ಸೌಜನ್ಯಗಾಗಿ NOTA ಯಾಕೆ? – ಏನಿವರ ಲೆಕ್ಕ? ನ್ಯಾಯ ಸಿಗುತ್ತಾ?

ಸೌಜನ್ಯಗಾಗಿ NOTA ಯಾಕೆ? – ಏನಿವರ ಲೆಕ್ಕ? ನ್ಯಾಯ ಸಿಗುತ್ತಾ?

ಸೌಜನ್ಯ.. ಇದೊಂದು ಹೆಸರೇ ಈಗ ಕರಾವಳಿ ಜಿಲ್ಲೆಗಳಲ್ಲಿ ದಿನಕಳೆದಂತೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ.. ಇದಕ್ಕೆ ಕಾರಣ ಈ ಹೆಣ್ಣುಮಗಳ ಮೇಲೆ ನಡೆದ ಭೀಕರ ಕ್ರೌರ್ಯ ಅಷ್ಟೇ ಅಲ್ಲ.. ಅದಾದ ನಂತರ ನ್ಯಾಯ ಸಿಗದ ವ್ಯವಸ್ಥೆಯ ಬಗ್ಗೆ ಜನರಲ್ಲಿರುವ ಆಕ್ರೋಶ.. ಸೌಜನ್ಯ ಇದೇ ಕಾರಣಕ್ಕಾಗಿ 12 ವರ್ಷಗಳ ನಂತರವೂ ಕರಾವಳಿ ಮಂದಿಯ ಎದೆಯೊಳಗೆ ನ್ಯಾಯ ಕೇಳುವ ದೀಪವಾಗಿದ್ದಾಳೆ.. ಇಷ್ಟಕ್ಕೂ ಸೌಜನ್ಯ ಪ್ರಕರಣಕ್ಕೂ ಲೋಕಸಭೆ ಚುನಾವಣೆ ವೇಳೆ ನಡೆಯುತ್ತಿರುವ NOTA ಅಭಿಯಾನಕ್ಕೂ ಸಂಬಂಧವೇನು? ನೋಟಾಗೆ ವೋಟು ಹಾಕಿದ್ರೆ ಸೌಜನ್ಯಗೆ ನ್ಯಾಯ ಸಿಗುತ್ತಾ?

ಇದನ್ನೂ ಓದಿ:ಸೌಜನ್ಯ ಹೋರಾಟಕ್ಕೆ ಸ್ಟೂಡೆಂಟ್ಸ್ ಬಲ – ನಾಯಕರಿಗೂ ತಟ್ಟುತ್ತಾ NOTA ಬಿಸಿ? 

ಸೌಜನ್ಯ ಪ್ರಕರಣ ನಡೆದು ಭರ್ತಿ 12 ವರ್ಷ ತುಂಬುತ್ತಾ ಬಂದಿದೆ.. ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಹುಡುಗಿಯನ್ನು ಕತ್ತಲು ಕವಿಯುವುದಕ್ಕೂ ಮೊದಲೇ ಹೊತ್ತೊಯ್ದ ಕಾಮ ಕ್ರಿಮಿಗಳು ಸಾಮಾನ್ಯ ಮನುಷ್ಯರು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ತಿಂದು ಮುಗಿಸಿದ್ದರು.. ಆಕೆಯ ಮೇಲೆ ನಡೆದ ಬರ್ಭರ ಕೃತ್ಯವನ್ನು ದಶಕ ಕಳೆದರೂ ಕರಾವಳಿಯ ಮಂದಿ ಮರೆತಿಲ್ಲ.. ಹೀಗೆ ಮರೆಯದೇ ಇರಲು ಕಾರಣ ಸೌಜನ್ಯ ಕುಟುಂಬದವರು ದಿಟ್ಟವಾಗಿ ನಡೆಸುತ್ತಾ ಬಂದಿರುವ ಹೋರಾಟ.. ಅವರ ಬೆನ್ನಿಗೆ ನಿಂತವರು ಮಹೇಶ್‌ ಶೆಟ್ಟಿ ತಿಮರೋಡಿ.. ಹಿಂದುತ್ವದ ಪ್ರಬಲ ಪ್ರತಿಪಾದಕ ಮಹೇಶ್‌ ಶೆಟ್ಟಿ ತಿಮರೋಡಿ, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎನ್ನುವ ಹೋರಾಟದ ನೇತೃತ್ವ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ವಿಶೇಷವಾಗಿ ಕರಾವಳಿಯ ಉದ್ದಗಲದಲ್ಲಿ ದೊಡ್ಡ ಮಟ್ಟದ ಹೋರಾಟಗಳು ನಡೆದಿವೆ.. ಪ್ರಕರಣದ ಬಗ್ಗೆ ಬೆಳ್ತಂಗಡಿ ಪೊಲೀಸರಿಂದ ತನಿಖೆ ಆರಂಭವಾಗಿ ಅದು ಸಿಐಡಿ ಮೂಲಕ ಸಾಗಿ ಕಡೆಗೆ ಸಿಬಿಐ ಮೂಲಕವೂ ತನಿಖೆ ನಡೆದಿದೆ.. ಹಾಗಿದ್ದರೂ ಕಡೆಗೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಕಡೆಯಲ್ಲಿ Further, This is a fit case to place before acquittal committee for initiating needful action against the erring officials

