ಸೌಜನ್ಯ ಹೋರಾಟಕ್ಕೆ ಸ್ಟೂಡೆಂಟ್ಸ್ ಬಲ – ನಾಯಕರಿಗೂ ತಟ್ಟುತ್ತಾ NOTA ಬಿಸಿ? 
ಚುನಾವಣೆ ದಿಕ್ಕು ಬದಲಿಸುತ್ತಾ ಚಳವಳಿ? 

ಸೌಜನ್ಯ ಹೋರಾಟಕ್ಕೆ ಸ್ಟೂಡೆಂಟ್ಸ್ ಬಲ – ನಾಯಕರಿಗೂ ತಟ್ಟುತ್ತಾ NOTA ಬಿಸಿ? ಚುನಾವಣೆ ದಿಕ್ಕು ಬದಲಿಸುತ್ತಾ ಚಳವಳಿ? 

ದಕ್ಷಿಣ ಕನ್ನಡ ಜಿಲ್ಲೆಯ ದಿಕ್ಕು ದಿಕ್ಕಿನಲ್ಲೂ ನೋಟಾ ಅಭಿಯಾನವೇ ಸದ್ದು ಮಾಡ್ತಿದೆ. ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಬೀದಿ ಬೀದಿಯಲ್ಲೂ ಹೋರಾಟ ಭುಗಿಲೆದ್ದಿದೆ. ರಸ್ತೆಯುದ್ದಕ್ಕೂ ಱಲಿಗಳು ನಡೀತಿದ್ರೆ ಮನೆ ಮನೆಗೂ ಕರಪತ್ರ ಹಂಚಿಕೆ ಮಾಡಲಾಗ್ತಿದೆ. ಕಾಲೇಜುಗಳಲ್ಲೂ ನ್ಯಾಯದ ಕೂಗು ಎದ್ದಿದ್ದು ವಿದ್ಯಾರ್ಥಿಗಳೂ ಕೂಡ ನೋಟಾ ಕ್ಯಾಂಪೇನ್ಗೆ ಕೈ ಜೋಡಿಸಿದ್ದಾರೆ. ಸೌಜನ್ಯಾ ಹೋರಾಟ ಸಮಿತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯಿಂದ ನಡೆಯುತ್ತಿರೋ ಈ ನೋಟಾ ಅಭಿಯಾನ ತೀವ್ರ ಸ್ವರೂಪ ಪಡೆದಿದ್ದು, ಸೋಮವಾರ ಉಜಿರೆಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಸೌಜನ್ಯ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ವೋಟ್ ಫಾರ್ ನೋಟಾ ಎಂದು ಜನರಲ್ಲಿ ಮನವಿ ಮಾಡಿದ್ರು. ಅಷ್ಟಕ್ಕೂ ನೋಟಾ ಕಿಚ್ಚು ಹೆಚ್ಚಿದ್ದೇಗೆ..? ವಿದ್ಯಾರ್ಥಿಗಳೂ ಕೂಡ ಬೆಂಬಲ ಘೋಷಿಸಿದ್ದೇಕೆ..? ಹೋರಾಟಗಾರರ ಉದ್ದೇಶ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಕಮಲ ಪಾಳಯಕ್ಕೆ ಬಿಗ್‌ ಶಾಕ್‌ – ಬಿಜೆಪಿ ಎಂಎಲ್​ಸಿ ಕೆಪಿ ನಂಜುಂಡಿ ರಾಜೀನಾಮೆ

