ಹಿಂದೂ ಸಂಘಟನೆಯಿಂದ ಶೋಭಾ ಯಾತ್ರೆ – ಹರಿಯಾಣದ ನುಹ್‌ನಲ್ಲಿ ಮತ್ತೆ ಸೆಕ್ಷನ್ 144 ಜಾರಿ!
ಹರಿಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ‘ಶೋಭಾ ಯಾತ್ರೆ’ಯ ವೇಳೆ ಕೋಮು ಘರ್ಷಣೆ ನಡೆದು ಮೆರವಣಿಗೆ ಅರ್ಧಕ್ಕೆ ನಿಂತಿತ್ತು. ಅರ್ಧಕ್ಕೆ ನಿಂತಿರುವ ಮೆರವಣಿಗೆಯನ್ನು ಮತ್ತೆ ಮುಂದುವರಿಸಲು ಸರ್ವ ಜಾತಿಯ ಹಿಂದೂ ಮಹಾಪಂಚಾಯತ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಮತ್ತು ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.
‘ಶೋಭಾ ಯಾತ್ರೆ’ಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರೂ ಮೆರವಣಿಗೆ ನಡೆಸುವುದಾಗಿ ಸರ್ವ ಜಾತಿಯ ಹಿಂದೂ ಮಹಾಪಂಚಾಯತ್ ಘೋಷಿಸಿದ ಹಿನ್ನೆಲೆಯಲ್ಲಿ ನುಹ್ ಜಿಲ್ಲೆ ಹಾಗೂ ಇತರ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕಟ್ಟುನಿಟ್ಟಿನ ನಿಗಾ ಇರಿಸಲು ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೈದಿಗಳ ಸಂಖ್ಯೆಯಲ್ಲೂ ಅಮೆರಿಕ ನಂ.1.. ಭಾರತಕ್ಕೆ ಎಷ್ಟನೇ ಸ್ಥಾನ? – ಟಾಪ್ 10 ದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ
ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಹರಿಯಾಣ ಸರ್ಕಾರವು 1,900 ಹರಿಯಾಣ ಪೊಲೀಸ್ ಸಿಬ್ಬಂದಿ ಮತ್ತು 24 ಕಂಪನಿ ಅರೆಸೇನಾ ಪಡೆಗಳನ್ನು ಅಂತರ -ರಾಜ್ಯ ಮತ್ತು ಅಂತರ – ಜಿಲ್ಲಾ ಗಡಿಗಳಲ್ಲಿ ನಿಯೋಜಿಸುವ ಮೂಲಕ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.
ಜುಲೈ 31 ರಂದು ನಡೆದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿದಾಗ ಮುಸ್ಲಿಂ ಬಹುಸಂಖ್ಯಾತ ನುಹ್‌ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.
ಈ ವೇಳೆ ಮಸೀದಿ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಘಟನೆಗಳು ನಡೆದಿದ್ದವು. ಇದಾದ ಬಳಿಕ ಗಲಭೆಯಲ್ಲಿ ಭಾಗಿಯಾಗಿದ್ದವರ ಅಕ್ರಮ ಆಸ್ತಿಗಳನ್ನು ಸ್ಥಳೀಯ ಆಡಳಿತ ನೆಲಸಮಗೊಳಿಸಿತ್ತು. ಬಳಿಕ ಹೈಕೋರ್ಟ್ ಇದಕ್ಕೆ ತಡೆ ನೀಡಿತ್ತು.