20ಕ್ಕೂ ಹೆಚ್ಚು ಜನರ ಮೇಲೆ ದಾಳಿ – ಮೋಸ್ಟ್ ವಾಂಟೆಡ್ ʼಮಂಗʼ ಅರೆಸ್ಟ್!
ಕೋತಿ ಹಿಡಿದುಕೊಟ್ಟವರಿಗೆ 21,000 ರೂ. ಘೋಷಿಸಿದ್ದ ಸ್ಥಳೀಯ ಆಡಳಿತ
ಭೋಪಾಲ್: ಯಾವುದಾದರೂ ಪ್ರಕರಣದ ಆರೋಪಿ ತಪ್ಪಿಸಿಕೊಂಡಿದ್ದರೆ ಅವರನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಣೆ ಮಾಡುತ್ತಾರೆ. ಬಳಿಕ ಆರೋಪಿಯ ಸುಳಿವು ನೀಡಿದವರಿಗೆ, ಹಿಡಿದುಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತಾರೆ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಇಲ್ಲಿ ಯಾವುದೇ ವ್ಯಕ್ತಿಯ ಪತ್ತೆಗಾಗಿ ಬಹುಮಾನ ಘೋಷಿಸಿಲ್ಲ. ಬದಲಾಗಿ ಮೋಸ್ಟ್ ವಾಂಟೆಡ್ ಕೋತಿಯನ್ನು ಹಿಡಿದುಕೊಟ್ಟವರಿಗಾಗಿ ಬಹುಮಾನ ಘೋಷಿಸಲಾಗಿದೆ. ಇದೀಗ ಆ ರೌಡಿ ಕೋತಿ ಕೊನೆಗೂ ಸೆರೆಯಾಗಿದೆ.
ಮಧ್ಯಪ್ರದೇಶ ರಾಜ್‌ಗರ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕೋತಿಯೊಂದು ರೌಡಿಯಂತೆ ವರ್ತಿಸುತ್ತಿತ್ತು. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿತ್ತು. ರೌಡಿ ಕೋತಿಯ ದಾಳಿಗೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸಿಕ್ಕಿಬಿದ್ದಿದೆ. ರೌಡಿಯಂತೆ ವರ್ತಿಸುತ್ತಿದ್ದ ಕೋತಿಯನ್ನು ಜನರ ನೆರವಿನಿಂದ ಅರಣ್ಯ ಸಿಬ್ಬಂದಿ ಜೊತೆಯಾಗಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!
ಆಶ್ಚರ್ಯ ಏನೆಂದರೆ ಈ ಕೋತಿಯನ್ನು ಹಿಡಿದುಕೊಟ್ಟವರಿಗೆ 21,000 ರೂ. ಬಹುಮಾನವನ್ನು ಕೂಡ ಘೋಷಿಸಲಾಗಿತ್ತು. 21,000 ರೂ. ಅನ್ನು ಕೋತಿಗೆ ಘೋಷಿಸಲಾಗಿತ್ತು ಎಂದರೆ ಆ ಕೋತಿಯ ಉಗ್ರಾವತಾರ ಹೇಗಿತ್ತು ಎಂಬುವುದನ್ನು ನಾವು ಊಹಿಸಬಹುದು. ಈ ಕೋತಿಯ ಉಪಟಳ ಎಷ್ಟು ಹೆಚ್ಚಾಗಿತ್ತು ಎಂದರೆ ಕೋತಿಯನ್ನು ಕಾಯಲು ಜನರು ತಮ್ಮ ಮನೆ ಮಹಡಿಗಳ ಮೇಲೆ ಬಂದೂಕು ಹಿಡಿದು ನಿಲ್ಲುವಂತಾಗಿತ್ತು.
ಹೀಗಾಗಿ ಕೋತಿಯನ್ನು ಸೆರೆಹಿಡಿಯಲು ಮಾಡಿದ ಪ್ರಯತ್ನಗಳು ವಿಫಲವಾದ ಬಳಿಕ ಅಧಿಕಾರಿಗಳು ಕೋತಿಯನ್ನು ಹಿಡಿದುಕೊಟ್ಟವರಿಗೆ 21,000 ರೂ. ನಗದು ಬಹುಮಾನವನ್ನು ಘೋಷಿಸಿದರು. ಜೊತೆಗೆ ವಿಶೇಷ ರಕ್ಷಣಾ ತಂಡವನ್ನು ಕೂಡ ಕೋತಿಯ ಸೆರೆಗೆ ಆಹ್ವಾನಿಸಿದ್ದರು. ನಾಲ್ಕು ಗಂಟೆಯ ಸತತ ಕಾರ್ಯಾಚರಣೆ ಬಳಿಕ ಕೋತಿಯನ್ನು ಸೆರೆಹಿಡಿಯಲಾಗಿದೆ.
