ಸೌಜನ್ಯಗಾಗಿ NOTAಗೆ VOTE – ಪಕ್ಷಗಳಿಗೆ ಬುದ್ಧಿ ಕಲಿಸಿದ್ರಾ ಜನ?
BJP - ಕೈಗೆ ಶಾಕ್.. ಸಿಗುತ್ತಾ ನ್ಯಾಯ?

ಸೌಜನ್ಯಗಾಗಿ NOTAಗೆ VOTE – ಪಕ್ಷಗಳಿಗೆ ಬುದ್ಧಿ ಕಲಿಸಿದ್ರಾ ಜನ?BJP - ಕೈಗೆ ಶಾಕ್.. ಸಿಗುತ್ತಾ ನ್ಯಾಯ?

ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಸರ್ಕಾರ ರಚನೆಗೆ ಸಿದ್ಧತೆ ನಡೆದಿದೆ. ಕರ್ನಾಟಕದಲ್ಲೂ ಕೂಡ ಕೆಲವು ಕಡೆ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದೆ. ಕೆಲವ್ರು ಮೊದಲ ಅಗ್ನಿಪರೀಕ್ಷೆಯಲ್ಲೇ ಪಾಸ್ ಆಗಿದ್ರೆ ಇನ್ನೂ ಕೆಲವ್ರು ಸೋಲು ಕಂಡಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆದ್ದಿದ್ರೆ ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಮತ್ತೊಂದೆಡೆ ಜೆಡಿಎಸ್ 2 ಸೀಟ್​ಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದ್ರಿಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮತದಾನಕ್ಕೂ ಮುನ್ನವೇ ತೀವ್ರ ಸಂಚಲನ ಸೃಷ್ಟಿಸಿದ್ದ ಕ್ಷೇತ್ರ ಅಂದ್ರೆ ಅದು ದಕ್ಷಿಣ ಕನ್ನಡ. ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಸಾವಿನ ನ್ಯಾಯಕ್ಕೆ ಒತ್ತಾಯಿಸಿ ನಡೆದಿದ್ದ ನೋಟ ಅಭಿಯಾನ ಸಖತ್ತಾಗೇ ವರ್ಕೌಟ್ ಆಗಿದೆ. ಹಾಗಾದ್ರೆ ನೋಟಾಗೆ ಬಿದ್ದ ಮತಗಳೆಷ್ಟು? ಇದ್ರಿಂದ ರವಾನೆಯಾಗಿರೋ ಸಂದೇಶ ಏನು? ಸೌಜನ್ಯಗೆ ನ್ಯಾಯ ಸಿಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೇಂದ್ರದ ಖಾತೆ ಮೇಲೆ ಹೆಚ್ಡಿಕೆ ಕಣ್ಣು – ಮಂತ್ರಿಯಾಗೋದು ಬಹುತೇಕ ಫಿಕ್ಸ್!

ಲೋಕಸಭಾ ಚುನಾವಣೆ ಘೋಷಣೆಯಿಂದ ಹಿಡಿದು ಮತದಾನವರೆಗೂ ದಕ್ಷಿಣ ಕನ್ನಡ ಕ್ಷೇತ್ರ ಸಾಕಷ್ಟು ಸದ್ದು ಮಾಡಿತ್ತು. ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಸಾವಿನ ನ್ಯಾಯಕ್ಕೆ ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆದಿತ್ತು. ದಶಕದಿಂದಲೂ ಕೂಡ ಹೋರಾಟ ನಡೆಯುತ್ತಿದ್ರೂ ಕೂಡ ನ್ಯಾಯ ಸಿಕ್ಕಿಲ್ಲ. ಯಾವುದೇ ರಾಜಕೀಯ ನಾಯಕರು ಬೆಂಬಲಕ್ಕೆ ನಿಂತಿಲ್ಲ. ಹೀಗಾಗಿ ಈ ಬಾರಿ ನಿಮ್ಮ ಮತಗಳನ್ನ ನೋಟಾಗೆ ಹಾಕುವ ಮೂಲಕ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದು ಬೇಡ ಎಂದು ಕ್ಯಾಂಪೇನ್ ಮಾಡಲಾಗಿತ್ತು. ವಾರಗಟ್ಟಲೆ ನಡೆದಿದ್ದ ಈ ಅಭಿಯಾನ ಲೋಕಸಭಾ ಚುನಾವಣೆ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ಮತದಾರರು ನೋಟಾಗೆ ವೋಟ್ ಹಾಕಿದ್ದಾರೆ.
ನೋಟಾಗೆ ಬಿದ್ದ ಮತಗಳೆಷ್ಟು?

