯರಲ್ಲದೇ ಸಂಶೋಧಕರೂ ಒಪ್ಪಿಕೊಳ್ಳುತ್ತಾರೆ. ವನ್ಯಜೀವಿಗಳ ಬದುಕಿಗೆ ಉತ್ತಮ ವಾತಾವರಣ ಇದ್ದಾಗ ಮಾತ್ರ ಅವುಗಳ ಸಂತತಿ ವೃದ್ಧಿಯಾಗುತ್ತದೆ. ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂಬ ಕೂಗಿನ ನಡುವೆಯೂ ವನ್ಯಜೀವಿಗಳ ಸಂಖ್ಯೆ ವೃದ್ಧಿಸುತ್ತಿರುವುದು ಅರಣ್ಯ ನಾಶವನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲದೇ ಹೋದರು ವಿನಾಶದ ಮಟ್ಟ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಊಹಿಸಬಹುದು. ಅದಿಲ್ಲವಾದರೂ ಇರುವ ಅರಣ್ಯದಲ್ಲೇ ಅವುಗಳ ಬದುಕಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಸಹ ನಂಬಬಹುದು.

ಹುಲಿ, ಆನೆ, ಚಿರತೆ ಸೇರಿದಂತೆ ಹಲವು ವನ್ಯಜೀವಿಗಳನ್ನು ಒಳಗೊಂಡ ಕಾಡು ಸಮೃದ್ಧತೆ ಸಂಕೇತ. ಈ ವನಸಿರಿಗೂ ಸಮಾಜದಲ್ಲಿ ಕಾಡಿನ ಪರಿವೇ ಇಲ್ಲದೇ ಬದುಕುತ್ತಿರುವವರಿಗೂ ಪರೋಕ್ಷ ಅನುಕೂಲಗಳು ಸಾಕಷ್ಟಿವೆ. ಅದನ್ನು ಕೇಂದ್ರ ಸರಕಾರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಾರೆಸ್ಟ್‌ ಮ್ಯಾನೇಜ್‌ಮೆಂಟ್‌ (ಐಐಎಫ್‌ಎಂ) ಮತ್ತು ಸೆಂಟರ್‌ ಫಾರ್‌ ಎಕಾಲಾಜಿಕಲ್‌ ಸರ್ವಿಸಸ್‌ ಮ್ಯಾನೇಜ್‌ಮೆಂಟ್‌ (ಸಿಇಎಸ್‌ಎಂ) ಅಂಕಿ ಅಂಶಗಳ ಮೂಲಕ ವ್ಯಕ್ತಪಡಿಸಿದೆ. ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ ಈ ಲಾಭಗಳನ್ನು ವಿಶ್ಲೇಷಿಸಲಾಗಿದೆ. ಆನೆ ಸೇರಿದಂತೆ ಇನ್ನಿತರ ಪ್ರಾಣಿಗಳೂ ಕಾಡಿನ ಭಾಗವೇ ಆಗಿರುವುದರಿಂದ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆನೆಗಳನ್ನು ಜೀವ ವೈವಿಧ್ಯತೆಯ ಪೋಷಕ ಎಂದಲೂ ಕರೆಯಲಾಗುತ್ತದೆ. ಬರೀ ಗಾತ್ರವಷ್ಟೇ ಅಲ್ಲದೆ ಕಾಡಿನ ಸಮೃದ್ಧತೆಯಲ್ಲೂ ಇವುಗಳ ಪಾತ್ರ ಹಿರಿದಾಗಿದೆ. ಒಂದು ವಯಸ್ಕ ಕಾಡಾನೆ ನಿತ್ಯ 200-250 ಕೆಜಿಯಷ್ಟು ಆಹಾರವನ್ನು ಸೇವಿಸುತ್ತದೆ. ಈ ಆಹಾರವನ್ನು ಅರಸಿ ಕಾಡಿನಲ್ಲಿ ಅಲೆದಾಡುತ್ತಲೇ ಇರುತ್ತದೆ. ಆ ವೇಳೆ ತಾನರಿಯದೇ ಬೀಜ ಪ್ರಸರಣೆಯಂತಹ ಬಹುದೊಡ್ಡ ಕೆಲಸವನ್ನು ಮಾಡುವ ಇದು ಕಾಡಿನ ರೈತನಂತೆ ಕಾರ್ಯನಿರ್ವಹಣೆ ಮಾಡುತ್ತವೆ. ಸೇವಿಸಿದ ಆಹಾರದಲ್ಲಿ ಶೇ.45ರಷ್ಟು ಜೀರ್ಣಿಸಿ ಉಳಿದಿದ್ದನ್ನು ಲದ್ದಿ ರೂಪದಲ್ಲಿ ಹೊರಹಾಕುತ್ತದೆ. ಅಂತಹ ಲದ್ದಿಯಲ್ಲಿ ನಾರಿನಂಶ ಇರುವುದರಿಂದ ಅದರಿಂದ ಕಾಗದವನ್ನೂ ತಯಾರಿಸಬಹುದು. ಮರದ ನಾರಿನ ತಿರುಳುಗಳು ಲದ್ದಿಯಲ್ಲೂ ಸಿಗುತ್ತವೆ. ಆನೆ ಲದ್ದಿಯಿಂದ ಏನೆಲ್ಲಾ ಉಪಯೋಗವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

