ಚಹಾ ಕೊಟ್ಟಿಲ್ಲ ಅಂತಾ ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟು ಹೊರಟ ವೈದ್ಯರು!

ಚಹಾ ಕೊಟ್ಟಿಲ್ಲ ಅಂತಾ ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟು ಹೊರಟ ವೈದ್ಯರು!

ರೋಗಿಗಳ ಪಾಲಿಗೆ ವೈದ್ಯರೇ ಜೀವನಧಾತರು. ಭುಜದ ಮೇಲೆ ಕೈಯಿಟ್ಟು, ನಿಮಗೇನು ಆಗಿಲ್ಲ.. ನೀವು ಬೇಗ ಹುಷಾರು ಆಗ್ತೀರಿ ಅಂತಾ ಹೇಳಿದ್ರೆ ಸಾಕು.. ರೋಗಿಯಲ್ಲಿ ಆತ್ಮವಿಶ್ವಾಸ ಚಿಗುರುತ್ತೆ. ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಚಿಂತೆ ನಿಧಾನಕ್ಕೆ ದೂರವಾಗುತ್ತದೆ. ಆದ್ರೆ ಇಲ್ಲೊಬ್ಬ ವೈದ್ಯರ ವರ್ತನೆ ಎಲ್ಲರನ್ನೂ ಚಿಂತೆಗೆ ದೂಡುವಂತೆ ಮಾಡಿದೆ.. ಜೀವ ಉಳಿಸಬೇಕಾದ ವೈದ್ಯರೇ ಹೀಗೆ ಮಾಡಿದ್ರೆ ಹೇಗೆ ಅಂತಾ ಎಲ್ಲರೂ ಪ್ರಶ್ನೆ ಮಾಡುವಂತಾಗಿದೆ. ಇದಕ್ಕೆ ಕಾರಣ ನಾಗ್ಪುರದಲ್ಲಿ ನಡೆದ ಘಟನೆ. ರೋಗಿಯ ಶಸ್ತ್ರಚಿಕಿತ್ಸೆಗೂ ಮುನ್ನ ಟೀ ಕೊಟ್ಟಿಲ್ಲ ಅಂತಾ ಶಸ್ತ್ರಚಿಕಿತ್ಸೆಯನ್ನೇ ಅರ್ಧದಲ್ಲಿ ನಿಲ್ಲಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಮಹಿಳೆಯೊಬ್ಬಳು ಕುಟುಂಬ ಯೋಜನೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲೆಂದು ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಮಹಿಳೆ ಪ್ರಜ್ಞೆತಪ್ಪಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚಹಾ ಹಾಗೂ ಬಿಸ್ಕತ್ತು ಕೇಳಿದ್ದಾರೆ. ಆದರೆ ಚಹಾ ಹಾಗೂ ಬಿಸ್ಕತ್ತು ವೈದ್ಯರಿಗೆ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವೈದ್ಯರು ಚಹಾ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ ಎಂದು ಆಸ್ಪತ್ರೆಯಿಂದ ಹೊರನಡೆದಿದ್ದಾರೆ.

ಇದನ್ನೂ ಓದಿ: ಚಿಂದಿ ಆಯುವ ವ್ಯಕ್ತಿಗೆ ಬಂಪರ್‌! – ರಸ್ತೆ ಬದಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಬ್ಯಾಗ್‌ ನಲ್ಲಿತ್ತು 30 ಲಕ್ಷ ರೂಪಾಯಿ!

ನವೆಂಬರ್ 3 ರಂದು ಮೌಡಾ ತಾಲೂಕಿನ ಖಾತ್​ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ವೈದ್ಯರ ಹೆಸರು ಭಾಲವಿ. ಒಟ್ಟು ನಾಲ್ಕು ಮಹಿಳೆಯರಿಗೆ ಆ ಸಂದರ್ಭದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಚಹಾ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡು ಆಸ್ಪತ್ರೆಯಿಂದ ಹೊರನಡೆದಿದ್ದ ವೈದ್ಯರು ಆಸ್ಪತ್ರೆಗೆ ವಾಪಸಾಗಿಲ್ಲ. ಮಹಿಳೆಯರ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಮತ್ತೊಬ್ಬ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಆ ವೈದ್ಯರೇ ಮಾತನಾಡಿದ್ದಾರೆ. ನನಗೆ ಮಧುಮೇಹವಿದೆ, ಸಮಯಕ್ಕೆ ಸರಿಯಾಗಿ ಚಹಾ, ಬಿಸ್ಕತ್ತು ಬೇಕಾಗುತ್ತದೆ. ಇದರಿಂದ ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ, ಹಾಗಾಗಿ ಆಸ್ಪತ್ರೆಯಿಂದ ಹೊರನಡೆಯಬೇಕಾಯಿತು ಎಂದು ವೈದ್ಯರು ತನ್ನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ.

ವೈದ್ಯರು ಹೊರ ನಡೆಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಜಯ್ ದಾವ್ಲೆ ವಿಚಾರಣೆಗೆ ಮೌಖಿಕ ಆದೇಶ ನೀಡಿದ್ದಾರೆ. ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಗುರುವಾರ ವರದಿ ಬರುವ ನಿರೀಕ್ಷೆ ಇದೆ.

ಇನ್ನು ವೈದ್ಯರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವೈದ್ಯರ ಈ ನಡವಳಿಕೆ ವಿರುದ್ದ ಅಲ್ಲಿನ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಸೌಲಭ್ಯಗಳ ಕೊರತೆ ಇದೆ ಈ ನಡುವೆ ವೈದ್ಯರು ಹೀಗೆ  ನಡೆದುಕೊಂಡಿರುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ.

Shwetha M