ತಿರುಪತಿ ಘಾಟ್​​ ರಸ್ತೆಯಲ್ಲಿ ಹೆಚ್ಚಾಗುತ್ತಿದೆ ಅಪಘಾತ – ಮಹಾ ಶಾಂತಿ ಹೋಮದ ಮೊರೆ ಹೋದ ಟಿಟಿಡಿ

ತಿರುಪತಿ ಘಾಟ್​​ ರಸ್ತೆಯಲ್ಲಿ ಹೆಚ್ಚಾಗುತ್ತಿದೆ ಅಪಘಾತ – ಮಹಾ ಶಾಂತಿ ಹೋಮದ ಮೊರೆ ಹೋದ ಟಿಟಿಡಿ

ವಿಶ್ವದ ಅತಿ ಸಿರಿವಂತ ದೇಗುಲ ಅಂದ್ರೆ ತಿರುಪತಿ ತಿಮ್ಮಪ್ಪನ ಸನ್ನಿಧಿ. ಸಾವಿರಾರು ಕೋಟಿಯ ಒಡೆಯ ತಿಮ್ಮಪ್ಪನ ನೋಡಲು ಭಕ್ತರ ದಂಡೇ ಹರಿದುಬರುತ್ತೆ. ದೇಶ, ವಿದೇಶಗಳಿಂದಲೂ ಜನ ಬರುತ್ತಾರೆ. ಸದಾ ಜನರಿಂದ ತುಂಬಿ ತುಳುಕುವ ತಿರುಪತಿ ದೇಗುಲಕ್ಕೆ ಹೋಗುವವರ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಹೀಗಾಗಿ ತಿರುಪತಿಯಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ.

ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. ಮುಂಗಾರು ಕೂಡ ಆರಂಭವಾಗುತ್ತಿದೆ. ಈ ಹಿನ್ನೆಲೆ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ದಿಢೀರ್‌ ಏರಿಕೆ ಕಂಡಿದೆ. ಪರಿಣಾಮ ತಿರುಮಲದಲ್ಲಿನ ಕಂಪಾರ್ಟ್‌ಮೆಂಟ್‌ಗಳು ಭಕ್ತರಿಂದ ತುಂಬಿದೆ. ಈ ನಡುವೆ ತಿರುಮಲ ಘಾಟ್ ರಸ್ತೆಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಭಕ್ತರಲ್ಲಿ ಆತಂಕ ಎದುರಾಗಿದೆ. ಹೀಗಾಗಿ ಟಿಟಿಡಿ ಅಧಿಕಾರಿಗಳು ದೇವರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಜಮ್ಮುವಿನಲ್ಲೂ ಸಿಗುತ್ತೆ ತಿರುಪತಿ ಬಾಲಾಜಿಯ ದರ್ಶನ – ನೂತನ ದೇವಸ್ಥಾನ ಲೋಕಾರ್ಪಣೆ

ಕಳೆದ ಎರಡು ದಿನಗಳ ಹಿಂದೆ ಎರಡನೇ ಘಾಟ್​​ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಟೆಂಪೋ ಟ್ರಾವೆಲರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ವೇಳೆ ಅದರಲ್ಲಿ ಭಕ್ತರಿರಲಿಲ್ಲ. ತಿರುಪತಿಯಿಂದ ತಿರುಮಲಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದಕ್ಕೂ ಮುನ್ನ ಮೊದಲ ಘಾಟ್ ರಸ್ತೆಯ 28ನೇ ತಿರುವಿನಲ್ಲಿ ಆರ್ ಟಿಸಿ ಎಲೆಕ್ಟ್ರಿಕ್ ಬಸ್ ಪಲ್ಟಿಯಾಗಿತ್ತು. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಭಕ್ತರ ಮನದಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ ಟಿಟಿಡಿ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬುಧವಾರ ತಿರುಮಲ ಘಾಟ್ ರಸ್ತೆಯಲ್ಲಿ ಮಹಾ ಶಾಂತಿ ಹೋಮ ನಡೆಸಿದ್ದಾರೆ. ಈ ಮಹಾ ಶಾಂತಿ ಹೋಮವು ಫಸ್ಟ್ ಡೌನ್ ಘಾಟ್ ರಸ್ತೆಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ 7ನೇ ಮೈಲಿನಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ನಡೆಸಲಾಗಿದೆ.

ತಿರುಮಲ ಘಾಟ್​ ರಸ್ತೆಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಹಾಗೂ ಸಮಸ್ತ ಮನುಕುಲದ ಮತ್ತು ಜಗತ್ತಿನ ಕಲ್ಯಾಣವನ್ನು ಕೋರಿ ಈ ವಿಶೇಷ ಹೋಮವನ್ನು ಟಿಟಿಡಿ ಅಧಿಕಾರಿಗಳು ನಡೆಸಿದ್ದಾರೆ.  ಹೋಮದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ದಂಪತಿ, ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮ ರೆಡ್ಡಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದಾರೆ.

suddiyaana