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವುದರೊಂದಿಗೆ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಜಯಬೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಸೋಲು ಕಂಡಿದ್ದಾರೆ. ಬ್ರಿಜೇಶ್ ಚೌಟಗೆ 7,64,132 ವೋಟ್ ಬಿದ್ದಿದ್ರೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್​ 6,14,928 ಮತ ಪಡೆದಿದ್ದಾರೆ. ಅಚ್ಚರಿ ಅಂದ್ರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3ನೇ ಅತೀ ಹೆಚ್ಚು ಮತಗಳು ನೋಟಾಗೆ ಬಿದ್ದಿವೆ. ಈ ಮೂಲಕ ನೋಟ ಮೂರನೇ ಸ್ಥಾನದಲ್ಲಿದೆ. ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ದೊಡ್ಡ ಮಟ್ಟದ ನೋಟ ಮತದಾನವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ 23,576 ಮತಗಳು ದೊರೆತಿದ್ದು, ರಾಜ್ಯದಲ್ಲೇ ಇದು ಗರಿಷ್ಠವಾಗಿದೆ. ಇನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಕೂಡ ನೋಟಾಕ್ಕೆ 11,191 ಮತಗಳು ನೊಟಾಗೆ ಹಾಕಲಾಗಿದೆ.ಈ ಕ್ಷೇತ್ರ ದ್ವಿತೀಯ ಸ್ಥಾನದಲ್ಲಿದೆ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಂತರದ ಸ್ಥಾನ ನೋಟಾಕ್ಕೆ ಹಾಕಿರೋದು ಅಚ್ಚರಿ ಮೂಡಿಸಿದೆ. ಬೆಳ್ತಂಗಡಿ ತಾಲ್ಲೂಕಿನ ಸೌಜನ್ಯ ಮೇಲಿನ ಲೈಂಗಿಕ ದೌರ್ಜನ್ಯ ಹಾಗೇ ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಚುನಾವಣೆಗೆ ಒಂದು ತಿಂಗಳು ಪೂರ್ವದಿಂದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧೆಡೆ ನೋಟಾ ಅಭಿಯಾನದ ಸಭೆಗಳು ನಡೆದಿದ್ದವು. ಮತದಾನದ ದಿನವೂ ರಾಜಕೀಯ ಪಕ್ಷಗಳ ಟೆಂಟ್‌ ಜೊತೆಗೆ ತಲೆಎತ್ತಿದ್ದ ‘ನೋಟಾ ಅಭಿಯಾನ’ದ ಟೆಂಟ್ ಗಮನ ಸೆಳೆದಿತ್ತು. ಹೀಗಾಗಿ ಅಂತಿಮವಾಗಿ ನೋಟಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಚಲಾವಣೆಯಾಗಿವೆ.