(ಫರ್ದರ್‌, ದಿಸ್‌ ಈಸ್‌ ಎ ಫಿಟ್‌ ಕೇಸ್‌ ಟು ಪ್ಲೇಸ್‌ ಬಿಫೋರ್‌ ಅಕ್ವಿಟಲ್‌ ಕಮಿಟಿ ಫಾರ್ ಇನಿಷಿಯೇಟಿಂಗ್‌ ನೀಡ್‌ಫುಲ್‌ ಆ್ಯಕ್ಷನ್‌ ಅಗೈನ್ಸ್ಟ್‌ ದ ಎರ್ರಿಂಗ್‌ ಅಫೀಷಿಯಲ್ಸ್‌)

ಎಂದು ಹೇಳಿದ್ದರು.. ಇದು ತನಿಖೆ ಯಾರಿಂದಲೇ ನಡೆದರೂ ಅಧಿಕಾರಿಗಳು ಈ ಪ್ರಕರಣದಲ್ಲಿ ತಪ್ಪೆಸಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತ್ತು. ಆರೋಪಿಯಾಗಿದ್ದ ಸಂತೋಷ್‌ ರಾವ್‌ ವಿರುದ್ಧ ಮಾಡಿದ ಅಪರಾಧಗಳು ಸಾಬೀತಾಗಲಿಲ್ಲ.. ಆತನನ್ನು ನ್ಯಾಯಾಲಯ ನಿರಪರಾಧಿ ಎಂದು ಆರೋಪ ಮುಕ್ತಗೊಳಿಸಿತ್ತು..  ಅಲ್ಲದೆ ಅದೇ ತೀರ್ಪಿನಲ್ಲಿ

ಒಂದು ಕಡೆ ನ್ಯಾಯಾಧೀಶರು ತೀರ್ಪು ನೀಡೋದಿಕ್ಕೂ ಮೊದಲು ವ್ಯಕ್ತಪಡಿಸಿದ್ದ ಅಭಿಪ್ರಾಯ ಹೀಗಿತ್ತು.. ಸಂಪೂರ್ಣವಾಗಿ, ಈ ಅಪರಾಧವನ್ನು ಆರೋಪಿ ಎಸಗಿದ್ದಾನೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಆರೋಪಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಬೇಕಾದ ಸಾಂದರ್ಭಿಕ ಸಾಕ್ಷ್ಯಗಳು ಕೂಡ ಇಲ್ಲ. ಇಲ್ಲಿ ಮಾಡಿರುವ ಆರೋಪಗಳು ಸಾಬೀತಾಗದೆ ಉಳಿದಿವೆ. ಪ್ರಕರಣ ನಡೆದ ಗೋಲ್ಡನ್‌ ಅವರ್‌ನಲ್ಲಿ ಸರಿಯಾಗಿ ತನಿಖೆ ನಡೆದಿಲ್ಲ. ವಾಸ್ತವವಾಗಿ ವಜೈನಲ್‌ ಸ್ವಾಬ್‌ ಸಂಗ್ರಹಿಸಿದ ವೈದ್ಯರು, ಪ್ರಾಸಿಕ್ಯೂಷನ್‌ನ ಪ್ರಕರಣವನ್ನು ಕೆಡವಿ ಹಾಕಿದರು.