ಹಿಂದುತ್ವದ ಪ್ರಯೋಗ ಶಾಲೆ, ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಸಿಕೊಳ್ಳೋ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನೋಟಾ ಅಭಿಯಾನ ಜೋರಾಗಿದೆ. ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯ ಹತ್ಯೆ ಪ್ರಕರಣದ ಅಸಲಿ ಹಂತಕರ ಬಂಧನಕ್ಕೆ ಒತ್ತಾಯಿಸಿ ಅಭಿಯಾನ ನಡೆಸಲಾಗುತ್ತಿದೆ. ಸೌಜನ್ಯ ಸಾವಿನ ನ್ಯಾಯಕ್ಕೆ ಧನಿಗೂಡಿಸದ ರಾಜಕಾರಣಿಗಳ ವಿರುದ್ಧ ಸಿಡಿದೆದ್ದಿರೋ ಹೋರಾಟಗಾರರು ನೋಟಾ ಚಳವಳಿಗೆ ಕರೆ ಕೊಟ್ಟಿದ್ದಾರೆ. ಕಾಲೇಜುಗಳಲ್ಲೂ  ನೋಟಾಗೆ ಮತ ಹಾಕುವಂತೆ ವಿದ್ಯಾರ್ಥಿಗಳಿಗೆ ಕರಪತ್ರಗಳನ್ನ ನೀಡಲಾಗುತ್ತಿದೆ.

ಸೌಜನ್ಯ ಸಾವಿಗೆ ನ್ಯಾಯ ಬೇಕು! 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಜನ್ಯ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸೋಮವಾರ ವೋಟ್ ಫಾರ್ ನೋಟಾ ಎಂದು ರ್ಯಾಲಿ ನಡೆಸಲಾಗಿದೆ. ಉಜಿರೆಯಲ್ಲಿ ಬೈಕ್ ಱಲಿ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಗೆ ಮತ ಹಾಕುವಂತೆ ಮನವಿ ಮಾಡಲಾಯ್ತು. ಸ್ವಯಂ ಪ್ರೇರಿತರಾಗಿ ಸೇರಿದ್ದ ಸಾವಿರಾರು ಜನ ಮೆರವಣಿಗೆಯಲ್ಲಿ ಭಾಗಿಯಾಗಿದ್ರು. ಸೌಜನ್ಯ ನಮ್ಮ ಮನೆಯ ಮಗಳು. ಅವಳ ನ್ಯಾಯಕ್ಕೋಸ್ಕರ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಸೌಜನ್ಯ ಸಾವಿಗೆ ನ್ಯಾಯ ಕೊಡಿಸೋದು ರಾಜಕೀಯ ಪಕ್ಷದವ್ರ ಕರ್ತವ್ಯ. ಆದ್ರೆ ಯಾವ ನಾಯಕರೂ ಕೂಡ ಅದನ್ನ ಮಾಡ್ಲಿಲ್ಲ. ನಿಜವಾದ ಆರೋಪಿಗಳನ್ನ ರಾಜಕೀಯ ನಾಯಕರೇ ಪೋಷಣೆ ಮಾಡುತ್ತಿದ್ದಾರೆ. ಹೀಗಾಗಿ ನೋಟಾ ಅನ್ನೋದು ಜನಸಾಮಾನ್ಯನ ಆಕ್ರೋಶದ ಧ್ವನಿಯಾಗಲಿದೆ. ಚುನಾವಣಾ ಆಯೋಗವೇ ನಮಗೆ ನೋಟಾ ಅಭಿಯಾನಕ್ಕೆ ಬರವಣಿಗೆ ಮೂಲಕವೇ ಅನುಮತಿ ನೀಡಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಜೀಪು, ಪೊಲೀಸರೂ ಕೂಡ ಜೊತೆಯಲ್ಲಿದ್ದಾರೆ. ಚುನಾವಣಾ ಆಯೋಗದ ಯಾವುದೇ ನಿಯಮಗಳು ಉಲ್ಲಂಘನೆಯಾಗದಂತೆ ರ್ಯಾಲಿ ಮಾಡುತ್ತಿದ್ದೇವೆ. ಸೌಜನ್ಯ ಪರ ಱಲಿಗೆ ಯಾರೊಬ್ಬರಿಗೂ ಹಣ ಕೊಟ್ಟು ಕರೆಸಿಕೊಂಡಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ತುಂಬಾ ಜನ ನೀವೇ ಎಲೆಕ್ಷನ್ಗೆ ನಿಂತು ಗೆದ್ದು ನ್ಯಾಯ ಕೊಡಿಸಬಹುದು ಎಂದು ತುಂಬಾ ಜನ ಕೇಳ್ತಾರೆ. ಆದ್ರೆ ನಮಗೆ ಶಾಸಕರು, ಸಂಸದರು ಅಥವಾ ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಇಡೀ ದೇಶದ ಗಮನ ಸೆಳೆಯಬೇಕು. ನಮಗೆ ಬೇಕಾಗಿರೋದು ಬರೀ ನ್ಯಾಯ ಅಷ್ಟೇ. 2 ಲಕ್ಷಕ್ಕಿಂತಲೂ ಹೆಚ್ಚು ಮತ ನೋಟಾಗೆ ಬರುತ್ತೆ. 26ನೇ ತಾರೀಕಿನವರೆಗೂ ಮನೆ ಮನೆಗೂ ತೆರಳಿ ಪ್ರಚಾರ ಮಾಡೋದಾಗಿ ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಹೀಗೆ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಒಂದ್ಕಡೆ ಕೂಗು ಹೆಚ್ಚಾಗ್ತಿದ್ರೆ ಮತ್ತೊಂದೆಡೆ  ಧರ್ಮಸ್ಥಳದ ಸೌಜನ್ಯ ಹತ್ಯಾ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಡಾಕ್ಟರ್ ನಿಧನರಾಗಿದ್ದಾರೆ.  ಡಾಕ್ಟರ್ ಆದಂ ಮತ್ತು ಡಾಕ್ಟರ್ ರಶ್ಮಿ ಅವರ ಮೇಲೆ ಒಟ್ಟಾರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ತಿರುಚಿದ ಆರೋಪ ಕೇಳಿ ಬಂದಿತ್ತು.

