ಸೌಜನ್ಯಗಾಗಿ ನೋಟಾ ಚಳವಳಿ! – ದಕ್ಷಿಣ ಕನ್ನಡದಲ್ಲಿ ದೊಡ್ಡ ಕ್ರಾಂತಿಯಾಗುತ್ತಾ..?  

ಸೌಜನ್ಯಗಾಗಿ ನೋಟಾ ಚಳವಳಿ! – ದಕ್ಷಿಣ ಕನ್ನಡದಲ್ಲಿ ದೊಡ್ಡ ಕ್ರಾಂತಿಯಾಗುತ್ತಾ..?  

ಲೋಕಸಭಾ ಚುನಾವಣೆ ಅಖಾಡ ರಂಗೇರಿದ್ದು, ಈಗಾಗ್ಲೇ ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳನ್ನ ಘೋಷಣೆ ಮಾಡಿಯಾಗಿದೆ. ಅಬ್ಬರದ ಪ್ರಚಾರದ ಭರಾಟೆಯೂ ಶುರುವಾಗಿದೆ. ಆದ್ರೆ ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ನೋಟಾ ಅಭಿಯಾನ ಆರಂಭವಾಗಿದೆ. ಟಿಕೆಟ್ ವಿಚಾರದಲ್ಲೇ ಹಲ್​ಚಲ್ ಸೃಷ್ಟಿಸಿದ್ದ ಕ್ಷೇತ್ರದಲ್ಲಿ ಮತದಾರರು ಅಭ್ಯರ್ಥಿಗಳ ಪರ ಮತ ಚಲಾಯಿಸಿದೇ ಇರಲು ನಿರ್ಧರಿಸಿದ್ದಾರೆ. ಈ ಬಾರಿ ನಾವು ಯಾವ ಕ್ಯಾಂಡಿಡೇಟ್​ಗೂ ವೋಟ್ ಮಾಡಲ್ಲ. ನಮ್ಮ ಮತ ‘ನೋಟಾ’ಗೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥಾದ್ದೊಂದು ಕೂಗ ಜೋರಾಗಲು ಕಾರಣ ದಶಕದ ಹಿಂದೆ ನಡೆದಿದ್ದ ಸೌಜನ್ಯ ಮರ್ಡರ್ ಮಿಸ್ಟ್ರಿ. ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೊಸದೊಂದು ಹೋರಾಟಕ್ಕೆ ಕ್ಷೇತ್ರ ಸಾಕ್ಷಿಯಾಗ್ತಿದೆ. ನಮ್ಮ ಮತ NOTA ಗಾಗಿ ಅಂದ್ರೆ None of the above ಎನ್ನುವ ನಿರ್ಧಾರಕ್ಕೆ ಕರಾವಳಿಯ ಜನ ಬಂದಿದ್ದಾರೆ. ಯಾವ ಅಭ್ಯರ್ಥಿಗಳು ಕೂಡಾ ತನಗೆ ಸೂಕ್ತ ಅಲ್ಲ ಅನ್ನುವ ಸಂದರ್ಭದಲ್ಲಿ ನೋಟಾ ಮತ ಚಲಾಯಿಸಲಾಗುತ್ತದೆ. ಹಾಗಾದ್ರೆ ಈ ಬಾರಿ ದಕ್ಷಿಣ ಕನ್ನಡದಲ್ಲಿ ದೊಡ್ಡ ಕ್ರಾಂತಿಯಾಗುತ್ತಾ..? ಸೌಜನ್ಯ ಸಾವು ಪ್ರಕರಣದ ಜಿಲ್ಲೆಯ ಚುನಾವಣೆ ದಿಕ್ಕನ್ನೇ ಬದಲಿಸುತ್ತಾ..? ಹೋರಾಟಗಾರರು ಮಾಡ್ತಿರೋ ಡಿಮ್ಯಾಂಡ್ ಏನು..? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಡ ಕುಟುಂಬಗಳ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ – ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ!

ದಶಕದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ದೌರ್ಜನ್ಯ ಹಾಗೂ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹೋರಾಟಗಳು ನಡೆಯುತ್ತಲೇ ಇವೆ. ಈಗಾಗ್ಲೇ ರಾಜ್ಯಾದ್ಯಂತ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ಪ್ರಕರಣದ ಅಸಲಿ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಲಾಗಿದೆ. ಆದ್ರೆ ಕೊಲೆ ಕೇಸ್​ ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಸೌಜನ್ಯಗೆ ನ್ಯಾಯ ಕೊಡಿಸಲು ಆಗದ ನಮಗೆ ಈ ಸಲ ಯಾವ ರಾಜಕೀಯ ಪಕ್ಷವೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಸೌಜನ್ಯಗಾಗಿ ನೋಟಾ ಚಳವಳಿ! 