ಬುಧವಾರ ಸಂಜೆ ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡವು ಸ್ಥಳೀಯ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸೇರಿ ಉಗ್ರರೂಪ ತಾಳಿದ್ದ ಕೋತಿಯನ್ನು ಸೆರೆ ಹಿಡಿದಿದ್ದಾರೆ. ಮೊದಲು ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ, ನಂತರ ಕೋಪಗೊಂಡಿದ್ದ ಕೋತಿಗೆ ಅರವಳಿಕೆ ಮದ್ದು ನೀಡಿ ಶಾಂತಗೊಳಿಸಿದ್ದಾರೆ. ಬಳಿಕ ಆ ಕೋತಿಯನ್ನು ಪಂಜರದಲ್ಲಿ ಇರಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಬಲೆಯ ಮೂಲಕ ಪ್ರಾಣಿ ರಕ್ಷಣಾ ವಾಹನಕ್ಕೆ ಸ್ಥಳಾಂತರಿಸುವಾಗ ಅಲ್ಲಿ ಸೇರಿದ್ದ ಜನರ ಗುಂಪು ಜೈ ಶ್ರೀ ರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ಕೋತಿಗೆ ಪ್ರಜ್ಞೆ ಬಂದಿದೆ.
ಕಳೆದ ಹದಿನೈದು ದಿನಗಳ ಹಿಂದೆ ಈ ಕೋತಿ 20 ಜನರ ಮೇಲೆ ದಾಳಿ ನಡೆಸಿತ್ತು. ಈ ಪೈಕಿ ಎಂಟು ಮಕ್ಕಳು ಸೇರಿದ್ದರು. ಮನೆಯ ಛಾವಣಿ ಹಾಗೂ ಕಿಟಕಿಯ ಸರಳುಗಳ ಮೇಲೆ ಕೂರುತ್ತಿದ್ದ ಕೋತಿ ದಿಢೀರ್ ಎಂದು ಜನರ ಮೇಲೆ ದಾಳಿ ಮಾಡುತ್ತಿತ್ತು. ಕೋತಿ ದಾಳಿಗೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆರೆಹಿಡಿದ ಕೋತಿಯನ್ನು ಜನರಿಂದ ದೂರವಿರುವ ದಟ್ಟವಾದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮಗೆ ಕೋತಿಯನ್ನು ಹಿಡಿಯಲು ಆಗಲಿಲ್ಲ. ಆದ್ದರಿಂದ ನಾವು ಜಿಲ್ಲಾಧಿಕಾರಿಗಳ ಸಹಾಯ ತೆಗೆದುಕೊಂಡು ಉಜ್ಜಯಿನಿಯ ಅರಣ್ಯ ಇಲಾಖೆಯ ರಕ್ಷಣಾ ತಂಡ ಕರೆಸಿದ್ದೆವು. ಅವರಿಗೆ ಪಾಲಿಕೆ ಸಿಬ್ಬಂದಿ ಮತ್ತು ಸ್ಥಳೀಯರು ಸಹಾಯ ಮಾಡಿದರು. ಹೀಗಿದ್ದರೂ ಕೂಡ ಕೋತಿಯನ್ನು ಹಿಡಿಯಲು ನಾಲ್ಕು ಗಂಟೆ ಸಮಯ ಬೇಕಾಯಿತು. ಕೋತಿಯನ್ನು ಹಿಡಿದವರಿಗೆ 21,000 ರೂಪಾಯಿ ಬಹುಮಾನವನ್ನು ಘೋಷಿಸಿದ್ದೇವು. ಈಗ ಅದನ್ನು ಪ್ರಾಣಿ ರಕ್ಷಣಾ ತಂಡಕ್ಕೆ ನೀಡುತ್ತೇವೆ ಎಂದು ರಾಜ್‌ಗಢ ಪುರಸಭೆ ಅಧ್ಯಕ್ಷ ವಿನೋದ್ ಸಾಹು ಹೇಳಿದ್ದಾರೆ.