ಸೌಜನ್ಯಗೆ ನ್ಯಾಯ ಕೊಡಿಸದ ನಾಯಕರಿಗೆ ಪಾಠ ಕಲಿಸುತ್ತಾ NOTA ಅಭಿಯಾನ?

ಸೌಜನ್ಯಗೆ ನ್ಯಾಯ ಕೊಡಿಸದ ನಾಯಕರಿಗೆ ಪಾಠ ಕಲಿಸುತ್ತಾ NOTA ಅಭಿಯಾನ?

ಹಿಂದುತ್ವದ ನೆಲೆ, ಬಿಜೆಪಿಯ ಭದ್ರಕೋಟೆ ಅಂತಾನೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳಿವೆ. ಯಾಕಂದ್ರೆ ನೋಟಾ ಅಭಿಯಾನ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ದಶಕಗಳಿಂದಲೂ ನಡೆಯುತ್ತಿರುವ ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ನೂತನ ಹೋರಾಟದ ಕಹಳೆ ಮೊಳಗಿಸಿದ್ದಾರೆ. ಸೌಜನ್ಯ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೋರಾಟಕ್ಕೆ ಬೆಂಬಲ ನೀಡದ ರಾಜಕಾರಣಿಗಳ ವಿರುದ್ಧ NOTA ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ. ನೋಟಾ ಚಳವಳಿಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ದೇ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಧ್ವನಿ ಎತ್ತಿರುವ 7 ಲಕ್ಷಕ್ಕೂ ಅಧಿಕ ಮಂದಿ ಈ ಸಲ ನೋಟ ವೋಟಿಗೆ ಮುದ್ರೆ ಒತ್ತಲಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಸಣ್ಣದಾಗಿ ಶುರುವಾಗಿದ್ದ ಈ ಅಭಿಯಾನ ಕ್ಷೇತ್ರಾದ್ಯಂತ ಬಿರುಗಾಳಿ ಎಬ್ಬಿಸಿದೆ.

ಇದನ್ನೂ ಓದಿ: ಸುತ್ತೂರು ಮಠಕ್ಕೆ ರೋಬೋ ಆನೆ ‘ಶಿವ’ ಕೊಡುಗೆ ಐಂದ್ರಿತಾ ರೇ, ದಿಗಂತ್‌ ದಂಪತಿ

2012 ರಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಸೌಜನ್ಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೊದಲಿಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ಈ ಪ್ರಕರಣದಲ್ಲಿ ಕೆಲವು ಪ್ರಮುಖ ವ್ಯಕ್ತಿಗಳು ಭಾಗಿಯಾಗಿದ್ದಾರೆಂಬ ಒತ್ತಡದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರಿಗೆ ವಹಿಸಲಾಗಿತ್ತು. ಸಿಐಡಿ ಪೊಲೀಸರು ಸಮಗ್ರ ತನಿಖೆ ನಡೆಸಿ ಸಂತೋಷ್‌ ರಾವ್‌ ಎಂಬ ಆರೋಪಿಯನ್ನು ಬಂಧಿಸಿದ್ದರು.  ಆದ್ರೆ ಸಂತೋಷ್ ವಿರುದ್ಧ ಯಾವುದೇ ಸಮರ್ಪಕ ಸಾಕ್ಷ್ಯಗಳಿಲ್ಲ. ಸಂತೋಷ್ ರಾವ್ ಅಪರಾಧಿ ಅಂತಾ ಸಾಬೀತುಪಡಿಸೋಕೆ ಪ್ರಾಸಿಕ್ಯೂಷನ್ಗೆ ಸಾಧ್ಯವಾಗಿಲ್ಲ. ಹೀಗಾಗಿ ಸಂತೋಷ್ ಈ ಪ್ರಕರಣದಲ್ಲಿ ನಿರಪರಾಧಿ ಅಂತಾ ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. 2023ರ ಜುಲೈ 16ರಂದು ಸಂತೋಷ್ ರಾವ್ನನ್ನ ಸಿಬಿಐ ವಿಶೇಷ ನ್ಯಾಯಾಲಯ ಕೇಸ್ನಿಂದ ಖುಲಾಸೆಗೊಳಿಸಿತ್ತು. ಸುಮಾರು 12 ವರ್ಷಗಳ ಬಳಿಕ ಸಂತೋಷ್ ರಾವ್, ತನ್ನ ವಿರುದ್ದ‌ದ ಆರೋಪಗಳಿಂದ ದೋಷಮುಕ್ತನಾಗಿ ಹೊರ ಬಂದಿದ್ದ. ಅಲ್ಲಿಂದಲೇ ಹತ್ಯೆ ಕೇಸ್​ಗೆ ಮರುಜೀವ ಸಿಕ್ಕಿತ್ತು.