ಸೌಜನ್ಯ ಪ್ರಕರಣದ ವೈದ್ಯ ನಿಧನ!  

ಸೌಜನ್ಯ ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದ ಡಾಕ್ಟರ್ ಆದಮ್ ಅವರು ನಿಧನ ಹೊಂದಿದ್ದಾರೆ. ಡಾಕ್ಟರ್ ಆದಮ್ ಅವರಿಗೆ ಬ್ರೈನ್ ಹೆವರೇಜ್ ಆಗಿದ್ದು ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಡಾಕ್ಟರ್ ಅದಮ್ ಉಸ್ಮಾನ್ ರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಹುಕಾಲ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಡಾಕ್ಟರ್ ಆದಂ ಮತ್ತು ಡಾಕ್ಟರ್ ರಶ್ಮಿ ಅವರ ಮೇಲೆ ಒಟ್ಟಾರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ತಿರುಚಿದ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಬೆಳಕಿಲ್ಲದೆ ಕತ್ತಲಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ನೆರವಾಗಿದ್ದಾರೆ ಎನ್ನುವ ಗಂಭೀರ ಆರೋಪ ಅವರ ಮೇಲಿತ್ತು.  ಕೋರ್ಟ್ ಕೂಡ ಯಾವುದೇ ರೀತಿಯಲ್ಲಿ ಪೋಸ್ಟ್ ಮಾರ್ಟಂ ಸ್ಯಾಂಪಲ್ಸ್ ಅನ್ನು ವೈದ್ಯಕೀಯ ತಂಡ ಸಂಗ್ರಹಿಸಿಲ್ಲ ಎಂದು ದೂರಿತ್ತು.

ಒಟ್ನಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸೌಜನ್ಯ ಪ್ರಕರಣ ಮತ್ತೆ ಜೋರಾಗ್ತಿದೆ. ನೋಟಾ ಅಭಿಯಾನ ಮನೆ ಮನೆಗೂ ತಲುಪುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಿಗಿಂತ ನೋಟಾ ಅಭಿಯಾನಗೇ ಹೆಚ್ಚಾಗ್ತಿದ್ದು ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

Shwetha M

Leave a Reply

Your email address will not be published. Required fields are marked *