* ಲದ್ದಿಯಲ್ಲಿ ಸಿಗುವ ಆಹಾರವನ್ನು ಸಗಣಿ ಜೀರುಂಡೆ, ಪಕ್ಷಿಗಳು, ಮಂಗಗಳೂ ಸೇವಿಸುತ್ತವೆ.

* ಮಣ್ಣಿನ ಪೋಷಕಾಂಶ ಹೆಚ್ಚುತ್ತದೆ. ಲದ್ದಿಯು ಕೆಲವು ಪಾಚಿ, ಶಿಲೀಂದ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ.

* ಮರಗಳ ಪ್ರಭೇದದಲ್ಲೇ ಉತ್ಕೃಷ್ಟವಾದ ಪೈಕಸ್‌ ಪ್ರಭೇದಕ್ಕೆ ಸೇರಿದ ಆಲ, ಅರಳಿ ಮರದ ಕೊಂಬೆ, ಬೀಜ ತಿನ್ನುವುದರಿಂದ ಅವುಗಳ ಬೀಜ ಪ್ರಸರಣಗೊಂಡ ಕಾಡು ಸಮೃದ್ಧವಾಗುತ್ತದೆ.

* ಎಂದೂ ಬೆಲೆ ಕಟ್ಟಲಾಗದ ನೀರು, ಗಾಳಿ, ಮಳೆಯಂತಹ ಸಂಪತ್ತನ್ನು ಉಚಿತವಾಗಿ ಜೀವ ಸಂಕುಲಕ್ಕೆ ನೀಡುವ ಕಾಡಿನ ಪೋಷಣೆಯಲ್ಲೂ ಪ್ರಧಾನ ಪಾತ್ರ.

* ಕಾಫಿ ಪುಡಿ ತಯಾರಿಕೆಯಲ್ಲೂ ಆನೆಯ ಲದ್ದಿಯನ್ನು ಬಳಸಲಾಗುತ್ತದೆ. ಥೈಲ್ಯಾಂಡ್‌ನಲ್ಲಿ ದುಬಾರಿ ಬೆಲೆಯಲ್ಲಿ ಇದರ ಮಾರಾಟವಾಗುತ್ತದೆ.

ಅಸಲಿಗೆ ಮಾನವರಂತೆಯೇ ಆನೆಯೂ ಸಂಘಜೀವಿ. ಕಾಡಾನೆಗಳ ಕೌಟುಂಬಿಕ ಬದುಕು ಮಾತೃ ಪ್ರಧಾನ ವ್ಯವಸ್ಥೆಯಿಂದ ಕೂಡಿದೆ. ಹಿರಿಯ ಹೆಣ್ಣಾನೆಯ ಗುಂಪಿನ ಅಧಿನಾಯಕಿಯಾಗಿರುತ್ತದೆ. ಆಕೆಯ ಸಹೋದರಿ, ಮಕ್ಕಳು ಆ ಕುಟುಂಬದ ಸದಸ್ಯರು. ಹಲವು ಸೋದರ ಸಂಬಂಧಿ ಗುಂಪುಗಳು ಸೇರಿ ಆನೆಯ ವಂಶವಾಗುತ್ತದೆ. ಒಂದು ವಂಶದಲ್ಲಿ 60-90 ಆನೆಗಳಿರುತ್ತವೆ. ಸದಾ ಕಾಲ ಚಲಿಸುವುದೇ ಇದರ ವಿಶಿಷ್ಟ ಗುಣ. ಮರಿಗಳ ಲಾಲನೆ, ಪಾಲನೆ ಮಾಡುವುದು ಚಿಕ್ಕಮ್ಮ ಆನೆಯ ಕೆಲಸವಾಗಿರುತ್ತದೆ. ಗಂಡಾನೆಗಳು ಮಾತೃ ಪ್ರಧಾನ ವ್ಯವಸ್ಥೆ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಸುಮಾರು 10 ವರ್ಷವಾಗುವ ಹೊತ್ತಿಗೆ ಅವುಗಳು ಅಮ್ಮ, ಚಿಕ್ಕಮ್ಮನ ಅಕ್ಕರೆ ಕಳೆದುಕೊಂಡು ಗುಂಪಿನಿಂದ ಹೊರದೂಡಲ್ಪಡುತ್ತವೆ.