ಈ ಬಾರಿಯ ಚುನಾವಣೆಯಲ್ಲಿ ಬರೀ ಕರಾವಳಿ ಮಾತ್ರವಲ್ಲದೆ ರಾಜ್ಯಾದ್ಯಂತ ನೋಟಾಗೆ ಮತ ಚಲಾಯಿಸಲು ಹೋರಾಟಗಾರರು ಕರೆ ನೀಡಿದ್ದರು. ಆಡಳಿತ ವ್ಯವಸ್ಥೆಯಲ್ಲಿದ್ದವರು ನಮ್ಮ ಹೋರಾಟಕ್ಕೆ ಕಿವಿಕೊಡುತ್ತಿಲ್ಲ.  ರಾಜಕೀಯ ಪಕ್ಷಗಳ ಯಾರೇ ಅಧಿಕಾರಕ್ಕೆ ಬಂದರೂ ನಮಗೆ ನ್ಯಾಯ ಕೊಡಿಸುವ ನಿರೀಕ್ಷೆಯಿಲ್ಲ. ಹಾಗಾಗಿ ನಾವು ಈ ಬಾರಿ ರಾಜ್ಯಾದ್ಯಂತ ನೋಟಾ ಅಭಿಯಾನಕ್ಕೆ ಕರೆ ಕೊಡುತ್ತಿದ್ದೇವೆ ಎಂದಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ನೋಟಾ ಚಳವಳಿಯ ಅಭಿಯಾನ ಜೋರಾಗೇ ನಡೆದಿತ್ತು. ಆದ್ರೆ ನೋಟಾಗೆ ಮತ ಬಿದ್ದ ಮಾತ್ರಕ್ಕೆ ನ್ಯಾಯ ಸಿಕ್ಕಿದಂತಾಗಲ್ಲ. ಅಷ್ಟಕ್ಕೂ 2013ರಲ್ಲಿ ಭಾರತದಲ್ಲಿ ನೋಟಾ ಮತವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಅನಂತರದ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಇವಿಎಂ ಮೆಷಿನ್ ಗಳಲ್ಲಿಯೇ ನೋಟಾ ಬಟನ್ ಕಡ್ಡಾಯ ಮಾಡಲಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತು ರಾಜಕೀಯ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ಪ್ರೇರಣೆ ನೀಡಲು ನೋಟಾ ಮತ ಚಲಾವಣೆಗೆ ತರಲಾಗಿತ್ತು. ಆದರೆ ನೋಟಾ ಮತಗಳಿಗೆ ಮೌಲ್ಯ ಇರುವುದಿಲ್ಲ. ನೋಟಾ ಪರವಾಗಿ ಎಷ್ಟು ಮತ ಬಿದ್ದರೂ ಅವನ್ನು ಅಸಿಂಧು ಎಂದೇ ಪರಿಗಣಿಸಲಾಗುತ್ತದೆ. ಅಂದ್ರೆ 100 ಮತಗಳು ಇರುವಲ್ಲಿ ನೋಟಾಗೆ 99 ಮತಗಳು ಬಿದ್ದರೂ ಅವೆಲ್ಲ ಅಸಿಂಧು ಅಷ್ಟೇ. ಅಭ್ಯರ್ಥಿಗೆ ಒಂದು ಮತ ಬಿದ್ದರೂ ಆತನೇ ಆಯ್ಕೆಯಾಗುತ್ತಾನೆ. ಹೀಗಾಗಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಇಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳು ಬಿದ್ದಿದ್ರೂ ಅದು ಅಸಿಂಧು ಅಷ್ಟೇ. ಆದ್ರೆ 13 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಿರೋ ಹೋರಾಟಗಾರರಿಗೆ ನಿಜಕ್ಕೂ ಹ್ಯಾಟ್ಸ್​ಆಫ್ ಹೇಳಲೇಬೇಕು. ಹೆಣ್ಣುಮಗಳನ್ನ ಮುಕ್ಕಿದ ದುಷ್ಟರಿಗೆ ಶಿಕ್ಷೆಯಾಗಲಿ ಅಂತಾ ಹೋರಾಡುತ್ತಲೇ ಇದ್ದಾರೆ. ವ್ಯವಸ್ಥೆಯ ಗಮನ ಸೆಳೆಯುತ್ತಲೇ ಇದ್ದಾರೆ. ಆದ್ರೆ ನ್ಯಾಯ ಅನ್ನೋದು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.

Shwetha M