ರಾಮಜನ್ಮಭೂಮಿಯಲ್ಲಿ ಬಾಲರಾಮನಷ್ಟೇ ಅಲ್ಲ ಗಣಪತಿ ಕೆತ್ತಿದ್ದೂ ಕನ್ನಡಿಗನೇ – ಹೊನ್ನಾವರದ ಶಿಲ್ಪಿಗೂ ಸಿಕ್ಕಿದೆ ಗೌರವ!
ಅಯೋಧ್ಯೆಯ ರಾಮಜನ್ಮಭೂಮಿಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಇಡೀ ದೇಶದ ಜನರು ಶ್ರದ್ಧಾಭಕ್ತಿಯಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಕರ್ನಾಟಕದ ಅರುಣ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾನ ವಿಗ್ರಹ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಠೆಗೆ ಆಯ್ಕೆ ಆಗಿದೆ. ಸಹಜವಾಗಿಯೇ ಇದರಿಂದ ಇಡೀ ಕರ್ನಾಟಕ ಹೆಮ್ಮೆ ಪಡುತ್ತಿದೆ. ಇದರ ನಡುವೆ ಇದೀಗ ಮತ್ತೊಬ್ಬ ಶಿಲ್ಪಿಯ ಕೆತ್ತನೆಯಲ್ಲಿ ಮೂಡಿಬಂದಿರುವ ಮೂರ್ತಿ ರಾಮಮಂದಿರದಲ್ಲಿ ಇರಲಿದೆ. ಇದು ರಾಮನದ್ದಲ್ಲ. ಗಣಪತಿಯದ್ದು. ಹೊನ್ನಾವರ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಕೆತ್ತನೆಯ ಗಣಪತಿ ಮೂರ್ತಿ ಈಗ ಅಯೋಧ್ಯೆಯಲ್ಲಿ ಸ್ಥಾಪನೆಯಾಗುತ್ತಿದೆ. ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾನದ ವೇಳೆ ಅಯೋಧ್ಯೆಯ ರಾಮಮಂದಿರದಲ್ಲಿ ಈ ಶಿಲ್ಪ ಕಲಾಕೃತಿ ಸ್ಥಾಪನೆಯಾಗುತ್ತಿದೆ.
ಇದನ್ನೂ ಓದಿ: ಕಳಶ ಇಲ್ಲ.. ಶಿಖರ ಇಲ್ಲ! – ಪ್ರಾಣಪ್ರತಿಷ್ಠಾಪನೆಯೇ ತಪ್ಪಾ? ಮೋದಿಗೆ ಶಂಕರಾಚಾರ್ಯರ ಬಹಿಷ್ಕಾರ?
ಗಣಪತಿ ಮೂರ್ತಿ ಕೆತ್ತಿದ ವಿನಾಯಕ ಯುವಶಿಲ್ಪಿ ಅರುಣ್ ಯೋಗಿರಾಜ್ ರೀತಿಯಲ್ಲಿಯೇ ಹೊನ್ನಾವರದ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಇನ್ನೂ ಯುವಕ. ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಗಣಪತಿ ವಿಗ್ರಹ ಈ ವಿನಾಯಕ ಗೌಡ ಕೆತ್ತಿದ್ದಾರೆ. ಇದೇ ವಿಗ್ರಹ ಇದೀಗ ರಾಮಮಂದಿರದ ಇರಿಸಲಾಗುವ ದೇವತೆಗಳಲ್ಲಿ ಒಂದಾಗಿರಲಿದೆ. ಇದೂ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವಿನಾಯಕ ಅವರು ಹೆಚ್ಚಿನ ಶಿಕ್ಷಣ ಹೊಂದಿಲ್ಲ. ಮೊದಲಿಗೆ ಅವರು ಒಂದು ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಕಲೆಯ ಮೇಲೆ ಅತೀವ ಉತ್ಸಾಹವಿತ್ತು. ಹೀಗಾಗಿ ತಮ್ಮ ಆಸಕ್ತಿಯಲ್ಲಿಯೇ ಮುಂಧುವರೆಯಲು ನಿರ್ಧರಿಸಿದ ಅವರು, ಶಿಲ್ಪಕಲೆಯ ಶಾಸ್ತ್ರಬದ್ಧ ಅಧ್ಯಯನ ನಡೆಸಿದ್ದರು. ಪ್ರಸಿದ್ಧ ಶಿಲ್ಪಿಗಳಾದ ಸುರೇಶ್ ಗುಡಿಗಾರ್ ಮತ್ತು ಅಶೋಕ್ ಗುಡಿಗಾರ್ ಅವರಲ್ಲಿ ವಿನಾಯಕ್ ಶಿಲ್ಪಕಲೆಯನ್ನು ಕಲಿತಿದ್ದಾರೆ.
ಕರ್ನಾಟಕದ ಶಿಲ್ಪಿಯ ಕೈಚಳಕಕ್ಕೆ ಮನ್ನಣೆ
‘ಹುಬ್ಬಳ್ಳಿ ಮೂಲದ ರವೀಂದ್ರ ಆಚಾರ್ ಅವರಿಂದ ಅಯೋಧ್ಯೆಯಲ್ಲಿ ಗಣಪತಿ ವಿಗ್ರಹ ಕೆತ್ತುವ ಅವಕಾಶ ತನಗೆ ದೊರಕಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ವಿನಾಯಕ್ ಅವರು ತಿಳಿಸಿದ್ದಾರೆ. ವರದಿ ಪ್ರಕಾರ, ಅಯೋಧ್ಯೆಯಲ್ಲಿ ಗಣಪತಿ ಮೂರ್ತಿ ಕೆತ್ತಲು ನನಗೆ ಅವಕಾಶ ಸಿಕ್ಕಲು ರವೀಂದ್ರ ಆಚಾರ್ ಅವರೇ ಕಾರಣ. ಅಲ್ಲದೇ ಈಗಾಗಲೇ ಈ ಗಣಪತಿ ಮೂರ್ತಿ ಪೂರ್ಣಗೊಂಡಿದೆ. ಈ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ವಿನಾಯಕ್ ಸೇರಿದಂತೆ ಕರ್ನಾಟಕದ ಹಲವು ಶಿಲ್ಪಿಗಳು ಅಯೋಧ್ಯೆಯ ರಾಮಮಂದಿರ ನಿರ್ಮಾಣದ ವೇಳೆ ಹಲವು ದೇವಾನುದೇವತೆಗಳ ಮೂರ್ತಿಗಳನ್ನು ಕೆತ್ತಿದ್ದಾರೆ.