ಇಂತಹ ಅಂಶಗಳನ್ನು ತೀರ್ಪಿನಲ್ಲಿ ಗಮನಿಸಿದ ನಂತರ ಕರಾವಳಿಯಲ್ಲಿ ಮತ್ತೆ ಸೌಜನ್ಯ ಪರ ಹೋರಾಟ ಶುರುವಾಗಿತ್ತು.. ಆದ್ರೆ ಆಳುವ ಸರ್ಕಾರ ಜನರ ನಡುವಿನ ಹೋರಾಟವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.. ಪ್ರಕರಣವನ್ನು ಮರುತನಿಖೆ ನಡೆಸಬೇಕು.. ನಿಜವಾದ ಆರೋಪಿಗಳ ಪತ್ತೆಯಾಗಬೇಕು ಎಂಬ ಹೋರಾಟವನ್ನು ಸೌಜನ್ಯ ಪರ ಹೋರಾಟಗಾರರು ನಿಲ್ಲಿಸಲಿಲ್ಲ.. ಇದರಿಂದಾಗಿಯೇ ಈಗ ಹೋರಾಟವನ್ನು ರಾಜಕೀಯದ ಅಸ್ತ್ರವಾಗಿ ಪ್ರಯೋಗಿಸಲು ಸೌಜನ್ಯ ಪರ ಹೋರಾಟಗಾರರು ನಿರ್ಧರಿಸಿದರು. ಕಳೆದ ಹತ್ತು ತಿಂಗಳಿಂದ ತಾವು ನಡೆಸುತ್ತಾ ಬಂದಿದ್ದ ಹೋರಾಟ ಅರಣ್ಯರೋಧನ ಆಗಬಾರದು ಎಂಬ ನಿರ್ಧಾರಕ್ಕೆ ಬಂದಿದ್ದ ಹೋರಾಟಗಾರರು ಈಗ ನೋಟಾದ ಅಭಿಯಾನ ನಡೆಸುತ್ತಿದ್ದಾರೆ.. ಇದಕ್ಕೀಗ ಕರಾವಳಿಯಲ್ಲಿ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ..  ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ಜಿದ್ದಾಜಿದ್ದಿಯ ನಡುವೆ ನೋಟಾ ಮತಗಳು ಹಿಂದೆಂದಿಗಿಂತ ದೊಡ್ಡ ಸಂಖ್ಯೆಯಲ್ಲಿ ಚಲಾವಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.. ವಿಶೇಷವಾಗಿ ಈ ನೋಟಾ ಅಭಿಯಾನ ಕರಾವಳಿಯಲ್ಲಿ ಬಿಜೆಪಿ ಸಾಧಿಸಿರುವ ಅಧಿಪತ್ಯಕ್ಕೂ ಹೊಡೆತ ನೀಡುವ ಲಕ್ಷಣಗಳು ಗೋಚರಿಸುತ್ತಿವೆ.. ಬಹುತೇಕ ನೋಟಾ ಚಲಾವಣೆಯ ಅಭಿಯಾನದಲ್ಲಿರುವವರು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ.. ಇವರಲ್ಲಿ ಹೆಚ್ಚಿನವರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ.. ಹಾಗಿದ್ದರೂ 2012ರ ಅಕ್ಟೋಬರ್‌ 09ರಂದು ನಾಪತ್ತೆಯಾಗಿ ಮಾರನೆಯ ದಿನ ಭೀಭತ್ಸ ಕೃತ್ಯದಿಂದ ಶವವಾಗಿ ಪತ್ತೆಯಾದ ಸೌಜನ್ಯ ಪ್ರಕರಣದ ವಿಚಾರದಲ್ಲಿ ಬಿಜೆಪಿ ಆರಂಭದಿಂದಲೂ ಎಡವಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎನ್ನುವ ಕೂಗಿಗೆ ಆಗ 2013ರಲ್ಲಿ ಸ್ಪಂದಿಸಿದ್ದು ಆಗಿನ ಸಿದ್ದರಾಮಯ್ಯ ಸರ್ಕಾರ. ಆದರೆ 2023ರಲ್ಲಿ ತೀರ್ಪು ಹೊರಬಿದ್ದ ಮೇಲೆ ಕಾಂಗ್ರೆಸ್‌ ಸರ್ಕಾರ ಕೂಡ ಪ್ರಕರಣದ ಮರುತನಿಖೆಯ ಒತ್ತಾಯಕ್ಕೆ ಮಣಿದಿಲ್ಲ.. ಕರಾವಳಿಯಲ್ಲಿ ನಡೆದ ಸೌಜನ್ಯ ಪರ ವಿರುದ್ಧದ ಹೋರಾಟಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರೂ ಕಾಣಿಸಿಕೊಂಡಿದ್ದರು.. ಹೀಗಾಗಿ ಈ ಬಾರಿ ಸಿಟ್ಟು ಎರಡೂ ಪಕ್ಷಗಳ ವಿರುದ್ಧವೂ ಇದ್ದೇ ಇದೆ.. ಆದರೆ ನೋಟಾಗೆ ಎಷ್ಟೇ ವೋಟು ಬಿದ್ದರೂ ಸಂಸದರಾಗಿ ಆಯ್ಕೆಯಾಗುವವರು ಬಿಜೆಪಿ ಅಥವಾ ಕಾಂಗ್ರೆಸ್‌ನವರೇ ಆಗಿರಬಹುದು.. ಹಾಗಿದ್ದರೂ ಈ ನೋಟಾ ಎನ್ನುವುದು ಕರಾವಳಿ ಜನರ ಆಕ್ರೋಶದ ಪ್ರತೀಕವಾಗಿ ರಾಜಕೀಯದ ಅಧ್ಯಾಯದಲ್ಲೂ ದಾಖಲಾಗಲಿದೆ.. ಇಲ್ಲಿ ನೋಟಾ ಮತ ಎಷ್ಟೇ ಬರಲಿ ಬಿಡಲಿ.. ಸೌಜನ್ಯಗೆ ನ್ಯಾಯ ಸಿಗಬೇಕಿದೆ.. ಆ ಹೆಣ್ಣುಮಗಳ ಮೇಲೆ ಮೃಗಗಳಂತೆ ಎರಗಿದ ಕಾಮ ಕ್ರಿಮಿಯನ್ನು ಪತ್ತೆಹಚ್ಚಿ ಶಿಕ್ಷಿಸಲೇಬೇಕು ಎನ್ನುವುದು ಮನುಷ್ಯತ್ವ ಇರುವ ಎಲ್ಲರ ಒತ್ತಾಯ..

Sulekha

Leave a Reply

Your email address will not be published. Required fields are marked *