ಸೌಜನ್ಯ ಪರ ಹೋರಾಟದ ಕಿಚ್ಚು! 

ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರೋ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಾಜಕೀಯ ನಾಯಕರುಗಳ ವಿರುದ್ಧ ಕಿಡಿ ಕಾರಿದ್ದಾರೆ. ಅನ್ನ ನೀರು ಬಿಟ್ಟು ನಿರಂತರ ಪಾದಯಾತ್ರೆಗಳನ್ನ ಮಾಡಿ ಇಲ್ಲ ಸಲ್ಲದ ಕೇಸ್ ಗಳನ್ನೆಲ್ಲ ಮೈಮೇಲೆ ಹಾಕಿಕೊಂಡು ಹೋರಾಟ ಮಾಡುತ್ತಿದ್ದೇವೆ. ಆದರೆ ನಾವು ಗೆಲ್ಲಿಸಿ ಕಳಿಸಿದ ಯಾವುದೇ ರಾಜಕೀಯ ವ್ಯಕ್ತಿಗಳು ನಮಗೆ ಬೆಂಬಲ ನೀಡಿಲ್ಲ. ಕಣ್ಣಲ್ಲಿ ಕಂಡ ಸತ್ಯ ಅದು. ಅಣ್ಣಪ್ಪ ಸ್ವಾಮಿ ನೆಲೆಸಿರುವ ನ್ಯಾಯ ದೇಗುಲದಲ್ಲಿ ನ್ಯಾಯ ಸಿಗಲಿಲ್ಲ ಅಂತ ಹೇಳಿದ್ರೆ ಇವರು ಇನ್ನೆಷ್ಟು ಪ್ರಭಾವಿಗಳು ಇರಬೇಕು. ಅದಕ್ಕಾಗಿ ಈ ಬಾರಿ ಒಂದು ಒಳ್ಳೆಯ ಅವಕಾಶವನ್ನು ದೇವರೇ ಕಲ್ಪಿಸಿದ್ದಾನೆ, ಅದೇ NOTA. ನಾವು ಈ ಸಲ ಯಾವ ಅಭ್ಯರ್ಥಿಗೂ ಮತ ನೀಡುವುದಿಲ್ಲ. ನೋಟವೇ ಈ ಸಲದ ನಮ್ಮ ಅಭ್ಯರ್ಥಿ ಎನ್ನುವ ಮೂಲಕ ಅಭಿಯಾನದ ಸಂದೇಶ ರವಾನಿಸಿದ್ದಾರೆ. ಅದ್ರಲ್ಲೂ ಹೋರಾಟಗಾರರ ಮೇನ್ ಟಾರ್ಗೆಟ್ ಬಿಜೆಪಿಯೇ ಆಗಿದೆ. ಹೀಗಾಗಿ ಬಿಜೆಪಿಗೆ ಪಾಠ ಕಳಿಸಲೇಬೇಕೆಂದು ಸೌಜನ್ಯ ಹೋರಾಟದಲ್ಲಿ ಆಕ್ಟಿವ್ ಆಗಿ ಭಾಗವಹಿಸಿದ್ದ ಏಳು ಲಕ್ಷ ಮತಗಳು ಈ ಸಲ ತುಂಬಾ ನಿರ್ಣಾಯಕವಾಗಿವೆ., ಒಂದು ವೇಳೆ ಅದರಲ್ಲಿ ಕೇವಲ 20% ಮತಗಳು ನೋಟಾಗೆ ಬಿದ್ದರೂ ಮಂಗಳೂರು ಲೋಕಸಭಾ ಕ್ಷೇತ್ರ ಸುಲಭವಾಗಿ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ.

