ರೈಲಿನಲ್ಲಿ ನಿಮ್ಮಿಷ್ಟದ ಫುಡ್ ಬೇಕಾ? – ಒಂದೇ ಒಂದು ಮೆಸೇಜ್ ಮಾಡಿದ್ರೆ ನಿಮ್ಮ ಆರ್ಡರ್ ರೆಡಿ!

ರೈಲಿನಲ್ಲಿ ಸಂಚಾರ ಮಾಡುವಾಗ ಹಸಿವಾದಾಗ ಅಲ್ಲಿ ಮಾರುತ್ತಿದ್ದ ಆಹಾರವನ್ನಷ್ಟೇ ಖರೀದಿಸಬಹುದಿತ್ತು. ಏನಾದರೂ ಬೇರೆ ತಿನಿಸು ತಿನ್ನಬೇಕು ಅನ್ನಿಸಿದಾಗ ಮುಂದಿನ ನಿಲ್ದಾಣ ಬರುವವರೆಗೆ ಕಾಯಬೇಕಿತ್ತು. ಈ ವೇಳೆ ಆನ್ ಲೈನ್ ಫುಡ್ ಡೆಲಿವರಿ ಇದ್ರೆ ಚೆನ್ನಾಗಿರುತ್ತಿತ್ತು. ನಮಗೆ ಬೇಕಾದ ಆಹಾರ ಆರ್ಡರ್ ಮಾಡಬಹುದಿತ್ತು ಅಂತಾ ಹಲವರು ಚಿಂತೆ ಮಾಡುತ್ತಿರುತ್ತಾರೆ. ಇನ್ನುಮುಂದೆ ಇಂತಹ ಚಿಂತೆ ಬೇಡ. ವಾಟ್ಸ್ ಆ್ಯಪ್ ನಲ್ಲಿ ಒಂದು ಮೆಸೇಜ್ ಹಾಕಿದರೆ ಸಾಕು ಕೆಲವೇ ಕ್ಷಣಗಳಲ್ಲಿ ನೀವು ಆರ್ಡರ್ ಮಾಡಿದ ಆಹಾರ ನಿಮ್ಮ ಮುಂದಿರುತ್ತದೆ.
ಹೌದು, ಭಾರತೀಯ ರೈಲ್ವೆಯ ಪಿಎಸ್ಯು, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ( ಐಆರ್ಸಿಟಿಸಿ ) ತನ್ನ ಇ-ಕ್ಯಾಟರಿಂಗ್ ಸೇವೆಗಳನ್ನು ಹೆಚ್ಚು ಗ್ರಾಹಕ-ಕೇಂದ್ರಿತಗೊಳಿಸಲು ವಾಟ್ಸಾಪ್ ಮೂಲಕ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳನ್ನು ಸೋಮವಾರ ಪರಿಚಯಿಸಿದೆ. ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಆಹಾರ ಬೇಕೆಂದಾಗ ಇದರ ಮೂಲಕ ಆರ್ಡರ್ ಮಾಡಬಹುದು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ವಿಮಾನದಲ್ಲಿ ಉಚಿತ ಪ್ರಯಾಣ..! – ಸಿಎಂ ಬಂಪರ್ ಆಫರ್
IRCTC ಈಗಾಗಲೇ ತನ್ನ ವೆಬ್ಸೈಟ್ www.catering.irctc.co.in ಮತ್ತು ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ . ಈ ಉದ್ದೇಶಕ್ಕಾಗಿ ರೈಲ್ವೆಯು Business WhatsApp ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. ಆಯ್ದ ರೈಲುಗಳು ಮತ್ತು ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಗಳಿಗಾಗಿ ವಾಟ್ಸ್ ಆ್ಯಪ್ ಸಂವಹನವನ್ನು ಅಳವಡಿಸಲಾಗಿದೆ ಮತ್ತು ಗ್ರಾಹಕರ ಪ್ರತಿಕ್ರಿಯೆ ಮತ್ತು ಸಲಹೆಗಳ ಆಧಾರದ ಮೇಲೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಅಲ್ಲದೇ ರೈಲ್ವೇ ಪ್ರಯಾಣಿಕರು ಪ್ರಯಾಣ ಮಾಡುವಾಗ ವಾಟ್ಸ್ ಆ್ಯಪ್ ಮೂಲಕ ಆಹಾರವನ್ನು ಹೇಗೆ ಆರ್ಡರ್ ಮಾಡಬಹುದು ಎಂಬುವುದನ್ನು ಕೂಡ ವಿವರಿಸಿದೆ.
ಟಿಕೆಟ್ ಕಾಯ್ದಿರಿಸುವಾಗ, www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು Business WhatsApp ಸಂಖ್ಯೆಯಿಂದ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ.
ವೆಬ್ಸೈಟ್ಗೆ ಬಂದ ನಂತರ ಗ್ರಾಹಕರು ನೇರವಾಗಿ ವೆಬ್ಸೈಟ್ನಿಂದ ನಿಲ್ದಾಣಗಳಲ್ಲಿ ಲಭ್ಯವಿರುವ ತಮ್ಮ ಆಯ್ಕೆಯ ರೆಸ್ಟೋರೆಂಟ್ಗಳಿಂದ ಊಟವನ್ನು ಬುಕ್ ಮಾಡಬಹುದು.
ಬಳಿಕ WhatsApp ಸಂಖ್ಯೆಯನ್ನು ದ್ವಿಮುಖ ಸಂವಹನ ವೇದಿಕೆಯಾಗಿ ಸಕ್ರಿಯಗೊಳಿಸಲಾಗುತ್ತದೆ. ಎಐ ಪವರ್ ಚಾಟ್ಬಾಟ್ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳ ಎಲ್ಲಾ ಪ್ರಶ್ನೆಗಳನ್ನು ನಿರ್ವಹಿಸುತ್ತದೆ. ಐಆರ್ಸಿಟಿಸಿಯ ಇ-ಕೇಟರಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ದಿನಕ್ಕೆ ಸುಮಾರು 50,000 ಊಟಗಳನ್ನು ನೀಡಲಾಗುತ್ತಿದೆ ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರು ತಮ್ಮ ಪಿಎನ್ಆರ್ ಸಂಖ್ಯೆಗಳ ಮೂಲಕ ವಾಟ್ಸ್ ಆ್ಯಪ್-ಆಧಾರಿತ ಸ್ವಯಂ-ಸೇವಾ ಆಹಾರ ವಿತರಣಾ ವೇದಿಕೆಯನ್ನು ಆಹಾರ ಆರ್ಡರ್ಗಳನ್ನು ಆಯ್ಕೆ ಮಾಡಲು ಮತ್ತು ನೈಜ-ಸಮಯದ ಆರ್ಡರ್ ಟ್ರ್ಯಾಕಿಂಗ್, ಪ್ರತಿಕ್ರಿಯೆಗಳನ್ನು ನೇರವಾಗಿ ತಮ್ಮ ಸೀಟ್ಗೆ ತರಿಸಿಕೊಳ್ಳಬಹುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.