ಡಿಗ್ರಿ, ಡಿಪ್ಲೊಮಾ ಪಾಸ್ ಆದವರಿಗೆಲ್ಲಾ ಸಿಗಲ್ಲ ಯುವನಿಧಿ ಹಣ – ಸರ್ಕಾರದ ಭತ್ಯೆ ಪಡೆಯಲು ಬೇಕು ಈ ಮಾನದಂಡಗಳು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದ ವಿಚಾರ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಘೋಷಿಸಿದ ಗ್ಯಾರಂಟಿ ಯೋಜನೆಗಳು. ಪಂಚ ಗ್ಯಾರಂಟಿಗಳ ಮೂಲಕವೇ ಚುನಾವಣಾ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ಬಳಿಕ ಪ್ರಚಂಡ ಗೆಲುವು ಸಾಧಿಸಿತ್ತು. ಸರ್ಕಾರ ರಚನೆ ನಂತ್ರ ಮತದಾರರಿಗೆ ಕೊಟ್ಟ ಮಾತಿನಂತೆಯೇ ಒಂದೊಂದೇ ಯೋಜನೆಗಳನ್ನ ಜಾರಿಗೊಳಿಸಿತ್ತು. ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದ್ದ ಸರ್ಕಾರ ಇದೀಗ ತನ್ನ ಐದನೇ ಹಾಗೂ ಅಂತಿಮ ಸ್ಕೀಂ ಜಾರಿಗೆ ಮುಹೂರ್ತ ಫಿಕ್ಸ್ ಮಾಡಿದೆ. ನಿರುದ್ಯೋಗಿ ಯುವಕರಿಗೆ ಆರ್ಥಿಕ ಬಲ ತುಂಬುವ ಯುವನಿಧಿ ಯೋಜನೆ ಚಾಲನೆಗೆ ದಿನಾಂಕ ನಿಗದಿ ಮಾಡಿದೆ.
ಸರ್ಕಾರ ರಚನೆಯಾಗಿ 7 ತಿಂಗಳ ಬಳಿಕ ಯುವನಿಧಿ ಯೋಜನೆ ಜಾರಿಗೆ ಕಾಲ ಕೂಡಿ ಬಂದಿದೆ. 2024ರ ಜನವರಿ 12ರಂದು ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ ನೀಡೋದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಸ್ಕೀಂ ಲಾಭ ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕವನ್ನೂ ಫಿಕ್ಸ್ ಮಾಡಿದೆ. ಇದೇ ತಿಂಗಳ ಡಿಸೆಂಬರ್ 26 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಸುಮಾರು 5 ಲಕ್ಷ ಅಭ್ಯರ್ಥಿಗಳು ಈ ಪ್ರೋತ್ಸಾಹಧನದ ಸದುಪಯೋಗ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ. ಇನ್ನು ಯುವನಿಧಿ ಹಣ ಅಭ್ಯರ್ಥಿಗಳ ಖಾತೆಗೆ ಯಾವಾಗಿನಿಂದ ಬೀಳಲಿದೆ ಎಂಬುದಕ್ಕೂ ಉತ್ತರ ನೀಡಿದೆ. 2024 ರ ಜನವರಿ ತಿಂಗಳಿಂದಲೇ ಯುವನಿಧಿ ಹಣ ಫಲಾನುಭವಿಗಳ ಖಾತೆಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಯುವನಿಧಿ ಗ್ಯಾರಂಟಿಯು ಪದವೀಧರ ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ನೀಡುವ ಮತ್ತು ಉದ್ಯೋಗ ಸಿಗುವವರೆಗೂ ನೆರವು ನೀಡುವ ಉದ್ದೇಶ ಹೊಂದಿದೆ. ಆದ್ರಿಲ್ಲಿ ಸರ್ಕಾರದ ಯೋಜನೆ ಅಂತಾ ಯಾರು ಬೇಕಾದ್ರೂ ಅರ್ಜಿ ಸಲ್ಲಿಸೋಕೆ ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಯುವನಿಧಿ ಯೋಜನೆಯ ಹಣ ಸಿಗೋದಿಲ್ಲ. ಯಾಕಂದ್ರೆ ಅದಕ್ಕೆ ಒಂದಷ್ಟು ಮಾನದಂಡಗಳಿವೆ.
ಇದನ್ನೂ ಓದಿ : ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ರಾಹುಲ್ ಗತಿ ಏನು – ಕಾಂಗ್ರೆಸ್ ನಾಯಕನ ವಿರುದ್ಧ ಇರುವ ಆರೋಪಗಳೆಷ್ಟು..?
ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆ ಲಾಭ ಅನ್ವಯವಾಗಲಿದೆ. ಅದ್ರಲ್ಲೂ 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ. ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂಪಾಯಿ ನೀಡಲಾಗುತ್ತದೆ. ಹಾಗೇ ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ. ಹಾಗೂ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗಲಿದೆ. ಯಾವುದಾದ್ರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ. ಇನ್ನು ಈ ಯೋಜನೆಯ ಷರತ್ತುಗಳನ್ನ ನೋಡೋದಾದ್ರೆ ಸೇವಾ ಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಮಾಡಿದರೆ ಸಾಕಾಗುತ್ತದೆ. ಆದ್ರೆ ಕೆಲಸ ಇದ್ದರೂ ಸುಳ್ಳು ಹೇಳುವಂತಿಲ್ಲ. ಪ್ರತಿ ಫಲಾನುಭವಿಗೆ 2 ವರ್ಷಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿರುತ್ತೆ. ಹಾಗೇನಾದ್ರೂ ನೀವು ಉದ್ಯೋಗ ದೊರೆತ ನಂತರವೂ ಭತ್ಯೆ ಪಡೆಯುತ್ತಿದ್ದರೆ ದಂಡ ವಿಧಿಸಲಾಗುತ್ತದೆ.
ಡಿಗ್ರಿ ಹಾಗೂ ಡಿಪ್ಲೊಮಾ ಪದವಿಧರರಿಗೆ ಸರ್ಕಾರದಿಂದ ಯೋಜನೆಯ ಲಾಭ ಸಿಗಲಿದೆ ಅನ್ನೋದೇನೋ ನಿಜ. ಆದ್ರೆ ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರಿಗೆ ಈ ಲಾಭ ಸಿಗೋದಿಲ್ಲಕ್ಕ. ಹಾಗೇ ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು ಕೂಡ ಇದರ ಲಾಭ ಪಡೆಯೋಕೆ ಸಾಧ್ಯವಾಗಲ್ಲ. ಹಾಗೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅಥವಾ ನೀವೇನಾದ್ರೂ ಸರ್ಕಾರದ ಬೇರೆ ಬೇರೆ ಸ್ಕೀಮ್ಗಳ ಅಡಿಯಲ್ಲಿ ಅಥವಾ ಬ್ಯಾಂಕ್ ಸಾಲ ಪಡೆದುಕೊಂಡು ಸ್ವಯಂ ಉದ್ಯೋಗ ಶುರು ಮಾಡಿದ್ರೂ ನಿಮಗೆ ಯುವನಿಧಿ ಹಣ ಸಿಗೋದಿಲ್ಲ