12 ವರ್ಷಗಳ ಹಿಂದಿನ ಹತ್ಯೆ ಕೇಸ್​ ಈಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಕಾರಣವೂ ಇದೆ. ಆರೋಪಿ ಸಂತೋಷ್ ರಾವ್ ಹೊರ ಬಂದ್ಮೇಲೆ ನಿಜವಾದ ಆರೋಪಿಗಳು ಯಾರು ಅನ್ನೋ ಚರ್ಚೆ ಶುರುವಾಗಿತ್ತು. ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯ ತಾಯಿ ಕುಸುಮಾವತಿ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನ ನಡೆಸಲಾಗಿತ್ತು. ಅಸಲಿ ಹಂತಕರು ಯಾರು ಅನ್ನೋದನ್ನ ಪತ್ತೆ ಹಚ್ಚುವಂತೆ ಸಾಲು ಸಾಲು ಧರಣಿಗಳನ್ನ ನಡೆಸಿದ್ರು. ಆದ್ರೆ ಪ್ರಯೋಜನ ಮಾತ್ರ ಶೂನ್ಯ. ಇದೇ ಕಾರಣಕ್ಕೆ ಈಗ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಲಕ್ಷಾಂತರ ಮಂದಿ ಚುನಾವಣೆಯಲ್ಲಿ ನೋಟಾ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಿದೆ.

ಚೌಟ Vs ಪದ್ಮರಾಜ್! 

1991 ರ ಲೋಕಸಭಾ ಚುನಾವಣೆಯ ನಂತರ ಇಲ್ಲಿ ಬಿಜೆಪಿ ಅಜೇಯವಾಗಿ ಉಳಿದಿರುವ ಕಾರಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಮೂರು ಬಾರಿ ಸಂಸದರಾಗಿದ್ದ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹೊಸ ಮುಖ ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ವಕೀಲರಾದ ಆರ್.ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ. ಪ್ರಭಾವಿ ಬಂಟ ಸಮುದಾಯದಿಂದ ಬಂದ ಕ್ಯಾಪ್ಟನ್ ಚೌಟ ಅವರು ಸೇನೆಯಿಂದ ನಿವೃತ್ತರಾದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ ದೊಂದಿಗೆ ಗುರುತಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ನ ಪದ್ಮರಾಜ್ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

ಸದ್ಯ ರಾಜಕೀಯ ಪಕ್ಷಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ನೋಟಾ ಅಭಿಯಾನ ನಡೆಸಲಾಗುತ್ತದೆ ಎಂದು ಸಮಿತಿಯ ಮುಖಂಡ ಗಿರೀಶ್ ಮಟ್ಟನ್ನನವರ್ ತಿಳಿಸಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನೋಟಾ ಮತದಾನದ ಬಗ್ಗೆ ಪೋಸ್ಟ್ ಗಳು ವೈರಲ್ ಆಗುತ್ತಿದ್ದು ಭಾರಿ ಜನಬೆಂಬಲ ಸಿಕ್ತಾ ಇದೆ. ನೆಟ್ಟಿಗರ ಈ ಬೆಂಬಲ ಕರಾವಳಿಯಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ನಲ್ಲಿ ಸಾಮಾನ್ಯ ಜನರ ಆಗ್ರಹ ಇರೋದು ಒಂದೇ, ನಿಜವಾದ ಹಂತಕರಿಗೆ ಶಿಕ್ಷೆಯಾಗಬೇಕು ಎನ್ನುವುದು.. ಇದಕ್ಕಾಗಿಯೇ ಸೌಜನ್ಯಳ ಪರವಾಗಿ ನ್ಯಾಯ ಕೇಳುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ನೋಟ ಅಭಿಯಾನ ತಾರಕಕ್ಕೇರಿದೆ.

Shwetha M