12 ವರ್ಷಗಳಿಂದ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಪ್ರತಿಭಟನೆಗಳನ್ನ ನಡೆಸಿಕೊಂಡು ಬರಲಾಗ್ತಿದೆ. ಆದ್ರೆ ಸೌಜನ್ಯ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷ ಯಾವುದೂ ಇಲ್ಲದೆ ಹೋದರೂ ಸರಿ, ನಾವು ದೇಶದಲ್ಲಿ ಒಂದು ವಿಶಿಷ್ಟವಾದಂತಹ ಹೋರಾಟವನ್ನು ಕೈಗೊಳ್ಳುತ್ತಿದ್ದೇವೆ. ಈ ಸಲ ಲಕ್ಷಾಂತರ ಮತಗಳನ್ನು ನೋಟಾಗೆ ಹಾಕಿಸುವ ಮೂಲಕ ದೇಶದ ಸಂಸತ್ತನ್ನು, ದೇಶದ ಹಲವಾರು ರಾಜ್ಯಗಳ ಹೋರಾಟಗಾರರನ್ನು, ಸುಪ್ರೀಂಕೋರ್ಟ್ ನ್ನು ಮತ್ತು ವಿದೇಶಗಳ ಸರ್ಕಾರಗಳನ್ನು ಕೂಡಾ ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಸೌಜನ್ಯಾಳಿಗಾಗಿ ನೋಟ ಅಭಿಯಾನ ದೊಡ್ಡದಾಗಿ ಶುರುವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 7,74,284 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಿಥುನ್ ರೈ  ವಿರುದ್ಧ 2,74,621 ಮತಗಳ ಅಂತರದಿಂದ ಗೆದ್ದಿದ್ದರು. ಮತ್ತೊಂದೆಡೆ ಇಲ್ಲಿಯತನಕ ಸೌಜನ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡವರ ಸಂಖ್ಯೆ ಏಳು ಲಕ್ಷಕ್ಕೂ ಹೆಚ್ಚಿದೆ ಅನ್ನೋ ಮಾಹಿತಿಯಿದೆ. ಈ ಅಂಕಿ ಅಂಶವನ್ನು ನೋಡಿದರೆ, ಅಭ್ಯರ್ಥಿ ಪಡೆಯುವ ಮತಗಳಿಗಿಂತಲೂ ನೋಟಾ ಮತಗಳೇ ಅಧಿಕವಾಗುವ ಸಂಭವ ಇದೆ. ಇದೇ ಕಾರಣಕ್ಕೆ ನೋಟಾ ಚಳವಳಿ ಆರಂಭವಾಗಿದ್ದು, ತೀವ್ರ ಸಂಚಲನ ಸೃಷ್ಟಿಸಿದೆ. ‘ಸೌಜನ್ಯಳಿಗಾಗಿ ನೋಟಾ’ ಚಳವಳಿ ಮಂಗಳೂರು ಲೋಕಸಭಾ ಕ್ಷೇತ್ರದ ಒಟ್ಟಾರೆ ಚಿತ್ರಣವನ್ನೇ ಬದಲಿಸುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡದಲ್ಲಿ ಮತದಾನಕ್ಕೂ ಮುನ್ನ ಒಂದು ವಿಷಯವಂತೂ ನಿರ್ಧಾರವಾಗಲೇಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಿಸುವ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿ ಸೌಜನ್ಯ ವಿಚಾರದಲ್ಲಿ ಮೊದಲು ತಮ್ಮ ನಿರ್ಧಾರವನ್ನು ಪ್ರಕಟಿಸಲೇ ಬೇಕು ಎಂಬುದು ಹೋರಾಟಗಾರರ ಒತ್ತಾಯ. ಚುನಾವಣೆಯಲ್ಲಿ ಗೆದ್ದ ಬಳಿಕ ಸೌಜನ್ಯ ವಿಚಾರದಲ್ಲಿ ನಿಲುವೇನು..? ಅನ್ನುವುದನ್ನು ಜನರೆದುರು ಸ್ಪಷ್ಟವಾಗಿ ತಿಳಿಸಬೇಕಿದೆ. ಸೌಜನ್ಯಳಿಗೆ ನ್ಯಾಯ ಓದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾದರೆ ಮಾತ್ರ ಓಟು ಹಾಕುವುದಾಗಿ ಜನ ಹೇಳ್ತಿದ್ದಾರೆ. ಆದ್ರೆ ವಿಷ್ಯ ಅಂದ್ರೆ ದಕ್ಷಿಣ ಕನ್ನಡದಲ್ಲಿ ಈ ಬಾರಿ ಅಭ್ಯರ್ಥಿಗಳಿಬ್ಬರೂ ರಾಜಕೀಯಕ್ಕೆ ಹೊಸಬರು.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ! 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಆಯ್ಕೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಅತೀ ದೊಡ್ಡ ಚುನಾವಣೆಯಾಗಿದ್ದರೂ  ಕೂಡ ಈ ಇಬ್ಬರು ಅಭ್ಯರ್ಥಿಗಳು ಗ್ರಾಪಂ, ತಾಪಂ, ಜಿಪಂ, ಕಾರ್ಪೋರೇಷನ್, ವಿಧಾನಸಭೆ, ವಿಧಾನಪರಿಷತ್ ಹೀಗೆ ಯಾವುದೇ ಚುನಾವಣೆಗೂ ಈವರೆಗೆ ಸ್ಪರ್ಧಿಸಿಲ್ಲ. ಇದೇ ಮೊದಲ ಚುನಾವಣೆ ಆಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ಉದಾಹರಣೆ ಇದೆ. ಆದರೆ, ಎರಡು ಪಕ್ಷಗಳ ಅಭ್ಯರ್ಥಿಗಳು ಏಕಕಾಲದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದು ಮೊದಲ ಬಾರಿಯಾಗಿದೆ.

ಒಂದ್ಕಡೆ ಚುನಾವಣೆಗೆ ಎರಡೂ ಪಕ್ಷಗಳ ಅಭ್ಯರ್ಥಿಗಳು ಮೊದಲ ಬಾರಿಗೆ ಧುಮುಕಿದ್ದು ಜನಮನ ಗೆಲ್ಲೋ ಸವಾಲಿದೆ. ಇದ್ರ ನಡುವೆ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಚಳವಳಿ ಆರಂಭವಾಗಿದೆ. ಹೀಗಾಗಿ ಈ ಅಭಿಯಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಹೇಗೆ ನಿಭಾಯಿಸುತ್ತಾರೆ, ಏನು ಭರವಸೆ ಕೊಡ್ತಾರೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M