ಸದ್ಯ ‘ಏಷ್ಯನ್‌ ಎಲಿಫ್ಯಾಂಟ್‌ ಪಾಪ್ಯುಲೇಶನ್‌ ಸೈಜ್‌ ಆ್ಯಂಡ್‌ ಸ್ಟ್ರಕ್ಚರ್‌ ಎಸ್ಟಿಮೇಟ್ಸ್‌ ಫಾರ್‌ ಕರ್ನಾಟಕ’ದ ವರದಿ ಬಿಡುಗಡೆಯಾಗಿದ್ದು, ಕರುನಾಡಿನಲ್ಲಿ ಕಳೆದ ಐದು ವರ್ಷಗಳಲ್ಲಿ 346 ಆನೆಗಳ ಹೆಚ್ಚಳವಾಗಿದೆ. ಪ್ರಸಕ್ತ ವರ್ಷ 6,395 ಆನೆಗಳಿವೆ.

ಆನೆ ಗಣತಿ ಹೇಗೆ?

‘ಡಂಗ್‌ ಕೌಂಟ್ಸ್‌ (ಲದ್ದಿ ಎಣಿಕೆ)’ ವಿಧಾನದಲ್ಲಿ 2 ಕಿಮೀ. ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ ಆನೆಗಳ ಲದ್ದಿ ಎಣಿಕೆ ಮಾಡಲಾಗುತ್ತದೆ.

‘ವಾಟರ್‌ ಗೋಲ್‌ ಕೌಂಟ್ಸ್‌’: ಆನೆಗಳು ನಿಯಮಿತವಾಗಿ ತಿರುಗಾಡುವ ವಾಟರ್‌ ಹೋಲ್‌ಗಳು ಹಾಗೂ ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ಎಣಿಸಲಾಗುತ್ತದೆ. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಲಿಂಗಾನುಪಾತ ಇತ್ಯಾದಿ ವಿವರಗಳನ್ನು ದಾಖಲಿಸಲಾಗುತ್ತದೆ.

ಕರ್ನಾಟಕದಲ್ಲಿನ ಆನೆಗಳ ವಿವರವನ್ನು ಗಮನಿಸುತ್ತಾ ಬಂದರೆ, 2010ರಲ್ಲಿ 5,740, 2012ರಲ್ಲಿ 6,072, 2017ರಲ್ಲಿ 6,049 ಹಾಗೂ 2023ರಲ್ಲಿ 6,395 ಆನೆಗಳು ರಾಜ್ಯದಲ್ಲಿರುವುದು ಖಚಿತವಾಗಿದೆ.

ಇಲ್ಲಿವೆ ಶೇ.80ರಷ್ಟು ಆನೆ!

ಅದರಲ್ಲೂ ರಾಜ್ಯದ ಬಂಡಿಪುರ (1,116), ನಾಗರಹೊಳೆ (831), ಬಿಳಿಗಿರಿ ರಂಗನ ಬೆಟ್ಟ(619), ಭದ್ರಾ (445), ಮಲೆಮದೇಶ್ವರ (236), ಕಾವೇರಿ ವನ್ಯಜೀವಿ ಧಾಮ (128) ಈ ಅಭಯಾರಣ್ಯಗಳಲ್ಲಿ ಶೇ.80ರಷ್ಟು ಆನೆಗಳಿವೆ. ಇನ್ನುಳಿದವು ಬೇರೆಬೇರೆ ಪ್ರದೇಶಗಳಲ್ಲಿ ಇವೆ.

suddiyaana