ವಿಂಬಲ್ಡನ್ ಅಂಗಳದಲ್ಲಿ ಕಮರಿದ ಜೊಕೋ ಕನಸು – ಸರ್ಬಿಯಾ ಟೆನ್ನಿಸ್ ದೊರೆಯನ್ನ ಸೋಲಿಸಿ ಫೈನಲ್‌ಗೇರಿದ ಯಾನಿಕ್ ಸಿನ್ನರ್
ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಅಲ್ಕರಾಜ್ ಜೊತೆ ಯಾನಿಕ್ ಸಿನ್ನರ್ ಕಾದಾಟ

ವಿಂಬಲ್ಡನ್ ಅಂಗಳದಲ್ಲಿ ರಾಜನಂತೆ ಮೆರೆಯುತ್ತಿದ್ದ ನೊವಾಕ್ ಜೊಕೊವಿಚ್ ಅವರನ್ನ ಇಟಲಿಯನ್ ತಾರೆ ಯಾನಿಕ್ ಸಿನ್ನರ್ ಸೋಲಿಸಿದ್ದಾರೆ. ಇದರೊಂದಿಗೆ 25ನೇ ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ನೊವಾಕ್ ಜೊಕೊವಿಚ್ ಆಸೆ ಕಮರಿದೆ.
ಇದನ್ನೂ ಓದಿ:ಬುಮ್ರಾ ರೀ ಎಂಟ್ರಿ.. ಪ್ರಸಿದ್ಧ್ ಕೃಷ್ಣ ಡ್ರಾಪ್ – ಚಾನ್ಸ್ ಕೊಟ್ರೂ ಸದ್ದು ಮಾಡದವರಿಗೆ ಬೆಂಚ್ ಫಿಕ್ಸ್!
ಸೆಂಟರ್ ಕೋರ್ಟ್ನಲ್ಲಿ ನಡೆದ ವಿಂಬಲ್ಡನ್ 2025ರ ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯನ್ ತಾರೆ ಯಾನಿಕ್ ಸಿನ್ನರ್ ಹಾಗೂ ಸರ್ಬಿಯನ್ ಟೆನಿಸ್ ದೊರೆ ನೊವಾಕ್ ಜೊಕೊವಿಚ್ ಮುಖಾಮುಖಿಯಾಗಿದ್ದರು. ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಈ ಪಂದ್ಯವನ್ನು ಯಾನಿಕ್ ಏಕಪಕ್ಷೀಯವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆಲ್ಲುವ ಮೂಲಕ ಯಾನಿಕ್ ಸಿನ್ನರ್ ಆರಂಭದಲ್ಲೇ ಜೊಕೊವಿಚ್ ಮೇಲೆ ಒತ್ತಡ ಹೇರಿದರು. ಇದಾಗ್ಯೂ ದ್ವಿತೀಯ ಸೆಟ್ನಲ್ಲಿ ಸರ್ಬಿಯನ್ ತಾರೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಕೂಡ ಜೊಕೊವಿಚ್ ವಿರುದ್ಧ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಮರೆದ ಸಿನ್ನರ್ 6-3 ಅಂತರದಿಂದ ದ್ವಿತೀಯ ಸೆಟ್ ಅನ್ನು ಗೆದ್ದರು. ಇನ್ನು ಮೂರನೇ ಸೆಟ್ನಲ್ಲಿ ನೊವಾಕ್ ಜೊಕೊವಿಚ್ ಕಂಬ್ಯಾಕ್ ಪ್ರಯತ್ನ ನಡೆಸಿದರೂ, ಜಾನಿಕ್ ಸಿನ್ನರ್ ಅವರ ಪ್ರಬಲ ಹೊಡೆತಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು. ಈ ಮೂಲಕ ಮೂರನೇ ಸೆಟ್ ಅನ್ನು ಕೂಡ 6-4 ಅಂತರದಿಂದ ಗೆದ್ದು ಯಾನಿಕ್ ಸಿನ್ನರ್ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿಯ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಪಾಲಾಗುತ್ತಿತ್ತು. ಏಕೆಂದರೆ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆಯನ್ನು ಜೊಕೊವಿಚ್ ಮಹಿಳಾ ತಾರೆ ಮಾರ್ಗರೇಟ್ ಕೋರ್ಟ್ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟು 24 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ದಾಖಲೆಯನ್ನು ಮುರಿಯುವ ಗುರಿಯೊಂದಿಗೆ ಈ ಬಾರಿ ವಿಂಬಲ್ಡನ್ ಅಂಗಳಕ್ಕೆ ಕಾಲಿಟ್ಟಿದ್ದ ನೊವಾಕ್ ಜೊಕೊವಿಚ್ ಅವರ ಕನಸು ಸೆಮಿಫೈನಲ್ ಸೋಲಿನೊಂದಿಗೆ ಕೊನೆಗೊಂಡಿದೆ.
2023ರ ಯುಎಸ್ ಓಪನ್ ಗೆಲ್ಲುವ ಮೂಲಕ 24 ಗ್ರ್ಯಾನ್ ಸ್ಲಾಂ ಪ್ರಶಸ್ತಿ ಪೂರೈಸಿದ್ದ ಜೋಕೋವಿಚ್‌ಗೆ ಆ ಬಳಿಕ ಮತ್ತೊಂದು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 2024ರ ವಿಂಬಲ್ಡನ್ ಫೈನಲ್‌ನಲ್ಲಿ ಎಡವಿದ್ದ ಜೋಕೋ, ಈ ಬಾರಿ ಸೆಮೀಸ್‌ನಲ್ಲೇ ಮುಗ್ಗರಿಸಿದ್ದಾರೆ. ಇನ್ನು, ಜೋಕೋವಿಚ್ ಈ ವರ್ಷ ಆಡಿರುವ ಮೂರೂ ಗ್ರ್ಯಾನ್ ಸ್ಲಾಂಗಳಲ್ಲಿ ಸೆಮೀಸ್‌ನಲ್ಲೇ ಸೋತಿದ್ದಾರೆ.
ಈ ಬಾರಿಯ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯವು ಜುಲೈ 13 ರಂದು ಸೆಂಟರ್ ಕೋರ್ಟ್ ಅಂಗಳದಲ್ಲಿ ನಡೆಯಲಿದೆ.

ನೋಡಿರಿ

